ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪಾಸಾದ ಎಲ್ಲರಿಗೂ ಪಿಯುಸಿ ಪ್ರವೇಶ ಲಭ್ಯ: ಸಚಿವ ಸುರೇಶ್ ಕುಮಾರ್‌

Last Updated 22 ಜುಲೈ 2021, 17:39 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಬಾರಿ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಎಸ್ಸೆಸ್ಸೆಲ್ಸಿ ಭಾಷಾ ವಿಷಯಗಳಿಗೆ ಗುರುವಾರ ನಡೆದ ಪರೀಕ್ಷೆಯ ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪಿಯುಸಿ ಕಾಲೇಜುಗಳಲ್ಲಿ ಒಟ್ಟು 12 ಲಕ್ಷ ಸೀಟುಗಳಿವೆ. ಜಿಲ್ಲಾವಾರು ಅಂಕಿಅಂಶಗಳನ್ನು ಸಂಗ್ರಹಿಸಿದ್ದು, ಅದಕ್ಕಾಗಿ ಅಧಿಕಾರಿಗಳ ಸಮನ್ವಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಯಾವುದೇ ಸಂಸ್ಥೆಗಳು ಸೀಟು ಹೆಚ್ಚಳದ ಪ್ರಸ್ತಾವನೆ ಸಲ್ಲಿಸಿದರೆ, ಆ ಬೇಡಿಕೆಯನ್ನು ಪುರಸ್ಕರಿಸಲಾಗುವುದು’ ಎಂದರು.

‘ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 152 ವಿದ್ಯಾರ್ಥಿಗಳು ಭಾಷಾ ವಿಷಯಗಳ ಪರೀಕ್ಷೆ ಬರೆದರು. 10,693 ವಲಸೆ ವಿದ್ಯಾರ್ಥಿಗಳು ತಮಗೆ ಸಮೀಪದ ಪರೀಕ್ಷಾ ಕೇಂದ್ರಗಳನ್ನು ಆರಿಸಿಕೊಂಡಿದ್ದರು. 2,870 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿದ್ದು ಪರೀಕ್ಷೆಗೆ ಹಾಜರಾದರು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಕೇರಳ ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಒಟ್ಟು 706 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು’ ಎಂದರು.

‘ಮೂಳೆ ಸವೆತ ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನ ಕಾವೇರಿಪುರದ ಆರ್‌.ಎ.ಎಸ್ ಕಾನ್ವೆಂಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ. ಮೊದಲ ಪರೀಕ್ಷೆ ಬರೆದು ಕಡಿಮೆ ಅಂಕಗಳು ಬರಬಹುದೆಂಬ ಭೀತಿಯಿಂದ ಅಜ್ಜಿಗೆ ತಂದಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಕೆಂಚನಾಲಾ ಗ್ರಾಮದ ವಿದ್ಯಾರ್ಥಿನಿ ಗುರುವಾರದ ಪರೀಕ್ಷೆಗೆ ಹಾಜರಾಗಿದ್ದಾಳೆ. ಶಿರಸಿ ತಾಲ್ಲೂಕಿನಲ್ಲಿ ಬಸ್ ಸೌಲಭ್ಯವಿಲ್ಲದ ಗ್ರಾಮಗಳ ಮಕ್ಕಳಿಗಾಗಿ ಶಿರಸಿಯ ಮಾರಿಕಾಂಬ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ 25 ಆಟೊ ಮತ್ತು 3 ವ್ಯಾನ್‌ಗಳ ಉಚಿತ ವ್ಯವಸ್ಥೆ ಮಾಡಿ 109 ವಿದ್ಯಾರ್ಥಿಗಳನ್ನು ಕರೆತಂದು ಮತ್ತು ಮನೆಗೆ ವಾಪಸ್ ಕಳಿಸಿ ಔದಾರ್ಯ ತೋರಿದ್ದಾರೆ’ ಎಂದೂ ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT