ಭಾನುವಾರ, ಜುಲೈ 3, 2022
24 °C
ನವೋದ್ಯಮ ಭಾಗ–3

ಅಂಕಗಳ ಆಟ–ನವೋದ್ಯಮಿಗೆ ಸಂಕಟ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 30 +15 +20 +10 +10 ಎಷ್ಟಾಗುತ್ತದೆ? ಪ್ರಾಥಮಿಕ ಶಾಲೆವರೆಗೆ ಮಾತ್ರ ಕಲಿತವರೂ ‘85’ ಎಂದು ಥಟ್ಟನೆ ಉತ್ತರ ನೀಡುತ್ತಾರೆ. ಆದರೆ, ನವೋದ್ಯಮಗಳನ್ನು ಮೌಲ್ಯಮಾಪನ ಮಾಡುವವರ ಪ್ರಕಾರ ಇವುಗಳ ಮೊತ್ತ ‘80‘! ಕೂಡಿಸುವಾಗ ಮಾಡುವ ಇಂತಹ ತಪ್ಪುಗಳು ಕೆಲವು ನವೋದ್ಯಮಗಳಿಗೆ ವರವಾಗಿ ಪರಿಣಮಿಸಿದರೆ, ಇನ್ನು ಕೆಲವು ಕಂಪನಿಗಳ ಭವಿಷ್ಯವನ್ನೇ ಕತ್ತಲಿಗೆ ದೂಡಿವೆ.

ಕಣ್ತಪ್ಪಿನಿಂದ ಇಂತಹ ತಪ್ಪು ಸಹಜ. ಆದರೆ, ನವೋದ್ಯಮಗಳಿಗೆ ಆರ್ಥಿಕ ಉತ್ತೇಜನ ನೀಡಲು ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಏರ್ಪಡಿಸುವ  ಐಡಿಯಾ2ಪಿಒಸಿ (ಎಲೆವೇಟ್‌) ಸ್ಪರ್ಧೆಯ ಫಲಿತಾಂಶಗಳಲ್ಲಿ ಕಣ್ಣಾಡಿಸಿದರೆ ಇಂತಹ ಹಲವಾರು ‘ತಪ್ಪು’ಗಳು ಸಿಗುತ್ತವೆ.

‘ನವೋದ್ಯಮದ ಭವಿಷ್ಯ ನಿರ್ಧರಿಸುವ ಸ್ಪರ್ಧೆಗೆ ಇಷ್ಟೊಂದು ದಡ್ಡರನ್ನು ತೀರ್ಪುಗಾರರನ್ನಾಗಿ ನೇಮಿಸಲಾಗಿದೆಯೇ. ಇದು ಪ್ರತಿಭಾವಂತರಿಗೆ ಮಾಡುವ ಅನ್ಯಾಯವಲ್ಲವೇ’ ಎಂದು ಪ್ರಶ್ನಿಸುತ್ತಾರೆ ಮೈಸೂರಿನ ಪ್ರವೀಣ್‌ ಕುಮಾರ್‌ ಎಂ.ಕೆ. 

‘ಮೌಲ್ಯಮಾಪಕರು ಯಾರೂ ಕೂಡಿಸಲು ಬಾರದಷ್ಟು ದಡ್ಡರಲ್ಲ. ಅವರೆಲ್ಲರೂ ಎಬಿಎಐ, ಟಿಐಇ, ನಾಸ್ಕಾಂ ನಂತಹ ಉದ್ಯಮ ಸಂಘಗಳ ಮೂಲಕ ಶಿಫಾರಸುಗೊಂಡ ಪರಿಣಿತರು. ಅವರು ಪದೇ ಪದೇ ಇಂತಹ ತಪ್ಪು ಮಾಡುವುದು ನಿಜಕ್ಕೂ ಅಚ್ಚರಿ’ ಎನ್ನುತ್ತಾರೆ ಅವರು.

‘ಸರಳ ಲೆಕ್ಕವನ್ನೂ ಪದೇ ಪದೇ ತಪ್ಪಾಗಿ ಮಾಡುವುದಕ್ಕೂ ಕಾರಣವಿದೆ. ತಮಗೆ ಬೇಕಾದವರನ್ನು ಗೆಲ್ಲಿಸಲು ಅಥವಾ ಸೋಲಿಸಲು ಹೂಡುವ ಕುತಂತ್ರವಿದು’ ಎಂದು ಆರೋಪಿಸುತ್ತಾರೆ. 

ಇದನ್ನು ಪುಷ್ಟೀಕರಿಸಲು ಅವರು ಪುರಾವೆಗಳನ್ನೂ ಮುಂದಿಡುತ್ತಾರೆ. ‘ಒಂದು ನವೋದ್ಯಮಕ್ಕೆ ಒಬ್ಬ ಮೌಲ್ಯಮಾಪಕ 67, ಇನ್ನೊಬ್ಬರು 72 ಹಾಗೂ ಮತ್ತೊಬ್ಬರು 69 ಅಂಕ ನೀಡಿದ್ದರು. ಇದನ್ನು ಕೂಡಿದಾಗ 208 ಆಗುತ್ತದೆ. ಮೂರನೇ ಮೌಲ್ಯಮಾಪಕ 69 (22+5+26+8+8) ಅಂಕ ನೀಡಿದ್ದರೂ ಅದನ್ನು 79 ಎಂದು ತಪ್ಪಾಗಿ ನಮೂದಿಸಲಾಗುತ್ತದೆ. 5 ಅಂಕ ಇರುವ ಕಡೆ ಹಿಂದೆ 1 ಎಂದು ನಮೂದಿಸುವ ಮೂಲಕ ಈ ಮೊತ್ತ ಸರಿದೂಗುವಂತೆ ಮಾಡಲಾಗಿದೆ’ ಎಂದರು. 

‘ಇನ್ನೊಂದು ಪ್ರಕರಣದಲ್ಲಿ ಮೌಲ್ಯಮಾಪಕರೊಬ್ಬರು ನವೋದ್ಯಮವೊಂದಕ್ಕೆ 15 +10 +20+7+6 ಅಂಕಗಳನ್ನು ಕೊಟ್ಟಿದ್ದಾರೆ. ಮೊತ್ತವನ್ನು 58ರ ಬದಲು 78 ಎಂದು ತಪ್ಪಾಗಿ ಬರೆದಿದ್ದಾರೆ. ಮೊತ್ತವನ್ನು ಸರಿಪಡಿಸುವ ಬದಲು ಅಂಕ 15 ಅನ್ನು 25 ಎಂದು ಹಾಗೂ 10 ಅನ್ನು 20 ಎಂದು ತಿದ್ದಲಾಗಿದೆ’ ಎಂದರು. 

‘ಮೊತ್ತ ತಪ್ಪಾಗಿದ್ದರೆ ಸಹಿ ಪಡೆಯುತ್ತೇವೆ’

‘ಅಂಕಗಳನ್ನು ಕೂಡಿಸುವಾಗ ಹಾಗೂ ಕಳೆಯುವಾಗ ತಪ್ಪುಗಳು ಸಹಜ. ಕೂಡಿಸುವಾಗ ತಪ್ಪುಗಳಾಗಿದ್ದರೆ ಮೌಲ್ಯಮಾಪಕರ ಸಹಿ ಪಡೆದು ಸರಿಪಡಿಸುತ್ತೇವೆ’ ಎನ್ನುತ್ತಾರೆ ‘ಸ್ಟಾರ್ಟ್ಅಪ್‌ ಕರ್ನಾಟಕ’ದ ಮುಖ್ಯಸ್ಥೆ ಚಂಪಾ ಇ.

ಕನ್ನಡ ಸಂಸ್ಕೃತಿ ನವೋದ್ಯಮಕ್ಕೆ ಸೊನ್ನೆ ಅಂಕ!

ಐಡಿಯಾ2ಪಿಒಸಿ (ಎಲೆವೇಟ್‌ –19) ಸ್ಪರ್ಧೆಗಳಲ್ಲಿ ಕನ್ನಡ  ಮತ್ತು ಸಂಸ್ಕೃತಿಗೆ ಸಂಬಂಧಿಸಿದ ನವೋದ್ಯಮಗಳನ್ನು ಕಡೆಗಣಿಸಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಕನ್ನಡ ಮತ್ತು ಸಂಸ್ಕೃತಿಯ ನವೋದ್ಯಮಗಳಿಗೆ ಅತಿ ಕಡಿಮೆ ಅಂಕಗಳನ್ನು (0) ನೀಡಿರುವುದಕ್ಕೆ ದಾಖಲೆಗಳನ್ನು ಒದಗಿಸುತ್ತಾರೆ ಪ್ರವೀಣ್.

‘ಕನ್ನಡ ಮತ್ತು ಸಂಸ್ಕೃತಿಯ ನವೋದ್ಯಮಗಳನ್ನು ಹೊರತುಪಡಿಸಿ ಬೇರೆ ಯಾವುದೇ ನವೋದ್ಯಮಕ್ಕೂ 'ಸೊನ್ನೆ' ಅಂಕ ನೀಡಿಲ್ಲ. ಇದಕ್ಕೆ ಅವಕಾಶವೂ ಇಲ್ಲ. ಯಾವುದಾದರೂ ಕಂಪನಿ ಸೊನ್ನೆ ಅಂಕ ಪಡೆವಷ್ಟು ಕಳಪೆ ಆಗಿದ್ದರೆ, ಅದು ಅಂತಿಮ ಸುತ್ತಿಗೆ ತಲುಪಲು ಸಾಧ್ಯವೇ ಇಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು