ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದಿಂದ ಈವರೆಗೆ 1.08 ಕೋಟಿ ರಾಷ್ಟ್ರ ಧ್ವಜ ವಿತರಣೆ– ಬೊಮ್ಮಾಯಿ

Last Updated 13 ಆಗಸ್ಟ್ 2022, 9:38 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿಯವರ ‘ಹರ್‌ ಘರ್‌ ತಿರಂಗಾ’ ಕರೆಯಂತೆ ಶನಿವಾರದಿಂದ (ಆ.13) ಇದೇ15ರವರೆಗೆ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕಿದೆ. ಈ ಉದ್ದೇಶದಿಂದ ರಾಜ್ಯ ಸರ್ಕಾರ ಈಗಾಗಲೇ 1.08 ಕೋಟಿ ಧ್ವಜವನ್ನು ವಿತರಿಸಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಪ್ರತಿ ಗ್ರಾಮ ಪಂಚಾಯಿತಿಗೆ 400ರಿಂದ 500 ರಾಷ್ಟ್ರಧ್ವಜವನ್ನು ವಿತರಿಸಿದ್ದೇವೆ. ಅದೇ ರೀತಿ ಬೇರೆ ಬೇರೆ ಸಂಘ ಸಂಸ್ಥೆಗಳೂ ರಾಷ್ಟ್ರಧ್ವಜ ವಿತರಿಸಿವೆ. ಹೀಗೆ ಸುಮಾರು 1.20 ಕೋಟಿಗೂ ಹೆಚ್ಚು ಧ್ವಜ ವಿತರಣೆ ಆಗಿದೆ’ ಎಂದರು.

‘ಹಾಗೆ ನೋಡಿದರೆ 2–3 ದಿನಗಳಿಂದ ಇಡೀ ರಾಜ್ಯದಲ್ಲಿ ಈ ಹರ್ ಘರ್‌ ತಿರಂಗಾ ಮತ್ತು 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಆರಂಭವಾಗಿದೆ. ಪ್ರತಿ ಊರಿನಲ್ಲಿ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಯುವಕರು ಧ್ವಜ ಹಿಡಿದು ಮೆರವಣಿಗೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣ ಇದೆ, ಉತ್ಸಾಹವಿದೆ’ ಎಂದರು.

‘ಪ್ರತಿಯೊಬ್ಬರ ಮನೆಯಲ್ಲಿ ರಾಷ್ಟ್ರಧ್ವಜವವನ್ನು ಹಾರಿಸುವ ಮೂಲಕ ನಾವೆಲ್ಲ ಭಾರತೀಯರು ಒಂದು, ದೇಶ ಭಕ್ತರು, ಈ ದೇಶದ ಭವ್ಯ ಭವಿಷ್ಯಕ್ಕಾಗಿ ಸಂಕಲ್ಪ ಮಾಡಿದ್ದೇವೆ ಎಂದು ತೋರಿಸಿಕೊಳ್ಳಬೇಕಿದೆ. 75ನೇ ವರ್ಷ ಬಹಳ ಮಹತ್ವದ ಘಟ್ಟ. ಆತ್ಮಾವಲೋಕನ ಮತ್ತು ಸಿಂಹಾವಲೋಕನ ಮಾಡುವ ಸಂದರ್ಭ. ಮುಂದಿನ 25 ವರ್ಷ ಅಮೃತ ಕಾಲ ಎಂದು ಮೋದಿ ಕರೆದಿದ್ದಾರೆ. ಈ ಅವಧಿಯಲ್ಲಿ ಭಾರತವನ್ನು ಇನ್ನಷ್ಟು ಸಾಮರ್ಥ್ಯವಾಗಿ, ಶಕ್ತಿಶಾಲಿಯಾಗಿ, ಸಂಪದ್ಭರಿತವಾಗಿ ಇಡೀ ವಿಶ್ವ ಮಾನ್ಯ ಭಾರತ ಆಗುವಂತೆ ಮಾಡಲು ಸಂಕಲ್ಪ ತೊಡಬೇಕು. ಅಲ್ಲದೆ. ಆಗಸ್ಟ್‌ 15ನ್ನೂ ಸಂಭ್ರದಿಂದ ಆಚರಿಸಬೇಕು. ಎಲ್ಲ ಭಾರತೀಯರೂ ಒಂದು ಎಂಬ ಸಂದೇಶವನ್ನು ಸಾರಬೇಕಿದೆ‘ ಎಂದು ಕರೆ ನೀಡಿದರು.

ಜನೋತ್ಸವ: ‘ದೊಡ್ಡಬಳ್ಳಾಪುರದಲ್ಲಿ ಕಳೆದ 28ಕ್ಕೆ ಜನೋತ್ಸವ ನಡೆಸಲು ತಯಾರಿ ಮಾಡಿದ್ದೆವು. ಆದರೆ, ನಂತರ ಅನಿವಾರ್ಯ ಕಾರಣಗಳಿಂದ ಮುಂದೂಡಿದ್ದೆವು. ಈಗ ಬೇರೆ ಬೇರೆ ಕಡೆ ರ‍್ಯಾಲಿ ಮಾಡಿ ಅಲ್ಲಿ ಕೊನೆ ಮಾಡಲು ನಾವು ತೀರ್ಮಾನಿಸಿದ್ದೆವು. ಆದರೆ, ಆ ಭಾಗದ ಜನರು ಅದಕ್ಕೆ ಒಪ್ಪಲಿಲ್ಲ. ನಾವು ಇಷ್ಟೆಲ್ಲ ತಯಾರಿ ಮಾಡಿದ್ದೇವೆ. ಇಲ್ಲಿಂದಲೇ ಆರಂಭವಾಗಬೇಕು. ಎಲ್ಲಿ ಮೊದಲು ಹೆಜ್ಜೆ ಇಟ್ಟಿದ್ದೀರೊ ಅಲ್ಲಿಂದಲೇ ಮುಂದುವರಿಯಬೇಕು ಎಂಬ ನಮಗಿಂತ ಹೆಚ್ಚು ಉತ್ಸಾಹ ಮತ್ತು ದೃಢ ನಿರ್ಧಾರದಿಂದ ಆ ಭಾಗದ ಜನರು ಒತ್ತಡ ಹಾಕಿದ್ದಾರೆ. ಹೀಗಾಗಿ, ನಾವು ಅವರ ನಿರ್ಣಯಕ್ಕೆ ತಲೆಬಾಗಿ ಅಲ್ಲಿ 28ಕ್ಕೆ ಜನೋತ್ಸವ ಮಾಡುತ್ತೇವೆ‘ ಎಂದು ಮುಖ್ಯಮಂತ್ರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT