ಶುಕ್ರವಾರ, ಡಿಸೆಂಬರ್ 3, 2021
24 °C
ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ

ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ: ಶಿಕ್ಷಕರ ಸಭೆಯಲ್ಲಿ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ (1–5ನೇ ತರಗತಿ) ಸುಮಾರು 75 ಸಾವಿರ ಪದವೀಧರ  ಪ್ರಾಥಮಿಕ ಶಾಲಾ ಶಿಕ್ಷಕರ ಹಿಂದಿನ ಸೇವಾ ಜ್ಯೇಷ್ಠತೆ ಪರಿಗಣಿಸಿ 6 ರಿಂದ 8ನೇ ತರಗತಿಯ ಶಾಲೆಗಳಿಗೆ ಮೇಲ್ದರ್ಜೆಗೇರಿಸಲು  ಕಾರ್ಯಕಾರಿ ಆದೇಶ ಹೊರಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರನ್ನು ಪ್ರತಿನಿಧಿಸುವ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗಳ ಕುರಿತು ಚರ್ಚಿಸಲು ಭಾನುವಾರ ಸಭೆ ನಡೆಯಿತು. ಈ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ‘ರಾಜ್ಯ ಸರ್ಕಾರ 21 ದಿನಗಳ ಒಳಗಾಗಿ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯದಾದ್ಯಂತ ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು. ಶಿಕ್ಷಕರನ್ನು ಪ್ರತಿನಿಧಿಸುವ ಸಂಘಟನೆಗಳ ಸುಮಾರು 5 ಸಾವಿರ ಪ್ರತಿನಿಧಿಗಳು ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

1998–99ರಲ್ಲಿ ಸೇವೆಗೆ ಸೇರಿ ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಸೇವೆಯಿಂದ ವಜಾಗೊಂಡ ಸುಮಾರು 4 ಸಾವಿರ  ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು 2013ರಲ್ಲಿ ಮರು ನೇಮಕಗೊಂಡಿದ್ದಾರೆ. ಮರು ನೇಮಕಕ್ಕೂ ಮೊದಲು ಸೇವೆ ಸಲ್ಲಿಸಿದ್ದ 4–5 ವರ್ಷಗಳ ಸೇವೆಯನ್ನು ಪರಿಗಣಿಸಿ  ಕಾಲ್ಪನಿಕ ವೇತನ ನಿಗದಿಗೊಳಿಸಬೇಕು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಬಡ್ತಿ ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಬಡ್ತಿ ಉಪನ್ಯಾಸಕರಿಗೆ ಕಾಲಮಿತಿಯಲ್ಲಿ ಬಡ್ತಿ ಸೌಲಭ್ಯ ನೀಡಬೇಕು, ಪ್ರಾಥಮಿಕ ಮತ್ತು ಪ್ರೌಢ ಶಾಲಾ  ಶಿಕ್ಷಕರ ಪರಸ್ಪರ ವರ್ಗಾವಣೆ ನೀತಿಯನ್ನು ಜಾರಿಗೆ ತರಬೇಕು, ಒಂದು ಬಾರಿ ಅಂತರ ಜಿಲ್ಲಾ ವರ್ಗಾವಣೆಗೆ ಒಂದು ಅವಕಾಶ ಕಲ್ಪಿಸಬೇಕು ಎಂದೂ ಸಭೆಯಲ್ಲಿ ಆಗ್ರಹಿಸಲಾಯಿತು.

ಬಿಡುವಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವ  ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಬೇಕು. ಈ ಮುಖ್ಯ ಶಿಕ್ಷಕರನ್ನು ‌ಶಿಕ್ಷಣ  ಸಂಯೋಜಕರ ಹುದ್ದೆಗೆ ನೇಮಿಸುವಾಗ ಸೇವಾ ಹಿರಿತನ ಪರಿಗಣಿಸಿ ಜ್ಯೇಷ್ಠತೆಯ ಆಧಾರದಲ್ಲಿ ಈ ಹಿಂದಿನಂತೆ ಪರೀಕ್ಷೆ ಇಲ್ಲದೆ ನೇಮಿಸಬೇಕು, ಸಮಗ್ರ ವೃಂದ ಮತ್ತು ನೇಮಕಾತಿ ನಿಯಮವನ್ನು ಕಾಲಮಿತಿಯೊಳಗೆ  ರೂಪಿಸಬೇಕು, 2008 ರ ನಂತರ ನೇಮಕಗೊಂಡ ಪ್ರೌಢ ಶಾಲಾ ಶಿಕ್ಷಕರಿಗೆ ಒಂದು ವಾರ್ಷಿಕ ವೇತನ ಬಡ್ತಿ ನೀಡಬೇಕು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತರಬೇಕು, ಅರ್ಹ ಪ್ರೌಢಶಾಲಾ ಸಹ ಶಿಕ್ಷಕರ ಜ್ಯೇಷ್ಠತಾ ಪಟ್ಟಿಗೆ ಅನುಗುಣವಾಗಿ ಮುಂಬಡ್ತಿ ನೀಡಬೇಕು ಎಂದೂ ಸಭೆಯಲ್ಲಿ ಒತ್ತಾಯಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು