ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕ ಶಕ್ತಿಗಳ ಮೂಲೋತ್ಪಾಟನೆಗೆ ಕ್ರಮ: ಆರಗ ಜ್ಞಾನೇಂದ್ರ

ಘಟನೆ ನಡೆದ ಸ್ಥಳ ಪರಿಶೀಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ * ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ
Last Updated 23 ನವೆಂಬರ್ 2022, 20:14 IST
ಅಕ್ಷರ ಗಾತ್ರ

ಮಂಗಳೂರು: ‘ದೇಶದ ಏಕತೆಗೆ ಭಂಗ ತರುವ ಮತಾಂಧ ಶಕ್ತಿಗಳ ನಿರ್ಮೂಲನೆಗೆ ಗೃಹ ಇಲಾಖೆ ಗಮನ ಹರಿಸಿದೆ. ಇಂತಹ ಶಕ್ತಿಗಳ ಮೂಲೋತ್ಪಾಟನೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ನಗರದ ಗರೋಡಿಯಲ್ಲಿ ನ.19ರಂದು ಆಟೊರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು, ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಭಯೋತ್ಪಾದಕ ಕೃತ್ಯಗಳ ನಿಗ್ರಹದ ಕುರಿತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಒಂದು ತಾಸಿಗೂ ಹೆಚ್ಚು ಸಮಯ ಸಭೆ ನಡೆಸಿದರು. ಪ್ರಕರಣದ ಆರೋಪಿ ಮೊಹಮ್ಮದ್‌ ಶಾರಿಕ್‌ ತಮಿಳುನಾಡಿನ ಮಧುರೆ, ಕೊಯಮತ್ತೂರು, ನಾಗರಕೊಯಿಲ್‌, ಕನ್ಯಾಕುಮಾರಿ, ಕೇರಳದ ಕೊಚ್ಚಿ ಮೊದಲಾದ ಕಡೆ ಭೇಟಿ ನೀಡಿದ್ದ ಬಗ್ಗೆ ಡಿಜಿಪಿ ಮತ್ತು ಐಜಿಪಿ ಪ್ರವಿಣ್‌ ಸೂದ್‌, ಮಂಗಳೂರು ನಗರ ಪೊಲೀಸ್‌ ಕಮಿನಷರ್‌ ಎನ್‌.ಶಶಿಕುಮಾರ್‌ ಹಾಗೂ ಇತರ ತನಿಖಾಧಿಕಾರಿಗಳು ಗೃಹ ಸಚಿವರಿಗೆ ಮಾಹಿತಿ ನೀಡಿದರು. ಆರೋಪಿ ಯಾರ ಜೊತೆ ನಂಟು ಹೊಂದಿದ್ದ, ಆತನ ಪೂರ್ವಾಪರಗಳೇನು ಎಂಬ ಬಗ್ಗೆಯೂ ವಿವರವಾಗಿ ಚರ್ಚಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹಸಚಿವರು, ‘‌ಕುಕ್ಕರ್‌ ಬಾಂಬ್‌ ಪೂರ್ಣ ಪ್ರಮಾಣದಲ್ಲಿ ಸ್ಫೋಟಿಸುತ್ತಿದ್ದರೆ ತುಂಬಾ ಹಾನಿ ಉಂಟಾಗುತ್ತಿತ್ತು. ರಿಕ್ಷಾದಲ್ಲಿ ಸಾಗಿಸುವಾಗಲೇ ಬಾಂಬ್‌ ಸ್ಫೋಟಗೊಂಡಿದ್ದರಿಂದ ಹಾನಿಯ ತೀವ್ರತೆ ಕಡಿಮೆ ಆಗಿದೆ. ಆದರೂ ಈ ಘಟನೆಯನ್ನು ಲಘುವಾಗಿ ತೆಗೆದುಕೊಂಡಿಲ್ಲ. ಇದರ ಬಗ್ಗೆ ಆಳವಾದ ತನಿಖೆ ನಡೆಸಲಾಗುತ್ತಿದೆ. ಈ ಕೃತ್ಯದಲ್ಲಿ ತೊಡಗಿರುವವರು ಸ್ಥಳೀಯವಾಗಿ ಲಭಿಸುವ ಸಾಮಗ್ರಿಗಳನ್ನೇ ಬಳಸಿ ಬಾಂಬ್‌ ತಯಾರಿಸುವುದರಲ್ಲಿ ಪರಿಣಿತರಾಗಿದ್ದಾರೆ. ಈ ಕೃತ್ಯದ ಹಿಂದಿರುವ ಎಲ್ಲ ಶಕ್ತಿಗಳನ್ನು ಪತ್ತೆಹಚ್ಚಿ ಮಟ್ಟಹಾಕುವ ಪ್ರಯತ್ನ ಸಾಗಿದೆ’ ಎಂದು ತಿಳಿಸಿದರು.

‘ಆರೋಪಿಗೆ ಯಾರು ಬೆಂಬಲ ನೀಡಿದ್ದಾರೆ, ಹಣಕಾಸು ಯಾರು ಒದಗಿಸುತ್ತಿದ್ದಾರೆ, ಆತನಿಂದ ಪದೇ ಪದೇ ಇಂತಹ ಕೃತ್ಯ ಮಾಡಿಸುವ ಶಕ್ತಿಗಳು ಯಾವುವು ಎಂದು ಪೊಲೀಸರು ಆಮೂಲಾಗ್ರವಾಗಿ ಪರಿಶೀಲಿಸುತ್ತಿದ್ದಾರೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಇದಕ್ಕಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಆರೋಪಿಗೆ ಶಿಕ್ಷೆ ಕೊಡಿಸಲು ಅಗತ್ಯ ಪುರಾವೆಗಳನ್ನು ವಿಧಿವಿಜ್ಞಾನ ತಜ್ಞರ ತಂಡದ ನೆರವಿನಿಂದ ಸಂಗ್ರಹಿಸಲಾಗಿದೆ’ ಎಂದರು.

‘ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳುಇತ್ತೀಚೆಗೆ ಕಡಿಮೆ ಆಗಿವೆ. ಕೇಂದ್ರ ಮತ್ತು ರಾಜ್ಯದ ಗೃಹ ಇಲಾಖೆಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿವೆ. ಇಂತಹ ಕೃತ್ಯದಲ್ಲಿ ತೊಡಗುವ ಯಾರೂ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಭಯೋತ್ಪಾದನಾ ಸಂಘಟನೆಗಳ ಮೂಲವನ್ನು ಜಾಲಾಡುವ ಕಾರ್ಯ ಪದೇ ಪದೇ ನಡೆಯುತ್ತಿದೆ. ಹಾಗಾಗಿ ಇಂತಹ ಸಂಘಟನೆಗಳ ಸದ್ದಡಗುತ್ತಿದೆ’ ಎಂದು ಗೃಹಸಚಿವರು ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿಗಳು ಗೃಹಸಚಿವರ ಊರಾದ ತೀರ್ಥಹಳ್ಳಿಯವರೇ ಆಗಿರುವ ಕುರಿತು ಪ್ರತಿಕ್ರಿಯಿಸಿದ ಜ್ಞಾನೆಂದ್ರ, ‘ತೀರ್ಥಹಳ್ಳಿಯು ನಾಡಿಗೆ ದೊಡ್ಡ ಸಾಹಿತಿಗಳನ್ನು, ಒಳ್ಳೆಯ ರಾಜಕಾರಣಿಗಳನ್ನು ನೀಡಿದ ಸುಸಂಸ್ಕೃತ ತಾಲ್ಲೂಕು. ಆದರೆ ಅಲ್ಲಿ ಈ ತರಹದವರೂ ಸೇರಿಕೊಂಡಿದ್ದಾರೆ. ಕೆಲವು ಯುವಕರು ಕರಾವಳಿ ಮತ್ತು ಕೇರಳದ ಮತಾಂಧ ಸಂಘಟನೆಗಳ ಸಂಪರ್ಕಕ್ಕೆ ಬಂದು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ’ ಎಂದರು.

ಪ್ರವೀಣ್‌ ಸೂದ್‌, ‘ದೇಶದಲ್ಲಿರುವ ಏಕತೆ ಹಾಗೂ ಸಾಮರಸ್ಯ ಹದಗೆಡಿಸುವ ಉದ್ದೇಶದಿಂದಲೇ ಇಂತಹ ಕೃತ್ಯ ನಡೆಸಲಾಗುತ್ತಿದೆ. ‌‌‌ಯಾವುದೇ ಸ್ಫೋಟ ಸಂಭವಿಸಿದರೆ ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತರ ನಡುವೆ ಕಂದಕ ಹೆಚ್ಚಾಗುತ್ತದೆ’ ಎಂದರು.

‘ಬೆಂಗಳೂರು ಮಂಗಳೂರು ಶಿವಮೊಗ್ಗ, ಮೈಸೂರು ಸೇರಿ ಎಂಟು ಕಡೆ ಶೋಧ ನಡೆಸಿದ್ದೇವೆ. ನಾಲ್ವರನ್ನು ವಶಕ್ಕೆ ಪಡೆದಿದ್ದೇವೆ. ಅವರನ್ನು ಆರೋಪಿಗಳೆಂದು ಪರಿಗಣಿಸಿಲ್ಲ’ ಎಂದು ಎನ್‌.ಶಶಿಕುಮಾರ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT