ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ: ಹಿಜಾಬ್‌ ಕಳಚಿಟ್ಟು ಹಾಜರಿ

ಹಿಜಾಬ್‌ ಕಳಚಿಟ್ಟು ಪರೀಕ್ಷೆ ಬರೆದರು; ನಿರಾಕರಿಸಿದ ಓರ್ವ ವಿದ್ಯಾರ್ಥಿನಿ ಗೈರು
Last Updated 28 ಮಾರ್ಚ್ 2022, 21:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ (2021–22) ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಸೋಮವಾರ ಆರಂಭವಾಗಿದ್ದು, ಹಿಜಾಬ್‌– ಸಮವಸ್ತ್ರದ ಗೊಂದಲ ಮಧ್ಯೆಯೂ ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಶಾಲಾ ಸಮವಸ್ತ್ರ ಮಾತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾ
ಗಿತ್ತು. ಹೀಗಾಗಿ, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಅದನ್ನು ಕಳಚಿಡಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ಹಿಜಾಬ್ ವಿವಾದದ ಕಾರಣ ಪರೀಕ್ಷಾ ಕೇಂದ್ರಗಳ ‌ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ಕೆಲವು ಕಡೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಪೊಲೀಸರು, ಶಿಕ್ಷಕರು ಹಾಗೂ ಪರೀಕ್ಷಾ ಮೇಲ್ವಿಚಾರಕರುಮನವೊಲಿಸಿದ ಬಳಿಕ ಅದನ್ನು ಕಳಚಿಟ್ಟು ಪರೀಕ್ಷೆಗೆ ಹಾಜರಾದರು.

ಆದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್‍ನಲ್ಲಿ ಮನವೊಲಿಕೆಗೂ ಒಪ್ಪದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆಯದೆ ಮನೆಗೆ ಮರಳಿದಳು. ‘ಹಿಜಾಬ್ ತೆಗೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅದು ಇಸ್ಲಾಂನ ಅತ್ಯಗತ್ಯ ಭಾಗ. ತೆಗೆಯಲೇಬೇಕೆಂದರೆ ನಾನು ಪರೀಕ್ಷೆ ಬರೆಯುವುದಿಲ್ಲ’ ಎಂದು ಮನೆಯಲ್ಲಿಯೇ ಬರೆದು ತಂದಿದ್ದ ಪತ್ರವನ್ನು ಮುಖ್ಯ ಅಧೀಕ್ಷಕರಿಗೆ ನೀಡಿ ಪರೀಕ್ಷಾ ಕೇಂದ್ರದಿಂದ ಮರಳಿದಳು. ಈ ಬಗ್ಗೆ ಪ್ರತಿಕ್ರಿಯಿಸಲು ಪೋಷಕರು ನಿರಾಕರಿಸಿದರು.

ದಾವಣಗೆರೆ ಜಿಲ್ಲೆ ಸಾಸ್ವೆಹಳ್ಳಿ ಹೋಬಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 25 ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಟೋಪಿ ಧರಿಸಿದ್ದ ಐವರು ವಿದ್ಯಾರ್ಥಿಗಳು ಅವುಗಳನ್ನು ತೆಗೆದು ಪರೀಕ್ಷೆಗೆ ಹಾಜರಾದರು.

ಶಿವಮೊಗ್ಗದ ಕಸ್ತೂರಬಾ ಪ್ರೌಢಶಾಲೆ ಮತ್ತು ಹುಬ್ಬಳ್ಳಿಯ ಶಾಂತಿನಿಕೇತನ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ತೆಗೆಯಲು ನಿರಾಕರಿಸಿ ಮನೆಗೆ ಮರಳಿದ್ದರು. ಆದರೆ, ಬಳಿಕ ಶಾಲಾ ಸಮವಸ್ತ್ರ ಧರಿಸಿ ಹಾಜರಾದರು.

ಶಿಕ್ಷಣ ಸಚಿವರ ತವರು ಕ್ಷೇತ್ರ ತಿಪಟೂರು ನಗರದ ಸರ್ಕಾರಿ‌ ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ 15 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಸಿಬ್ಬಂದಿ ಯಾವುದೇ ಸೂಚನೆ ನೀಡದ ಕಾರಣ ಪರೀಕ್ಷಾ ಕೇಂದ್ರದ ಒಳಗೂ ಹಿಜಾಬ್ ಧರಿಸಿ ಪ್ರವೇಶಿಸಿದ್ದರು. ಆದರೆ, ಪರೀಕ್ಷಾ ಕೇಂದ್ರದ ಮುಖ್ಯ ಅಧಿಕಾರಿ ಕೊಠಡಿಗಳಿಗೆ ತೆರಳಿ ಸೂಚನೆ ನೀಡಿದ ಬಳಿಕ ಹಿಜಾಬ್ ತೆಗೆದರು‌.

ಕೋವಿಡ್ ಮಾರ್ಗಸೂಚಿ ಅನ್ವಯ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್ ಸಿಂಪಡಿಸಿ, ಥರ್ಮಲ್ ಸ್ಕ್ಯಾನರ್‌ನಲ್ಲಿ ದೇಹದ ಉಷ್ಣಾಂಶ ಪರಿಶೀಲಿಸಲಾಯಿತು.

ಹೆಜ್ಜೇನು ದಾಳಿ: ಶಿವಮೊಗ್ಗದ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಆವರಣದಲ್ಲಿರುವ ಮೇರಿ ಇಮ್ಯಾಕ್ಯುಲೇಟ್ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ ನಡೆಸಿದ್ದು, 12 ಪೋಷಕರು, ಐವರು ವಿದ್ಯಾರ್ಥಿಗಳಿಗೆ ಕಚ್ಚಿದವು. ಆರೋಗ್ಯ ಸಿಬ್ಬಂದಿ ತಕ್ಷಣ ಸ್ಥಳದಲ್ಲೇ ಚಿಕಿತ್ಸೆ ನೀಡಿ ಪರೀಕ್ಷೆ ಬರೆಯಲು ಸಹಕರಿಸಿದರು. ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾದ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಲಾಯಿತು.

ಆರು ನಕಲಿ ಅಭ್ಯರ್ಥಿಗಳು ವಶಕ್ಕೆ:

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಆರ್‌.ಡಿ. ಕಾಲೇಜು ಕೇಂದ್ರದಲ್ಲಿ ಅಸಲಿ ವಿದ್ಯಾರ್ಥಿಗಳ ಪರ ಪರೀಕ್ಷೆ ಬರೆಯಲು ಬಂದಿದ್ದ ಯುವತಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಗೋಕಾಕ ತಾಲ್ಲೂಕು ಗೋಡಗೇರಿಯ ರಾಹುಲ್ ಕಿಳ್ಳಿಕೇತರ, ಕೊಂಕಣಿವಾಡಿಯ ಭೀಮಶಿ ಹುಲಿಕುಂದ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕೊಪ್ಪ ಎಸ್‍.ಕೆ. ಗ್ರಾಮದ ಕಾರ್ತಿಕ್ ಕುಂಬಾರ್, ಚಿಕ್ಕಾಲಕೊಪ್ಪ ಗ್ರಾಮದ ಸಿದ್ದು ಜೋಗಿ, ಗಿರಸಾಗರ ಗ್ರಾಮದ ಮಹಾಂತೇಶ್ ಡೊಳ್ಳಿನವರ ಮತ್ತು ಬಾಗಲಕೋಟೆ ಜಿಲ್ಲೆ ಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮದ ಸವಿತಾ ಹೊಸೂರು ಸಿಕ್ಕಿಬಿದ್ದವರು.

ವಿದ್ಯಾರ್ಥಿ ಡಿಬಾರ್‌: ಮುದ್ದೇಬಿಹಾಳದ ಎನ್.ಎನ್. ಅಭ್ಯುದಯ ಇಂಟರ್‌ನ್ಯಾಷನಲ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಡಿಬಾರ್‌ ಮಾಡಲಾಗಿದೆ.

ಕುಸಿದುಬಿದ್ದು ವಿದ್ಯಾರ್ಥಿನಿ ಸಾವು:

ನೋಂದಣಿ ಸಂಖ್ಯೆಯ ಗೊಂದಲದಿಂದಾಗಿ ಬೇರೊಂದು ಕೇಂದ್ರದ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಅನುಶ್ರೀ (16) ಎಂಬ ವಿದ್ಯಾರ್ಥಿನಿ, 15 ನಿಮಿಷದ ಬಳಿಕ ತನ್ನ ಸಂಖ್ಯೆ ಇದ್ದ ಪರೀಕ್ಷಾ ಕೇಂದ್ರಕ್ಕೆ ಅವಸರದಲ್ಲಿ ತೆರಳುವಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ನಡೆದಿದೆ.

ಈಕೆ ಅಕ್ಕೂರು ಗ್ರಾಮದ ಕೆಂಪರಾಜು ಎಂಬುವವರ ಮಗಳು. ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಪ್ರವೇಶಪತ್ರ ಪರಿಶೀಲಿಸುವಾಗ, ಅನುಶ್ರೀ ಬೇರೆ ಕೊಠಡಿಗೆ ಬಂದು, ಗೈರಾಗಿದ್ದ ವಿದ್ಯಾರ್ಥಿಯ ಸ್ಥಳದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿರುವುದು ಮೇಲ್ವಿಚಾರಕರಿಗೆ ಗೊತ್ತಾಯಿತು. ತಕ್ಷಣ ಅದೇ ಆವರಣದಲ್ಲಿದ್ದ, ಆಕೆ ಪರೀಕ್ಷೆ ಬರೆಯಬೇಕಿದ್ದ ಕೇಂದ್ರಕ್ಕೆ ಆಕೆಯನ್ನು ಸಿಬ್ಬಂದಿ ಕಳುಹಿಸಿಕೊಟ್ಟಿದ್ದರು. ಆ ಕೇಂದ್ರದ ಮೆಟ್ಟಿಲನ್ನು ಹತ್ತುವ ವೇಳೆ ವಿದ್ಯಾರ್ಥಿನಿ ಕುಸಿದುಬಿದ್ದರು ಎಂದು ಮೂಲಗಳು ತಿಳಿಸಿವೆ.

‘‌ವಿದ್ಯಾರ್ಥಿನಿಯನ್ನು ತಕ್ಷಣ ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಪುತ್ರಿಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಪೋಷಕರು ಹೇಳಿದ್ದಾರೆ. ಇಲಾಖೆಯಿಂದ ₹ 1 ಲಕ್ಷ ಪರಿಹಾರ ಘೋಷಿಸಲಾಗಿದೆ. ಗೊಂದಲದ ಬಗ್ಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿಯ ವಿಚಾರಣೆ ನಡೆಸಿ, ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು’ ಎಂದು ಡಿಡಿಪಿಐ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT