ಭಾನುವಾರ, ಜೂನ್ 26, 2022
25 °C
ಬಂಧಿತ ಶಿಕ್ಷಕರು ಅತಂತ್ರ

ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮ: ಅಂತಿಮ ಹಂತಕ್ಕೆ ಪೊಲೀಸ್‌ ತನಿಖೆ

ಆರ್‌. ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿಯ ರಂಗನಾಥ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಕೇಂದ್ರದಲ್ಲಿ ನಡೆದ ಪರೀಕ್ಷಾ ಅಕ್ರಮದ ತನಿಖೆಯು ಅಂತಿಮ ಹಂತ ತಲುಪಿದ್ದು, ಪೊಲೀಸರು ದೋಷಾರೋಪ ಪಟ್ಟಿ (ಜಾರ್ಜ್‌ಶೀಟ್‌) ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಕಳೆದ 4 ದಿನದಿಂದ ನಿರಂತರವಾಗಿ ವಿಚಾರಣೆ ನಡೆದಿದ್ದು, ಶುಕ್ರವಾರ ಆರೋಪಿಗಳಾದ ಕೆಂಪೇಗೌಡ ಪ್ರೌಢಶಾಲೆಯ ಪ್ರಾಚಾರ್ಯ ಶ್ರೀನಿವಾಸ, ಕ್ಲರ್ಕ್‌ ರಂಗನಾಥ, ರಂಗನಾಥ ಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಅವರನ್ನು ಕರೆದೊಯ್ದು ಮಾಗಡಿ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿದರು. ರಂಗನಾಥ ಪ್ರೌಢಶಾಲೆಗೆ ತೆರಳಿ, ಅಲ್ಲಿ ಪರೀಕ್ಷಾ ಅಕ್ರಮಕ್ಕೆ ಬಳಸಿದ್ದ ಪ್ರಶ್ನೆಪತ್ರಿಕೆಗಳ ಜೆರಾಕ್ಸ್‌ ಪ್ರತಿ ಪಡೆದರು. ಈಗಾಗಲೇ, ಏಳು ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, ಉಳಿದ ಮೂವರನ್ನೂ ಶುಕ್ರವಾರ ಸಂಜೆ ನ್ಯಾಯಾಂಗದ ವಶಕ್ಕೆ ನೀಡಲಾಯಿತು.

ಪ್ರಮುಖ ಆರೋಪಿಗಳು, ಕೆಲವು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಯನ್ನು ಎದುರು ಬದುರಾಗಿ ಕೂರಿಸಿ ವಿಚಾರಣೆ ನಡೆಸಲಾಗಿದೆ. ಆದರೆ, ಹಣದ ವಿಚಾರ ಎಲ್ಲಿಯೂ ಪ್ರಸ್ತಾವ ಆಗಿಲ್ಲ. ಮಾಗಡಿಯ ಉಳಿದ ಮೂರು ಪರೀಕ್ಷಾ ಕೇಂದ್ರಗಳೂ ಸೇರಿದಂತೆ ಜಿಲ್ಲೆಯ ಇತರೆ ಕಡೆಗಳಲ್ಲಿ ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿಲ್ಲ. ಹೀಗಾಗಿ, ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಶಿಕ್ಷಕರು ಅತಂತ್ರ: ಪ್ರಕರಣದಲ್ಲಿ ಐವರು ವಿಷಯ ತಜ್ಞರೂ ಸೇರಿದಂತೆ ಒಟ್ಟು ಏಳು ಶಿಕ್ಷಕರು ಬಂಧಿತರಾಗಿದ್ದಾರೆ. ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆಪತ್ರಿಕೆ ಪಡೆದು, ಅದಕ್ಕೆ ಉತ್ತರ ಬರೆದುಕೊಡುವ ಕೆಲಸವನ್ನು ಈ ಶಿಕ್ಷಕರು ಮಾಡುತ್ತಿದ್ದರು ಎನ್ನಲಾಗಿದೆ. ಕೇವಲ ಒಂದು ಗಂಟೆ ಅವಧಿಯಲ್ಲೇ ಇದೆಲ್ಲ ನಡೆದಿದೆ. ಆದರೆ ಇದಕ್ಕೆ ಪ್ರತಿಫಲವಾಗಿ ಯಾವುದೇ ಸ್ವರೂಪದಲ್ಲಿ ‘ಋಣ ಸಂದಾಯ’ ಆಗಿರುವ ಕುರಿತು ಪೊಲೀಸರಿಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಒಂದೊಮ್ಮೆ ಆರೋಪ ಸಾಬೀತಾದಲ್ಲಿ ಈ ಶಿಕ್ಷಕರೆಲ್ಲ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಶಿಕ್ಷಣ ಇಲಾಖೆ ಅಂಗಳಕ್ಕೆ ಚೆಂಡು
ಪರೀಕ್ಷಾ ಅಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಪಾತ್ರದ ಕುರಿತು ಪೊಲೀಸರು ಗುಟ್ಟು ಬಿಟ್ಟುಕೊಟ್ಟಿಲ್ಲ. ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ. ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರ ಕುರಿತು ಶಿಕ್ಷಣ ಸಚಿವರು, ಇಲಾಖೆ ಆಯುಕ್ತರಿಗೆ ಮಾಹಿತಿ ರವಾನೆ ಆಗಿದೆ.

ಪೊಲೀಸರ ಆಸಕ್ತಿಯಿಂದ ಪ್ರಕರಣ ಬಯಲು
ಮೇ 19ರಂದು ಮಾಗಡಿ ಪೊಲೀಸ್ ಠಾಣೆಗೆ ದೂರೊಂದು ಸಲ್ಲಿಕೆ ಆಗಿತ್ತು. ಆರೋಪಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಿ, ಹೆಚ್ಚು ಹಣ ಸಿಗದೇ ಹೋದಾಗ ಶಿಕ್ಷಕ ಲೋಕೇಶ್, ದೇವರಾಜು ಎಂಬ ಹೆಸರಿನಲ್ಲಿ ಠಾಣೆಗೆ ಪತ್ರ ಬರೆದಿದ್ದರು.

ಅದರಲ್ಲಿ ಅಕ್ರಮದ ಬಗ್ಗೆ ಮಾಹಿತಿ ಇತ್ತು. ಅದಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕೂಡ ಪ್ರಕಟ ಆಗಿತ್ತು. ಹೀಗಿದ್ದರೂ ನಿರ್ಲಕ್ಷ್ಯ ಮಾಡದ ಪೊಲೀಸರು, ದೂರಿನಲ್ಲಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಿಗೆ ಬಂದಿತು. ಕೂಡಲೇ ಎಚ್ಚೆತ್ತು ಉಳಿದ ಆರೋಪಿಗಳನ್ನೂ ಅಷ್ಟೇ ತ್ವರಿತವಾಗಿ ವಶಕ್ಕೆ ಪಡೆದಿದ್ದರು. ಯಾರನ್ನೂ ನಾಪತ್ತೆ ಆಗಲು ಬಿಟ್ಟಿಲ್ಲ.

ಜಾಮೀನು ಅರ್ಜಿ ತಿರಸ್ಕೃತ
ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ ಪ್ರಕರಣದ ಹತ್ತು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾಗಡಿಯ ಜೆಎಂಎಫ್‌ ನ್ಯಾಯಾಲಯವು ತಿರಸ್ಕರಿಸಿದೆ. ಆರೋಪಿಗಳ ಪರ ವಕೀಲರು ಶುಕ್ರವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಜಾಮೀನು ನೀಡುವಂತೆ ಮನವಿ ಮಾಡಿದರು. ವಿಚಾರಣೆ ನಡೆಸಿದ ಕಿರಿಯ ಶ್ರೇಣಿ ನ್ಯಾಯಾಧೀಶೆ ಎಸ್‌.ಸಿ. ನಳಿನಾ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶಿಸಿದರು. ಈ ಎಲ್ಲಾ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

**

ಎಸ್ಸೆಸ್ಸೆ‌ಲ್ಸಿ ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದೆ. ನಂತರದಲ್ಲಿ ಜಾರ್ಜ್‌ಶೀಟ್‌ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ.
-ಕೆ. ಸಂತೋಷ್ ಬಾಬು, ಎಸ್‌.ಪಿ, ರಾಮನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು