ಮಂಗಳವಾರ, ಮೇ 17, 2022
26 °C
‘ಪ್ರಜಾವಾಣಿ’ ಫೇಸ್‌ಬುಕ್ ಲೈವ್‌ ಚರ್ಚೆ

ಕುಲಶಾಸ್ತ್ರೀಯ ಅಧ್ಯಯನ ಅನಗತ್ಯ: ಕನಕ ಗುರುಪೀಠದ ಶ್ರೀ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವಿಲ್ಲ’ ಎಂದು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಪ್ರತಿಪಾದಿಸಿದರು.

‘ಪ್ರಜಾವಾಣಿ’ಯ ಫೇಸ್‌ಬುಕ್ ಲೈವ್ ಚರ್ಚೆಯಲ್ಲಿ ಮಾತನಾಡಿದ ಅವರು, ಹೊಸದಾಗಿ ಯಾವುದೇ ಸಮುದಾಯವನ್ನು ಎಸ್‌ಸಿ ಅಥವಾ ಎಸ್‌ಟಿಗೆ ಸೇರಿಸಬೇಕೆಂದರೆ ಕುಲಶಾ ಸ್ತ್ರೀಯ ಅಧ್ಯಯನ ಆಗಬೇಕು. ಆದರೆ, ಈಗಾಗಲೇ ಹೊರ ರಾಜ್ಯದಲ್ಲಿ ಮತ್ತು ಕೆಲವು ಜಿಲ್ಲೆಗಳಲ್ಲಿ ನಮ್ಮ ಸಮುದಾಯ ಎಸ್‌ಟಿ ಪಟ್ಟಿಯಲ್ಲಿ ಇದೆ’ ಎಂದು ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

‘ಕೇರಳದಲ್ಲಿ ‘ಕುರುಮನ್’, ತಮಿಳುನಾಡಿನಲ್ಲಿ ‘ಕುರುಂಬರ್’, ಹೈದರಾ ಬಾದ್ ಕರ್ನಾಟಕ ಭಾಗದಲ್ಲಿ ‘ಗೋಂಡ’, ಮದ್ರಾಸ್ ಪ್ರಾಂತ್ಯದಲ್ಲಿ ‘ಕಾಟ್ಟು ನಾಯಕನ್’ ಹೆಸರಿನಲ್ಲಿ ಈ ಸಮುದಾಯವನ್ನು ಕರೆಯಲಾಗುತ್ತದೆ. ಹಳೇ ಮೈಸೂರು ಭಾಗದಲ್ಲಿ ಜೇನು ಕುರುಬ ಮತ್ತು ಕಾಡು ಕುರುಬ ಎಂದು ಕರೆಯಲಾಗುತ್ತದೆ. ಕೊಡಗು ಜಿಲ್ಲೆಯ ‘ಕುರುಬ’ ಕೂಡ ಎಸ್‌ಟಿ ಪಟ್ಟಿಯಲ್ಲಿದೆ. ಹೀಗಾಗಿ ಹೊಸದಾಗಿ ಅಧ್ಯಯನದ ಅಗತ್ಯವಿಲ್ಲ. ‘ಕುರುಬ’ ಮತ್ತು ‘ಕುರು ಮನ್’ ಎರಡೂ ಒಂದೇ ಪದ ಎಂಬ ಆದೇಶ ಹೊರಬಿದ್ದರೆ ಸಾಕು’ ಎಂದರು.

‘ಸ್ವತಂತ್ರ್ಯ ಪೂರ್ವದಲ್ಲೇ ನಾವು ಎಸ್‌ಟಿ ಸಮುದಾಯದ ಪಟ್ಟಿಯಲ್ಲಿ ಇದ್ದೆವು. ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ನಮಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡದ್ದರು. ಕಾಲಾಂತರದಲ್ಲಿ ಅದು ಕೈತಪ್ಪಿದೆ. ರಾಜಕೀಯ ಇಚ್ಛಾ
ಶಕ್ತಿಯ ಕೊರತೆ ಕಾರಣಕ್ಕೆ ಹಿನ್ನೆಡೆ ಯಾಗಿದೆ. ಎಲ್ಲಾ ಸರ್ಕಾರಗಳ ಅವಧಿ ಯಲ್ಲೂ ಅನ್ಯಾಯವಾಗಿದೆ’ ಎಂದರು.

‘ಸಿದ್ದರಾಮಯ್ಯ ಅವರೂ ಈ ಸಮುದಾಯಕ್ಕೆ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದ್ದಾರೆ. 1996ರಲ್ಲಿ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ಮೊದಲ ಬಾರಿಗೆ ಕೇಂದ್ರಕ್ಕೆ ಶಿಫಾರಸು ಕಳುಹಿಸಲಾಗಿತ್ತು. 2013ರಲ್ಲಿ ಅವರೇ ಮುಖ್ಯಮಂತ್ರಿ ಆದಾಗಲೂ ಕೇಂದ್ರಕ್ಕೆ ಮತ್ತೆ ಶಿಫಾರಸು ಮಾಡಿದ್ದರು. ಎಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಇನ್ನಷ್ಟು ಪ್ರಯತ್ನಿಸಿದ್ದರೆ ಸುಲಭವಾಗಿ ಎಸ್‌ಟಿ ಪಟ್ಟಿಗೆ ಸೇರಬಹುದಿತ್ತೇನೋ ಎನ್ನಿಸುತ್ತದೆ. ಈಗ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಈಗಲಾದರೂ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ’ ಎಂದರು.

‘ಸರ್ಕಾರ ಸ್ಪಂದಿಸುವ ತನಕ ಹೋರಾಟ ನಿಲ್ಲದು’
‘ಎಸ್‌ಟಿಗೆ ಸೇರಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ’ ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

‘ಕುಲಶಾಸ್ತ್ರೀಯ ಅಧ್ಯಯನದ ವರದಿ ಒಂದು ತಿಂಗಳಲ್ಲಿ ಬರುವ ಸಾಧ್ಯತೆ ಇದೆ. ಅದನ್ನೂ ಸೇರಿಸಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂಬುದು ನಮ್ಮ ಮನವಿ. ಸ್ಪಂದನೆ ಸಿಗದಿದ್ದರೆ ಹೋರಾಟ ನಿಲ್ಲುವುದಿಲ್ಲ. ಮುಂದಿನ ಹೋರಾಟದ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಸ್ವಾಮೀಜಿ ಇದ್ದಾರೆ, ಅವರೇ ಹೋರಾಟ ಮಾಡುತ್ತಾರೆ ಎಂದರೆ ಆಗುವುದಿಲ್ಲ. ನಮ್ಮ ಜತೆಗೆ ಬೆನ್ನಲುಬಾಗಿ ಸಮುದಾಯದ ಎಲ್ಲರೂ ನಿಲ್ಲಬೇಕು. ಇಲ್ಲದಿದ್ದರೆ ‘ಎಣ್ಣೆ ಬಂದಾಗ ಕಣ್ಮುಚ್ಚಿಕೊಂಡರು’ ಎಂಬಂತೆ ಆಗಲಿದೆ’ ಎಂದು ಸಮುದಾಯದವರಿಗೆ ಕಿವಿಮಾತು ಹೇಳಿದರು.

‘ಈಗಾಗಲೇ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಬುಡಕಟ್ಟು ಸಚಿವರೊಂದಿಗೆ ಮಾತನಾಡಿದ್ದೇವೆ. ಪ್ರಧಾನ ಮಂತ್ರಿ ಮತ್ತು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲು ಸಮಯಾವಕಾಶ ಕಲ್ಪಿಸಿಕೊಡುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರನ್ನೂ ಕೋರಿದ್ದೇವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು