ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ-2020: ಕೊರೊನಾ ಮಧ್ಯೆಯೂ ರಾಜಕೀಯ ಏಳುಬೀಳು

Last Updated 28 ಡಿಸೆಂಬರ್ 2020, 19:35 IST
ಅಕ್ಷರ ಗಾತ್ರ

ವರ್ಷದುದ್ದಕ್ಕೂ ಕಾಡಿದ ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ರಾಜ್ಯ ರಾಜಕೀಯವು ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ‘ವಿಸ್ತರಣೆಯೊ, ಪುನರ್‌ರಚನೆಯೊ’ ಎಂಬ ನಿರೀಕ್ಷೆಗೆ ಕೊನೆಗೂ ಉತ್ತರ ಸಿಗಲಿಲ್ಲ. ಅಷ್ಟೇ ಅಲ್ಲ, ಯಡಿಯೂರಪ್ಪ ನಾಯಕತ್ವ ಬದಲಾವಣೆಯ ವಿಷಯವೂ ಹಲವು ಬಾರಿ ಮುನ್ನೆಲೆಗೆ ಬಂದಿದೆ. ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗಲೆಲ್ಲ, ‘ಇನ್ನರಡು ದಿನ ಕಾದು ನೋಡಿ’ ಎನ್ನುತ್ತಲೇ ಯಡಿಯೂರಪ್ಪ ವರ್ಷ ಕಳೆದಿದ್ದಾರೆ.

ಕೊರೊನಾ ನಿಯಂತ್ರಿಸಲು ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕರು ಬೀದಿಗಿಳಿದರೆ, ಖರೀದಿ ‘ಲೆಕ್ಕ’ದ ದಾಖಲೆಗಳನ್ನು ಮುಂದಿಟ್ಟು ಬಿಜೆಪಿ ಸಚಿವರು ತಿರುಗೇಟು ನೀಡಿದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿಯೂ ಈ ವಿಷಯ ಚರ್ಚೆಯಾಗಿ ಸುದ್ದಿಯಾಯಿತು. ಈ ಜಟಾಪಟಿ 2–3 ತಿಂಗಳು ಸುದ್ದಿಯಾಯಿತು. ಬಿ. ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆ ಹೆಚ್ಚುವರಿಯಾಗಿ ಸಚಿವ ಡಾ. ಕೆ. ಸುಧಾಕರ್‌ ಅವರ ಪಾಲಿಗೆ ಬಂತು.

ಭ್ರಷ್ಟಾಚಾರದಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂದು ಆರೋಪಿಸಿ ಖಾಸಗಿ ವಾಹಿನಿ ಪ್ರಸಾರ ಮಾಡಿದ ಸುದ್ದಿ, ವಿಧಾನ ಮಂಡಲ ಅಧಿವೇಶನದಲ್ಲೂ ಸದ್ದು ಮಾಡಿತು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಸಿ.ಟಿ. ರವಿ, ಸಚಿವ ಸ್ಥಾನ ತ್ಯಜಿಸಿದರು. ಆ ಬೆನ್ನಲ್ಲೆ, ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್‌ ಸಿಂಗ್‌ ಬಂದರು. ನಿಗಮ–ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಅಧಿಕಾರೇತರ ಸದಸ್ಯರ ನೇಮಕ ವೇಳೆ ಯಡಿಯೂರಪ್ಪ ತಮ್ಮ ‘ಆಪ್ತ’ರಿಗೆ ಮಣೆ ಹಾಕಿದ್ದಾರೆಂಬ ಆರೋಪ ಕೂಡ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಯಿತು.

ಜುಲೈ ತಿಂಗಳಲ್ಲಿ ಕೆಪಿಸಿಸಿ ಸಾರಥ್ಯವನ್ನು ‘ಅಧಿಕೃತ’ವಾಗಿ ವಹಿಸಿಕೊಂಡ ಡಿ.ಕೆ. ಶಿವಕುಮಾರ್‌, ತಳಮಟ್ಟದಿಂದ ಪಕ್ಷ ಸಂಘಟಿಸುವ ಪಣ ತೊಟ್ಟರು. ಪಕ್ಷದ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡ ರಣದೀಪ ಸಿಂಗ್‌ ಸುರ್ಜೇವಾಲಾ, ನಾಯಕರ ಮಧ್ಯೆ ಒಗಟ್ಟಿನ ಮಂತ್ರ ಜಪಿಸಿದರು. ಈ ನಡುವೆಯೇ ಆರ್‌.ಆರ್‌. ನಗರ ಮತ್ತು ಶಿರಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯನ್ನು ಗೆದ್ದು ಬಿಜೆಪಿ ಬೀಗಿತು. ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರುತ್ತಲೇ ಬಿಜೆಪಿ ಬಗ್ಗೆ ಮೃದು ಧೋರಣೆ ತಳೆದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸುದ್ದಿಯಲ್ಲಿ ಉಳಿದರು. ಇದು ವರ್ಷದ ಅಂತ್ಯದ ಹೊತ್ತಿಗೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ ಎಂಬ ವದಂತಿ ಹರಡುವಷ್ಟರಮಟ್ಟಿಗೆ ಬೆಳೆಯಿತು.

ಆರ್‌. ಶಂಕರ್‌, ಎಚ್‌. ವಿಶ್ವನಾಥ್‌, ಎಂಟಿಬಿ ನಾಗರಾಜು ಅವರಿಗೆ ವಿಧಾನಪರಿಷತ್‌ನಲ್ಲಿ ಸ್ಥಾನ ಕಲ್ಪಿಸಿ ಯಡಿಯೂರಪ್ಪ ಋಣ ತೀರಿಸಿದರೂ, ಅವರು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಮನೆ ಕದ ತಟ್ಟುತ್ತಲೇ ವರ್ಷ ಕಳೆದರು. ಮತ್ತೊಂದೆಡೆ, ಸಚಿವ ಸ್ಥಾನಾಕಾಂಕ್ಷಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿಕ್ಕಸಂದರ್ಭಗಳಲ್ಲೆಲ್ಲ ತಮ್ಮ ಸರ್ಕಾರದ ವಿರುದ್ಧ ಅಪಸ್ವರ ಎತ್ತಿ ಪ್ರಚಾರ ಗಿಟ್ಟಿಸಿಕೊಂಡರು. ಎಚ್. ವಿಶ್ವನಾಥ್‌ ಕೂಡಾ ತಮ್ಮದೇ ಶೈಲಿಯಲ್ಲಿ ಸರ್ಕಾರದ ಕೆಲವು ನಡೆಗಳನ್ನು ಪ್ರಶ್ನಿಸಿದರು.

ಸಭಾಪತಿ ಸ್ಥಾನಕ್ಕಾಗಿ ವಿಧಾನಪರಿಷತ್‌ನಲ್ಲಿ ನಡೆದ ಸಂಘರ್ಷ ‘ಕಪ್ಪು ಚುಕ್ಕೆ’ಯಾಗಿ ದಾಖಲಾಯಿತು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು. ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು, ಕುರುಬ ಸಮುದಾಯವನ್ನು ಎಸ್‌.ಟಿ ಪಟ್ಟಿಗೆ ಸೇರಿಸಬೇಕು ಹೀಗೆ ‘ಜಾತಿ’ ಮುಖಂಡರು ಮುಂದಿಟ್ಟ ಬೇಡಿಕೆಗಳು ಕೂಡಾ ರಾಜ್ಯ ರಾಜಕೀಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ವಸ್ತುವಾದವು. ಗೊಲ್ಲ, ಮರಾಠಾ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳ ಸ್ಥಾಪನೆ ರಾಜಕೀಯ ಲಾಭದ ‘ಕೂಸು’ಗಳೆಂದೇ ಬಿಂಬಿತಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT