ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನರಿಗೆ ಪ್ರತ್ಯೇಕ ನಿಗಮ: ರಾಜ್ಯ ಅಲ್ಪಸಂಖ್ಯಾತ ಆಯೋಗದ ಶಿಫಾರಸು

Last Updated 14 ಅಕ್ಟೋಬರ್ 2022, 15:41 IST
ಅಕ್ಷರ ಗಾತ್ರ

ಬೆಂಗಳೂರು: ಜೈನರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ, ವಿಧಾನ ಪರಿಷತ್‌ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನದ ಮೂಲಕ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ, ಶಾಲಾ ಪಠ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ವಿಚಾರಗಳನ್ನೂ ಸೇರಿಸುವುದು ಸೇರಿ ಹಲವು ಶಿಫಾರಸುಗಳನ್ನು ಒಳಗೊಂಡಿರುವ ವರದಿಯನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಮೂರು ವರ್ಷಗಳ ತಮ್ಮ ಅಧಿಕಾರದ ಅವಧಿಯ ಕೊನೆಯ ದಿನವಾದ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವರದಿಯನ್ನು ಬಿಡುಗಡೆ ಮಾಡಿದ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ, ‘ಆಯೋಗದ ಅಧ್ಯಕ್ಷನಾಗಿ ಸರ್ಕಾರದ ವಿವಿಧ ಇಲಾಖೆಗಳಿಗೆ 3,500 ಪತ್ರಗಳನ್ನು ಬರೆದಿದ್ದೇನೆ. ಈಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವಿಸ್ತೃತವಾದ ವರದಿ ಸಲ್ಲಿಸಿದ್ದೇನೆ’ ಎಂದರು.

ಸಿಖ್ಖರು ಮತ್ತು ಶ್ವೇತಾಂಬರರನ್ನು ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಶೈಕ್ಷಣಿಕ ಸಂಸ್ಥೆಗಳು ಅಥವಾ ಆಸ್ಪತ್ರೆ ಪ್ರಾರಂಭಿಸಲು ಆಸಕ್ತಿ ತೋರುವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಅಥವಾ ರಿಯಾಯ್ತಿ ದರದಲ್ಲಿ ಜಮೀನು ಮಂಜೂರು ಮಾಡಬೇಕು. ಜೈನ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಜೈನರಿಗೆ ಅವರ ಧಾರ್ಮಿಕ ಸ್ಥಳಗಳ ಆಡಳಿತ ನಿರ್ವಹಣೆ ಅಧಿಕಾರ ನೀಡಬೇಕು. ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಬೇಕೆಂಬ ಶಿಫಾರಸುಗಳು ವರದಿಯಲ್ಲಿವೆ ಎಂದು ವಿವರಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಈ ಹಿಂದೆ ಆರಂಭಿಸಿ, ಸ್ಥಗಿತಗೊಳಿಸಿರುವ ಎಲ್ಲ ಯೋಜನೆಗಳ ಪುನರಾರಂಭಕ್ಕೆ ಅಗತ್ಯ ಅನುದಾನ ಒದಗಿಸಬೇಕು. 2001ರ ಜನಗಣತಿ ಪ್ರಕಾರ, ರಾಜ್ಯದಲ್ಲಿ 4 ಲಕ್ಷದಷ್ಟಿದ್ದ ಬೌದ್ಧ ಧರ್ಮೀಯರ ಸಂಖ್ಯೆ 2011ರ ಜನಗಣತಿಯಲ್ಲಿ 75,000 ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಪರಿಶೀಲನೆಗೆ ಶಿಫಾರಸು ಮಾಡಲಾಗಿದೆ ಎಂದರು.

‘ಮುಸ್ಲಿಮರ ಮೀಸಲಾತಿ ಹೆಚ್ಚಳ ಅಗತ್ಯ’

‘ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹಿಂದಿನ ಜನಗಣತಿ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ ಶೇಕಡ 5ರಷ್ಟು ಮೀಸಲಾತಿ ನೀಡಲಾಗಿತ್ತು. ಅದನ್ನು ಶೇ 6ಕ್ಕೆ ಹೆಚ್ಚಿಸುವ ಅಗತ್ಯವಿದೆ. ಈ ಕುರಿತು ಆಯೋಗವು ಸರ್ಕಾರದ ಗಮನ ಸೆಳೆಯಲಿದೆ’ ಎಂದು ಅಜೀಂ ತಿಳಿಸಿದರು.

‘ಅಲ್ಪಸಂಖ್ಯಾತರ ಮೀಸಲಾತಿ ಕಡಿತಕ್ಕೆ ಕೆಲವರು ಆಗ್ರಹಿಸಿರಬಹುದು. ಆದರೆ, ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ ಬಗ್ಗೆ ಈಗಲೇ ಏನನ್ನೂ ಹೇಳಲಾಗದು’ ಎಂದರು.

‘ಹಿಜಾಬ್‌ ವಿಚಾರದಲ್ಲಿ ಕೆಲವರ ಸ್ವಾರ್ಥದಿಂದ ವಿವಾದ ಸೃಷ್ಟಿಯಾಯಿತು. ಅದನ್ನು ತಿಳಿಗೊಳಿಸಲು ಆಯೋಗ ಪ್ರಯತ್ನಿಸಿತ್ತು. ಆದರೆ, ಕೆಲವರ ಚಿತಾವಣೆಯಿಂದ ವಿವಾದ ನ್ಯಾಯಾಲಯಕ್ಕೆ ತಲುಪಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಅದು ಎಲ್ಲರಿಗೂ ಅನ್ವಯವಾಗುತ್ತದೆ. ಕೇಂದ್ರ ಸರ್ಕಾರವು ಕಾನೂನಿನ ಪ್ರಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದ್ದು, ಅದನ್ನು ಸ್ವಾಗತಿಸುತ್ತೇನೆ’ ಎಂದರು.

ಪ್ರಮುಖ ಶಿಫಾರಸುಗಳು:

* ಬೌದ್ಧ ಧರ್ಮೀಯರಿಗೆ ಜಾತಿ ಪ್ರಮಾಣಪತ್ರ ವಿತರಣೆಗೆ ಇರುವ ತೊಡಕು ನಿವಾರಿಸಬೇಕು.

* ಪಾರ್ಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಮೀಸಲಿಡುವುದನ್ನು ಪುನರಾರಂಭಿಸಬೇಕು.

* ರಾಮನಗರದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವುದು.

* ಗುರುನಾನಕ್‌ ಜಯಂತಿ ಮತ್ತು ಬುದ್ಧ ಪೂರ್ಣಿಮೆಗೆ ಸರ್ಕಾರಿ ರಜೆ ಘೋಷಣೆ.

* ಅಲ್ಪಸಂಖ್ಯಾತರು ಸರ್ಕಾರಿ ಸೌಲಭ್ಯ ಪಡೆಯಲು ನಿಗದಿಪಡಿಸಿರುವ ಆರ್ಥಿಕ ಮಿತಿ ಸಡಿಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT