ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪತ್ರಿಕೆ ಬದಲು: ವರದಿ ನೀಡಲು ಸೂಚನೆ

Last Updated 18 ಆಗಸ್ಟ್ 2020, 19:17 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತರೀಪುರ ಗ್ರಾಮದ ವಿನಾಯಕ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಅಶ್ವಿನಿ ಅವರ ಉತ್ತರ ಪತ್ರಿಕೆಗಳ ಹಾಳೆಗಳು ಬದಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌, ಈ ಕುರಿತುತಕ್ಷಣ ಪರಿಶೀಲಿಸಿ ವರದಿ ನೀಡುವಂತೆ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.

‘ಪ್ರಜಾವಾಣಿ’ಯ ಮಂಗಳವಾರ ಪ್ರಕಟಗೊಂಡ ‘ಉತ್ತರ ಪತ್ರಿಕೆಯ ಹಾಳೆಗಳೇ ಬದಲು’ ವರದಿಗೆ ಪ್ರತಿಕ್ರಿಯಿಸಿರುವ ಸಚಿವರು, ‘ಇದು ಅತ್ಯಂತ ಗಂಭೀರ ವಿಷಯ. ಇದಕ್ಕೆ ಕಾರಣರಾದವರ ವಿರುದ್ಧ ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದೂ ತಿಳಿಸಿದ್ದಾರೆ.

ಈ ಬಾರಿ ಪರೀಕ್ಷೆಯ ಇಂಗ್ಲಿಷ್‌ ವಿಷಯದಲ್ಲಿ 89 ಅಂಕಗಳನ್ನು ಪಡೆದಿರುವ ಅಶ್ವಿನಿಗೆ, ಕನ್ನಡದಲ್ಲಿ 125ಕ್ಕೆ ಕೇವಲ 4 ಅಂಕಗಳು ಬಂದಿವೆ. ಸಮಾಜ ವಿಜ್ಞಾನದಲ್ಲಿ 7, ಹಿಂದಿ 33, ಗಣಿತ 48 ಹಾಗೂ ವಿಜ್ಞಾನದಲ್ಲಿ 51 ಅಂಕಗಳು ಸಿಕ್ಕಿವೆ.

ಪ್ರತಿಭಾವಂತೆ ಎನಿಸಿಕೊಂಡಿದ್ದ ಈ ವಿದ್ಯಾರ್ಥಿನಿಗೆ ತೀರಾ ಕಡಿಮೆ ಅಂಕಗಳು ಬಂದಿದ್ದರಿಂದ ಅನುಮಾನಗೊಂಡು ಉತ್ತರ ಪತ್ರಿಕೆಗಳ ನಕಲು ಪ್ರತಿ ನೋಡಿದಾಗ ಉತ್ತರ ಪತ್ರಿಕೆಯ ಹಾಳೆಗಳು ಬದಲಾಗಿರುವುದು ಗೊತ್ತಾಗಿತ್ತು.

ಪರೀಕ್ಷಾ ಮಂಡಳಿಗೆ ದೂರು
ಶ್ರೀರಂಗಪಟ್ಟಣ: ತಾಲ್ಲೂಕಿನ ತರೀಪುರ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಎಸ್‌. ಅಶ್ವಿನಿ, ತಮ್ಮ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಹಾಳೆಗಳು ಬದಲಾಗಿವೆ ಎಂದು ಆರೋಪಿಸಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಮಂಗಳವಾರ ದೂರು ನೀಡಿದ್ದಾರೆ.

ತಾಯಿ ಹಾಗೂ ಮಾವನ ಜತೆ ಬೆಂಗಳೂರಿಗೆ ತೆರಳಿ ದೂರು ನೀಡಿರುವ ಅವರು, ‘ಕನ್ನಡ, ವಿಜ್ಞಾನ ಹಾಗೂ ಹಿಂದಿ ವಿಷಯಗಳ ಉತ್ತರ ಪತ್ರಿಕೆಗಳಲ್ಲಿ, ಮೊದಲ ಪುಟ ಹೊರತುಪಡಿಸಿ ಎಲ್ಲ ಹಾಳೆಗಳನ್ನು ಬದಲಿಸಲಾಗಿದೆ. ನನ್ನ ಉತ್ತರ ಪತ್ರಿಕೆ ಕೊಡಿಸಬೇಕು, ಅವುಗಳ ಮೌಲ್ಯ ಮಾಪನ ಮಾಡಿಸಿ ಫಲಿತಾಂಶ ಪ್ರಕಟಿಸಬೇಕು’ ಎಂದು ಕೋರಿದ್ದಾರೆ.

’ಅಶ್ವಿನಿ ಪರೀಕ್ಷೆ ಬರೆದಿರುವ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಮತ್ತು ಅವರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಇನ್ನು ಎರಡು ಮೂರು ದಿನಗಳಲ್ಲಿ ಸತ್ಯಾಂಶ ತಿಳಿಯಲಿದ್ದು, ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು’ ಎಂದು ಅಶ್ವಿನಿ ಅವರ ಮಾವ ಸೋಮು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT