ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರಿಗಳ ವೇತನ ಸಮಿತಿ’ ರಚನೆಗೆ ಬೇಡಿಕೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ಮನವಿ
Last Updated 25 ಫೆಬ್ರುವರಿ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ನೌಕರರಿಗೆ ಸರಿಸಮಾನವಾದ ವೇತನ ಜಾರಿಗೊಳಿಸಲು ‘ಅಧಿಕಾರಿಗಳ ವೇತನ ಸಮಿತಿ’ಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.

ಮುಂಬರುವ ಬಜೆಟ್‌ನಲ್ಲಿ ಇದನ್ನು ಪ್ರಕಟಿಸುವಂತೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ನೇತೃತ್ವದ ನಿಯೋಗ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದರೆ ಸರ್ಕಾರಕ್ಕೆ ₹10,656 ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ. ಈಗ ಖಾಲಿ ಇರುವ ಹುದ್ದೆಗಳಿಂದಾಗಿ ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₹8,531 ಕೋಟಿ ಉಳಿತಾಯವಾಗುತ್ತಿದೆ. ಸರ್ಕಾರಕ್ಕೆ ಹೆಚ್ಚುವರಿಯಾಗಿ ₹2,125 ಕೋಟಿ ಬೇಕಾಗಬಹುದು ಎಂದು ಷಡಾಕ್ಷರಿ ಅವರು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದರು.

ರಾಷ್ಟ್ರದ ಜಿಎಸ್‌ಡಿಪಿ ಅವಲೋಕಿಸಿದರೆ ರಾಜ್ಯವು ಆರ್ಥಿಕ ಬೆಳವಣಿಗೆಯಲ್ಲಿ ರಾಷ್ಟ್ರದಲ್ಲೇ 6ನೇ ಸ್ಥಾನದಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರಿ ನೌಕರರ ಸೇವೆ ಮತ್ತು ಪಾತ್ರ ಮುಖ್ಯವಾಗಿದೆ. ಒಟ್ಟು 28 ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಪದ್ಧತಿ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರವು 2016 ರಲ್ಲಿ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ತನ್ನ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿದೆ. ರಾಜ್ಯದಲ್ಲಿ 2016ರಲ್ಲಿ ವೇತನ ಆಯೋಗ ರಚಿಸದೇ ಒಂದು ವರ್ಷ ತಡವಾಗಿ ಅಂದರೆ 2017 ರಲ್ಲಿ 6 ನೇ ವೇತನ ಆಯೋಗವನ್ನು ರಚಿಸಲಾಯಿತು. ಆಯೋಗ ನೀಡಿದ ಶಿಫಾರಸು ಆಧರಿಸಿ 2017 ರ ಜುಲೈನಿಂದ ಅನ್ವಯಿಸಿ, 2018 ರ ಏಪ್ರಿಲ್‌ 1 ರಿಂದ ಆರ್ಥಿಕ ಲಾಭ ದೊರೆಯುವಂತೆ ವೇತನ, ಭತ್ಯೆ ಪರಿಷ್ಕರಿಸಲಾಗಿತ್ತು. ಇದರಲ್ಲಿ ಕೇಂದ್ರ ಮಾದರಿ ವೇತನ ಬೇಡಿಕೆ ಪರಿಗಣಿಸಿರಲಿಲ್ಲ ಎಂದು ಹೇಳಿದ್ದಾರೆ.

6.10 ಕೋಟಿ

ರಾಜ್ಯದ ಜನಸಂಖ್ಯೆ

7.63 ಲಕ್ಷ

ಮಂಜೂರಾದ ಹುದ್ದೆಗಳು

5,12,720

ಭರ್ತಿಯಾಗಿರುವ ಹುದ್ದೆಗಳು

2,50,363

ಖಾಲಿ ಇರುವ ಹುದ್ದೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT