ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭ

Last Updated 28 ಮಾರ್ಚ್ 2022, 7:22 IST
ಅಕ್ಷರ ಗಾತ್ರ

ಬೆಂಗಳೂರು: ಹಿಜಾಬ್‌ ಹಾಗೂ ಸಮವಸ್ತ್ರಕ್ಕೆ ಸಂಬಂಧಿಸಿದ ಗೊಂದಲಗಳ ನಡುವೆ ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇಂದಿನಿಂದ (ಮಾ.28) ಆರಂಭವಾಗಿವೆ.

8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 4,52,732 ಬಾಲಕರು, 4,21,110 ಬಾಲಕಿಯರು, ನಾಲ್ವರು ತೃತೀಯ ಲಿಂಗಿಗಳು, 4,618 ಪುನರಾವರ್ತಿತ ಅಭ್ಯರ್ಥಿಗಳು, 46,200 ಮಂದಿ ಖಾಸಗಿ ಅಭ್ಯರ್ಥಿಗಳು ಇದ್ದಾರೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಹೀಗಾಗಿಹಿಜಾಬ್, ಬುರ್ಖಾಗಳನ್ನು ತೆಗೆದಿಡಲು ಹಲವೆಡೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.

ಕೋವಿಡ್‌ ಭೀತಿಯ ಹಿನ್ನೆಲೆಯಲ್ಲಿವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ, ಥರ್ಮಲ್ ಸ್ಕ್ಯಾನರ್‌ನಲ್ಲಿ ದೇಹದ ಉಷ್ಣಾಂಶ ಪರಿಶೀಲಿಸಿ, ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅವಕಾಶ ನೀಡಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: ಗೊಂದಲ ಇಲ್ಲ
ಉಡುಪಿ
: ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು 14,022 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಮುಸ್ಲಿಂ ವಿದ್ಯಾರ್ಥಿಯರು ಹಿಜಾಬ್ ಧರಿಸದೆ ಶಾಲಾ ಸಮವಸ್ತ್ರದಲ್ಲಿಪರೀಕ್ಷೆ ಬರೆಯುತ್ತಿದ್ದಾರೆ.

ಹಲವು ಕಡೆಗಳಲ್ಲಿ ಮುಸ್ಲಿಂ ಪೋಷಕರು ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಬಿಡುತ್ತಿದ್ದ ದೃಶ್ಯಗಳು ಕಂಡುಬಂತು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ನಗರದ ಬೋರ್ಡ್ ಹೈಸ್ಕೂಲ್‌ಗೆ ಭೇಟಿನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಸೂಚ‌ನೆ
ರಾಮನಗರ:
ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭ ಆಗಿದ್ದು, ಜಿಲ್ಲೆಯಲ್ಲಿನ ಪರೀಕ್ಷಾ‌ ಕೇಂದ್ರಕ್ಕೆ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರು.

ಅಂತಹ ವಿದ್ಯಾರ್ಥಿಗಳು ಹಿಜಾಬ್ ತೆಗೆದಿಟ್ಟು ಪರೀಕ್ಷಾ ಕೊಠಡಿಗೆ ಬರುವಂತೆ ಮೇಲ್ವಿಚಾರಕರು ಸೂಚಿಸಿದರು. ಪ್ರತಿ‌ ಕೊಠಡಿಗೆ ತೆರಳಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಗುರುತಿಸಿ ಹಿಜಾಬ್ ತೆರೆಯುವಂತೆ ಸೂಚಿಸಲಾಯಿತು.

ಜಿಲ್ಲೆಯಲ್ಲಿನ 59 ಕೇಂದ್ರಗಳಲ್ಲಿ 13,505 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಹಿಜಾಬ್ ತೆಗೆದು ಪರೀಕ್ಷೆಗೆಹಾಜರಾದ ವಿದ್ಯಾರ್ಥಿನಿಯರು
ರಾಯಚೂರು
: ಜಿಲ್ಲೆಯಲ್ಲಿ 114 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಮುಸ್ಲಿಂ‌ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಒಟ್ಟು 31,896 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ 16,725 ವಿದ್ಯಾರ್ಥಿಗಳು ಹಾಗೂ 15,171 ವಿದ್ಯಾರ್ಥಿನಿಯರು ಇದ್ದಾರೆ.

ಎಸ್ಸೆಸ್ಸೆಲ್ಸಿ ರೀಕ್ಷೆ ಆರಂಭ
ವಿಜಯಪುರ:
ಜಿಲ್ಲೆಯ 147 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ.

ಜಿಲ್ಲೆಯಲ್ಲಿ 20,932 ಬಾಲಕರು, 17,858 ಬಾಲಕಿಯರು ಸೇರಿದಂತೆ 38,790 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಹಿಜಾಬ್ ಧರಿಸಿ ಬಂದ ಅನೇಕ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದ ಹೊರಗೆ ತೆಗೆದಿಟ್ಟು, ಒಳ ಪ್ರವೇಶಿಸಿದರು.

ಪಾರದರ್ಶಕ, ನಕಲುಮುಕ್ತ ಪರೀಕ್ಷೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ವಿಧಿಸಿದೆ. ಅಗತ್ಯ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 22,226 ವಿದ್ಯಾರ್ಥಿಗಳ ನೋಂದಣಿ
ದಾವಣಗೆರೆ:
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು 22,226 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ.

ಇಲ್ಲಿನ ಮೋತಿ ವೀರಪ್ಪ ಕಾಲೇಜು ಪ್ರೌಢಶಾಲಾ ಶಾಲೆಯಲ್ಲಿ ಹಿಜಾಬ್ ತೆಗೆದಿಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 10 ಗಂಟೆಯವರೆಗೆ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಬಳಿಕ ಅವರು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾದರು.

ಥರ್ಮಲ್‌ ಸ್ಕ್ರೀನಿಂಗ್‌ ಬಳಿಕ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗಳ ಒಳಗೆಬಿಡಲಾಯಿತು.ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ವಿಧಿಸಿದೆ. ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಬೀದರ್‌:ಹಿಜಾಬ್ ಕಳಚಿಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಬೀದರ್:
ಜಿಲ್ಲೆಯ 124 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿಆರಂಭವಾಯಿತು. ಬೀದರ್, ಹುಮನಾಬಾದ್, ಬಸವಕಲ್ಯಾಣ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೂ ಅವರಿಗಾಗಿಯೇ ವ್ಯವಸ್ಥೆ ಮಾಡಿದ್ದ ಕೊಠಡಿಗಳಲ್ಲಿ ಕಳಚಿಟ್ಟು ಕೊಠಡಿಗಳಿಗೆ ತೆರಳಿ ಪರೀಕ್ಷೆ ಬರೆದರು.

ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳ ಹಾಲ್‌ಟಿಕೆಟ್‌ ಹಾಗೂ ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ದೇಹದ ಉಷ್ಣಾಂಶ ಪರಿಶೀಲಿಸಿ ಒಳಗೆ ಬಿಡಲಾಯಿತು. ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಪ್ರವೇಶ ದ್ವಾರದಲ್ಲೇ ತಿಳಿವಳಿಕೆ ನೀಡಿ ಹಿಜಾಬ್‌ ಕಳಚಿ ಪರೀಕ್ಷಾ ಕೊಠಗಳಿಗೆ ತೆರಳುವಂತೆ ಸೂಚಿಸಲಾಯಿತು.

ಜಿಲ್ಲೆಯ 29,772 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಬೀದರ್ ತಾಲ್ಲೂಕಿನಲ್ಲಿ 37, ಔರಾದ್‌ನಲ್ಲಿ 17, ಬಸವಕಲ್ಯಾಣ 25, ಭಾಲ್ಕಿ 18 ಹಾಗೂ ಹುಮನಾಬಾದ್ ತಾಲೂಕಿನಲ್ಲಿ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕೇಂದ್ರಗಳ ಬಳಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ದಕ್ಷಿಣ ಕನ್ನಡ​: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ
ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ 99 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಆರಂಭವಾಗಿದೆ.

ಒಟ್ಟು 29,712 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 15,615 ಬಾಲಕರು ಮತ್ತು 14,097 ಬಾಲಕಿಯರು ಇದ್ದಾರೆ. ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಎಲ್ಲ ಕೇಂದ್ರಗಳಲ್ಲಿ ಪರೀಕ್ಷಾ ಪೂರ್ವ ಸ್ಯಾನಿಟೈಸ್ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪರೀಕ್ಷಾ ಕೊಠಡಿಗೆ ಕಳುಹಿಸಲಾಯಿತು. ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಸುಧಾಕರ್ ಕೆ. ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ. ಹೀಗಾಗಿ ಅಂತಹ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ತೆರಳಿದರು.

ಮಾ.28 ಮತ್ತು ಮಾ.29 ರಂದು ಕೇರಳದಲ್ಲಿ ಪ್ರತಿಭಟನೆ ಇರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ಕಾಸರಗೋಡಿನ ಮಕ್ಕಳ ಅನುಕೂಲಕ್ಕಾಗಿ ಆ ದಿನಗಳಲ್ಲಿ ಗಡಿಯಿಂದ ವಿಶೇಷ ವಾಹನ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಂಡೋಪೀಡಿತ ಐವರು ಅಭ್ಯರ್ಥಿಗಳಿಗೆ ಅನುಕೂಲ ಆಗುವಂತೆ ರಾಮಕುಂಜದಲ್ಲಿ ವಿಶೇಷ ಉಪ‌ಕೇಂದ್ರ ತೆರೆದು ಅಲ್ಲಿ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದ ಕಾರಣ, ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೇ ಪರೀಕ್ಷಾ ಕೊಠಡಿಗಳಿಗೆ ತೆರಳಿದರು. ಯಾವುದೇ ಗೊಂದಲ ಆಗಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲಾದ್ಯಂತ ಶಾಂತಿಯುತವಾಗಿ ಪರೀಕ್ಷೆ ಪ್ರಾರಂಭ
ಯಾದಗಿರಿ: ಸೋಮವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌., ನಗರದ ಪದವಿ ಪೂರ್ವ ಕಾಲೇಜು ಆವರಣದ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು.

ನಂತರ‌ ಮಾತನಾಡಿದ ಅವರು, ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತಯುತವಾಗಿ ನಡೆದಿದ್ದು, ಸದ್ಯಕ್ಕೆ ಹಿಜಾಬ್ ಧರಿಸಿ ಪರೀಕ್ಷೆ ನಿರಾಕರಿಸಿರುವ ಘಟನೆ ತಿಳಿದುಬಂದಿಲ್ಲ ಎಂದರು.

ಖಾಸಗಿ ಶಾಲೆಗಳಲ್ಲಿ ಹಿಜಾಬ್ ಸಮವಸ್ತ್ರ ಇರುವ ಕಡೆಗಳಲ್ಲಿಯೂ ಹಿಜಾಬ್ ತೆಗೆಯುವಂತೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸುರಪುರ ತಾಲ್ಲೂಕಿನ ಕೆಂಭಾವಿ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಎಲ್ಲೆಡೆ ಶಾಂತಿಯುತವಾಗಿ ಪರೀಕ್ಷೆ ನಡೆದಿದೆ ಎಂದರು.

ಹಿಜಾಬ್ ವಿವಾದ ಹೈಕೋರ್ಟ್‌ನಲ್ಲಿ‌ ವಿಚಾರಣೆ ನಡೆಯುವ ಸಂದರ್ಭದಲ್ಲಿ, ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗದೇ ವಾಪಸ್ ತೆರಳಿದ್ದನ್ನು ಸ್ಮರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT