ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರಕ ಪರೀಕ್ಷೆ: ಶುಲ್ಕ ಕಟ್ಟಲಾಗದೇ ಪರಿತಪಿಸಿದ್ದ ಗ್ರೀಷ್ಮಾ ರಾಜ್ಯಕ್ಕೆ ಪ್ರಥಮ

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ
Last Updated 11 ಅಕ್ಟೋಬರ್ 2021, 19:35 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ತಂದಿತ್ತ ಆರ್ಥಿಕ ಸಂಕಷ್ಟದಿಂದಾಗಿ ಶುಲ್ಕ ಕಟ್ಟಲಾಗದೆ ಪರೀಕ್ಷೆಯಿಂದ ವಂಚಿತಳಾಗಿದ್ದ ಮೂಡಬಿದಿರೆಯ ಆಳ್ವಾಸ್‌ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ತುಮಕೂರು ಜಿಲ್ಲೆ ಕೊರಟಗೆರೆ ನಿವಾಸಿಯಾಗಿರುವ ಗ್ರೀಷ್ಮಾ 625 ಕ್ಕೆ 599 ಅಂಕ ಗಳಿಸಿ ಈ ಸಾಧನೆ ಮಾಡಿದ್ದಾಳೆ.

ಬಡ ಕುಟುಂಬದ ಗ್ರೀಷ್ಮಾಗೆ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಎಸ್ಸೆಸ್ಸೆಲ್ಸಿ ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಆಗಿರಲಿಲ್ಲ. ಪರೀಕ್ಷಾ ಶುಲ್ಕ ಕೂಡ ಕಟ್ಟಿರಲಿಲ್ಲ. ಹೀಗಾಗಿ ಜುಲೈ 19 ಹಾಗೂ 22ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೂ ಮುಂದಾಗಿದ್ದಳು ಎನ್ನಲಾಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.

ಇದನ್ನು ಗಮನಿಸಿದ್ದ ಆಗಿನ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬಾಲಕಿಯ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಆಕೆಗೆ ಧೈರ್ಯ ಹೇಳುವ ಜೊತೆಗೆ ಪೂರಕ ಪರೀಕ್ಷೆ ಬರೆಯಲೂ ಅವಕಾಶ ಮಾಡಿಕೊಟ್ಟಿದ್ದರು.

ಬಾಲಕಿಯ ಸಾಧನೆಗೆ ಸುರೇಶ್‌ಕುಮಾರ್‌ ಸಂತಸ ವ್ಯಕ್ತಪಡಿಸಿದ್ದಾರೆ. ‘ಗ್ರೀಷ್ಮಾ, ನೀನು ಛಲ ಬಿಡಲಿಲ್ಲ. ನಮ್ಮ ನಂಬಿಕೆ ಹುಸಿಗೊಳಿಸಲಿಲ್ಲ. ನಿನ್ನ ಸಾಧನೆಯಿಂದ ಮನಸ್ಸು ಹಗುರಾಗಿದೆ. ನಿನಗೆ ಅಭಿನಂದನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶೇ 55.54 ಫಲಿತಾಂಶ: ‘ಸೆಪ್ಟೆಂಬರ್ 27 ಹಾಗೂ 29 ರಂದು ನಡೆದಿದ್ದ ಪೂರಕ ಪರೀಕ್ಷೆಗೆ ಒಟ್ಟು 59,155 ಮಂದಿ ಹಾಜರಾಗಿದ್ದರು. ಈ ಪೈಕಿ 29,522 ವಿದ್ಯಾರ್ಥಿಗಳು (ಶೇ 55.54) ಉತ್ತೀರ್ಣರಾಗಿದ್ದಾರೆ. ಈ ಬಾರಿ 17,973 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇದರಲ್ಲಿ 10,290 ಜನ (ಶೇ 57.25) ತೇರ್ಗಡೆಯಾಗಿದ್ದಾರೆ. 35,182 ಬಾಲಕರಲ್ಲಿ 19,232 ಜನ (ಶೇ 54.66) ಉತ್ತೀರ್ಣರಾಗಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸಚಿವ ಬಿ.ಸಿ.ನಾಗೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘3,232 ಸರ್ಕಾರಿ ಶಾಲೆಗಳ 27,313 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 15,855 ಮಂದಿ ತೇರ್ಗಡೆ ಹೊಂದಿದ್ದಾರೆ. ನಗರಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಹೇಳಿದರು.

ಪಿಯುಸಿ ಪೂರಕ ಪರೀಕ್ಷೆ ಇಲ್ಲ: ‘ಪಿಯುಸಿ ಪೂರಕ ಪರೀಕ್ಷೆಗಳನ್ನು ನಡೆಸುವ ಆಲೋಚನೆ ಸದ್ಯಕ್ಕಂತೂ ಇಲ್ಲ. ಕೇವಲ 12 ಸಾವಿರ ಮಂದಿಗಾಗಿ ಅಗತ್ಯ ಮೂಲ ಸೌಕರ್ಯ ಸೃಜಿಸಿ ಪರೀಕ್ಷೆ ಆಯೋಜಿಸುವುದು ತುಂಬಾ ಕಷ್ಟ’ ಎಂದು ತಿಳಿಸಿದರು.

‘ಇಷ್ಟೆಲ್ಲಾ ಖರ್ಚು ಮಾಡಿ ಪರೀಕ್ಷೆ ನಡೆಸಿದರೂ ಅದರಲ್ಲಿ ಉತ್ತೀರ್ಣರಾದವರಿಗೆ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆ ನಡೆಸದಿರಲು ತೀರ್ಮಾನಿಸಿದ್ದೇವೆ.ಪಠ್ಯಕ್ರಮ ಕಡಿತಗೊಳಿಸುವ ಆಲೋಚನೆ ಇಲ್ಲ. ಪಠ್ಯಕ್ರಮ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರವೂ ತರಗತಿಗಳನ್ನು ನಡೆಸಲು ಶಿಕ್ಷಕರೇ ಉತ್ಸುಕರಾಗಿದ್ದಾರೆ’ ಎಂದೂ ಹೇಳಿದರು.
‘ಒಪ್ಪಿಗೆ ಸಿಕ್ಕರೆ 1 ರಿಂದ 5ನೇ ತರಗತಿ ಆರಂಭ’

‘ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ದಸರಾ ರಜೆಯ ಬಳಿಕ 1 ರಿಂದ 5ನೇ ತರಗತಿ ಆರಂಭಿಸಲಾಗುತ್ತದೆ. ಒಪ್ಪಿಗೆ ನಿರಾಕರಿಸಿದರೆ 3 ರಿಂದ 5ನೇ ತರಗತಿ ಆರಂಭಕ್ಕೆ ಮನವಿ ಮಾಡುತ್ತೇವೆ. ಶಾಲಾ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ 21ರಿಂದ ಮಧ್ಯಾಹ್ನದ ಬಿಸಿಯೂಟವನ್ನೂ ಪ್ರಾರಂಭಿಸಲಾಗುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ನಾಗೇಶ್‌ ಮಾಹಿತಿ ನೀಡಿದರು.

‘6 ರಿಂದ 10ನೇ ತರಗತಿಯ ಶಾಲೆಗಳು ಸುಸೂತ್ರವಾಗಿ ನಡೆಯುತ್ತಿವೆ. ಕೆಲ ಶಾಲೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ಹಾಜರಾತಿ ದಾಖಲಾಗುತ್ತಿದೆ. 1 ರಿಂದ 5ನೇ ತರಗತಿಗಳನ್ನೂ ಆರಂಭಿಸುವಂತೆ ಮಕ್ಕಳೇ ಮನವಿ ಮಾಡುತ್ತಿದ್ದಾರೆ. ಶಾಲಾ ಶುಲ್ಕದ ವಿಚಾರವಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಹೇಳಿದರು.

***

ಜುಲೈನಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದಾಗ ಬೇಸರವಾಗಿತ್ತು. ಪೂರಕ ಪರೀಕ್ಷೆ ಬರೆದಿದ್ದಕ್ಕೂ ಸಾರ್ಥಕವೆನಿಸಿದೆ.ಅಕ್ಕನ ನೆರವಿನೊಂದಿಗೆ ಮನೆಯಲ್ಲೇ ಓದಿ ಪರೀಕ್ಷೆ ಬರೆದಿದ್ದೆ

- ಗ್ರೀಷ್ಮಾ, ವಿದ್ಯಾರ್ಥಿನಿ

***

ಶಿಕ್ಷಕರ ವರ್ಗಾವಣೆ ವಿಷಯ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು

- ಬಿ.ಸಿ. ನಾಗೇಶ್, ‍‍‍‍ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

***
ಶಿಕ್ಷಕರ ವರ್ಗಾವಣೆ ವಿಷಯ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು

- ಬಿ.ಸಿ. ನಾಗೇಶ್, ‍‍‍‍ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

***
ಮಾಧ್ಯಮವಾರು ಫಲಿತಾಂಶ

ಮಾಧ್ಯಮ;ಹಾಜರಾದವರು;ಉತ್ತೀರ್ಣ;ಶೇಕಡಾವಾರು ಫಲಿತಾಂಶ

ಕನ್ನಡ;42,971;24,929;58.01

ಇಂಗ್ಲಿಷ್‌;6,622;2,744;41.44

ಉರ್ದು;2,673;1,390;52.00

ಮರಾಠಿ;848;445;52.48

ತೆಲುಗು;21;5;23.81

ತಮಿಳು;9;3;33.33

ಹಿಂದಿ;11;6;54.55

***

ನಗರ ಮತ್ತು ಗ್ರಾಮೀಣವಾರು ಫಲಿತಾಂಶ

ನಗರ

ಹಾಜರಾದವರು;ಉತ್ತೀರ್ಣ;ಶೇಕಡಾ

22,757;10,968;48.2

ಗ್ರಾಮೀಣ

30,398;18,554;61.04

***

ಶಾಲಾವಾರು ಫಲಿತಾಂಶ

ಶಾಲೆಯ ವಿಧ;ಒಟ್ಟು ಶಾಲೆ;ಹಾಜರಾದವರು;ಉತ್ತೀರ್ಣ;ಶೇಕಡಾ

ಸರ್ಕಾರಿ;3,232;27,313;15,855;58.05

ಅನುದಾನಿತ;2,355;16,736;9,050;54.08

ಅನುದಾನರಹಿತ;2,151;9,106;4,617;50.7

***

ಹಿಂದಿನ ಮೂರು ವರ್ಷಗಳ ಫಲಿತಾಂಶ

ವರ್ಷ;ಹಾಜರಾದವರು;ಉತ್ತೀರ್ಣ;ಶೇಕಡಾ

2018–19;1,92,181;81,613;42.47

2019–20;2,13,955;1,09,719;51.28

2020–21;53,155;29,522;55.54

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT