ಗುರುವಾರ , ಜನವರಿ 21, 2021
21 °C
ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆಗೆ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ

ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅರಣ್ಯ ಜೀವ ಜಲದ ಆಗರ. ಈ ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಪಶ್ಚಿಮಘಟ್ಟಗಳ ಬಹುಭಾಗ ನಮ್ಮ ರಾಜ್ಯದಲ್ಲಿ ಇದೆ. ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.

‘ಆನೆಗಳ ಸಂಖ್ಯೆಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದ್ದರೆ, ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಎಲ್ಲ ಒತ್ತಡಗಳನ್ನು ಮೀರಿ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಶ್ರಮ ವಹಿಸುತ್ತಿದೆ. ಇವರ ಪರಿಶ್ರಮದಿಂದ ಕರ್ನಾಟಕಕ್ಕೆ ಉತ್ತಮ ಹೆಸರಿದೆ. ಪದಕ ಪಡೆದವರು ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅರಣ್ಯ ಇಲಾಖೆ ಮಾದರಿ: ‘ದೇಶದಲ್ಲೇ ನಮ್ಮ ಅರಣ್ಯ ಇಲಾಖೆ ಮಾದರಿಯಾಗಿದೆ. ಇದಕ್ಕೆ ಇಲಾಖೆಯ ಮುಂಚೂಣಿ ಅಧಿಕಾರಿ, ಸಿಬ್ಬಂದಿ ಶ್ರಮ‌ ಕಾರಣ. ಲಾಕ್‌ಡೌನ್ ಸಂದರ್ಭದಲ್ಲಿ ಕಾಡು ಉತ್ತಮವಾಗಿ ವೃದ್ಧಿಸಿದೆ. ಉತ್ತರ ಕರ್ನಾಟಕದಲ್ಲೂ ಹಸಿರು ವಾತಾವರಣ ಇದೆ. ಅರಣ್ಯ, ಪರಿಸರ ಉತ್ತಮವಾಗಿದ್ದರೆ ಜಗತ್ತು ಉಳಿಯುತ್ತದೆ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದರು.

‘ಅರಣ್ಯ ಉಳಿಸಲು ಶ್ರಮಿಸಿದವರಿಗೆ ಗೌರವ ಸಲ್ಲಿಸಲಾಗಿದೆ. ಪೊಲೀಸ್ ಇಲಾಖೆಗೆ ಹೋಲಿಸಿದರೆ ಅರಣ್ಯ ಇಲಾಖೆಯಲ್ಲಿ ಸೌಲಭ್ಯಗಳು ಕಡಿಮೆ. ಮುಂದಿನ ದಿನಗಳಲ್ಲಿ ಈ ತಾರತಮ್ಯ ಸರಿಪಡಿಸಲು ಕ್ರಮ ವಹಿಸಲಾಗುವುದು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು