ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸುಧಾರಣೆ ಕುರಿತು ಚರ್ಚೆ ಅಗತ್ಯ: ಸ್ಪೀಕರ್‌ ಕಾಗೇರಿ

Last Updated 29 ಜನವರಿ 2022, 15:40 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಗಳಲ್ಲಿ ಜಾತಿ, ಹಣಬಲ, ತೋಳ್ಬಲಗಳ ಪ್ರಭಾವ ಮತ್ತು ಪಕ್ಷಾಂತರದಿಂದ ಪ್ರಜಾಪ್ರಭುತ್ವ ದುರ್ಬಲಗೊಳ್ಳುವ ಅಪಾಯವಿದೆ. ಚುನಾವಣಾ ವ್ಯವಸ್ಥೆಯ ಸುಧಾರಣೆ ಕುರಿತು ಸಮಾಜದ ಎಲ್ಲ ಹಂತಗಳಲ್ಲಿ ಚರ್ಚೆ ನಡೆಯಬೇಕಿದೆ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿನ ಲೋಪದೋಷಗಳು ನೈತಿಕ ಅಧಃಪತನಕ್ಕೆ ದಾರಿಯಾಗಲಿವೆ. ಈ ಕುರಿತು ಜನರು ಮೌನ ತಾಳುವುದು ಅಪಾಯಕಾರಿ. ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಮೌನಕ್ಕೆ ಶರಣಾಗಿದ್ದಾರೆ. ಎಲ್ಲರೂ ಮೌನ ಮುರಿದು ಚುನಾವಣಾ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕಿದೆ. ಇದಕ್ಕಾಗಿ ಸಮಾಜದ ಮೂಲೆ ಮೂಲೆಯಲ್ಲೂ ಚರ್ಚೆ ಆರಂಭವಾಗಬೇಕು. ಇಂತಹ ಚರ್ಚೆಗೆ ವೇದಿಕೆ ಕಲ್ಪಿಸಲು ನಾವು ಸಿದ್ಧ’ ಎಂದರು.

ಚುನಾವಣಾ ವ್ಯವಸ್ಥೆಯಲ್ಲಿನ ಲೋಪದೋಷಗಳ ವಿರುದ್ಧ ಬಲವಾದ ಜನಾಭಿಪ್ರಾಯ ರೂಪುಗೊಳ್ಳಬೇಕು. ಯುವಕರನ್ನೂ ಒಳಗೊಂಡು ಈ ಚರ್ಚೆ ನಡೆಯುವಂತಾಗಬೇಕು. ವಿಧಾನಮಂಡಲದಲ್ಲೂ ಈ ಬಗ್ಗೆ ಚರ್ಚೆ ಆರಂಭಿಸುವಂತೆ ಶಾಸಕರಿಗೆ ಸಲಹೆ ನೀಡಲಾಗುವುದು. ಚುನಾವಣೆಯಲ್ಲಿ ಈಗ ಕಾಣುತ್ತಿರುವ ದೋಷಗಳಿಗೆ ರಾಜಕಾರಣಿಗಳನ್ನು ಮಾತ್ರ ದೂಷಿಸಿದರೆ ಪ್ರಯೋಜನ ಆಗುವುದಿಲ್ಲ. ಜನರೂ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರಿಯಾಗಿ ಬಳಕೆ ಮಾಡಬೇಕು ಎಂದು ಹೇಳಿದರು.

ತುರ್ತು ಪರಿಸ್ಥಿತಿ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿತ್ತು. ಈಗ ನಿರ್ಮಾಣವಾಗಿರುವ ಕಲುಷಿತ ರಾಜಕೀಯ ವಾತಾವರಣವನ್ನು ಕೊನೆಗೊಳಿಸಲು ಅಂತಹ ಪ್ರಯತ್ನ ಅಗತ್ಯವಿದೆ ಎಂದರು.

ಚುನಾವಣಾ ಆಯೋಗ ಕೂಡ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಅದು ಕೇವಲ ತಾಂತ್ರಿಕವಾಗಿ ಚುನಾವಣೆಗಳನ್ನು ನಡೆಸುವುದಕ್ಕೆ ಸೀಮಿತವಾಗಬಾರದು. ಆಯೋಗವೂ ಈ ಕುರಿತ ಚರ್ಚೆಯನ್ನು ಆರಂಭಿಸಬೇಕು ಎಂದು ಕಾಗೇರಿ ಹೇಳಿದರು.

ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT