ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪುಸ್ತಕ ಪ್ರಕಟಣೆ ನಿಲ್ಲಿಸಿ, ಜಿಲ್ಲೆಗಳಲ್ಲಿ ಮಾರಾಟ ವ್ಯವಸ್ಥೆ ಮಾಡಿ'

ಪುಸ್ತಕ ಪ್ರಾಧಿಕಾರ, ಭಾಷಾ ಭಾರತಿಗೆ ತಜ್ಞರ ಆಗ್ರಹ l ಅಕಾಡೆಮಿ, ಪ್ರಾಧಿಕಾರಗಳಲ್ಲಿ ಕನ್ನಡ ಕಟ್ಟುವ ಕೆಲಸವಾಗಬೇಕು
Last Updated 25 ಜುಲೈ 2021, 21:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಅಕಾಡೆಮಿಗಳು ಪುಸ್ತಕ ಪ್ರಕಟಣೆಯನ್ನು ನಿಲ್ಲಿಸಿ, ಈಗಾಗಲೇ ಪ್ರಕಟವಾಗಿರುವ ಪುಸ್ತಕಗಳ ಮಾರಾಟದತ್ತ ಗಮನಹರಿಸಬೇಕು. ಹಾಗೆಯೇ ಪುಸ್ತಕೋದ್ಯಮಕ್ಕೆ ಸವಾಲಾಗಿರುವ ತಂತ್ರಜ್ಞಾನವನ್ನೇ ಅವಕಾಶವನ್ನಾಗಿ ಬಳಸಿಕೊಳ್ಳಬೇಕು’...ಇದು ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ ‘ಪುಸ್ತಕ–ಲೇಖಕ–ಓದುಗ–ಉದ್ಯಮ’ದ ಬಗ್ಗೆ ಹೀಗೊಂದು ಸಮುದ್ರಮಥನ ನಡೆದಾಗ ಹೊರಬಂದ ಒಕ್ಕೊರಲ ಅಭಿಮತ.

ಭಾನುವಾರ ‘ಆಲದಮರ’ದಡಿ ಮೂರು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಲೇಖಕ ಕೇಶವ ಮಳಗಿ, ನವಕರ್ನಾಟಕ ಪಬ್ಲಿಕೇಷನ್ಸ್‌ನ ರಮೇಶ ಉಡುಪ, ಬಹುರೂಪಿ ಬುಕ್‌ಹಬ್‌ನ ಜಿ.ಎನ್‌.ಮೋಹನ್‌, ಆಕೃತಿ ಬುಕ್ಸ್‌ನ ಗುರುಪ್ರಸಾದ್‌ ಡಿ.ಎನ್‌. ಹಾಗೂ ಮೈಲ್ಯಾಂಗ್‌ ಬುಕ್ಸ್‌ನ ವಸಂತ ಶೆಟ್ಟಿ ಮುಖ್ಯಅತಿಥಿಗಳಾಗಿದ್ದರು.

ಚರ್ಚೆ ಆರಂಭಿಸಿದ ಕೇಶವ ಮಳಗಿ, ‘ಕೆಲ ಪ್ರಕಾಶಕರು ಕೆಲವು ಲೇಖಕರನ್ನು ಅಸ್ಪೃಶ್ಯರಂತೆ ನೋಡುತ್ತಾರೆ. ಎಲ್ಲ ಲೇಖಕರು ಒಂದೇ ಎಂಬ ಧೋರಣೆಯನ್ನು ಪ್ರಕಾಶಕರು ತೋರದೇ ಹೋದರೆ ಪುಸ್ತಕ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ಜೊತೆಗೆ ಅಕಾಡೆಮಿ, ಪ್ರಾಧಿಕಾರಗಳಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ. ಆದರೆ ಇವರು ಕನ್ನಡವನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಕೇವಲ ಪುಸ್ತಕ ಪ್ರಕಟಣೆ ಅವರ ಕೆಲಸವಲ್ಲ. ಹೊಸ ಓದುಗರನ್ನು ಹುಟ್ಟುಹಾಕಲು ವಿಕೇಂದ್ರೀಕರಣದ ದೃಷ್ಟಿಯಲ್ಲಿ ಕೆಲಸ ಮಾಡಬೇಕು. ತಾಲ್ಲೂಕು ಕೇಂದ್ರಗಳಲ್ಲಿ ಪುಸ್ತಕ ಮಳಿಗೆಗಳನ್ನು ಆರಂಭಿಸಬೇಕು’ ಎಂದರು.

ಚರ್ಚೆಯಲ್ಲಿ ಶ್ರೋತೃಗಳಾಗಿ ಪಾಲ್ಗೊಂಡಿದ್ದ ಲೇಖಕರಾದ ಬೊಳುವಾರು ಮಹಮದ್ ಕುಂಞಿ ಹಾಗೂ ಜೋಗಿ ಅವರು ಇದಕ್ಕೆ ಧ್ವನಿಗೂಡಿಸಿದರು. ‘ಪ್ರಾಧಿಕಾರಗಳು ಕನಿಷ್ಠ 10 ವರ್ಷ ಪುಸ್ತಕ ಪ್ರಕಟಣೆ ನಿಲ್ಲಿಸಬೇಕು. ಈಗ ಪ್ರಕಟವಾಗಿರುವ ಪುಸ್ತಕಗಳನ್ನು ಮಾರಾಟ ಮಾಡುವ ಕೆಲಸ ಮಾಡಬೇಕು’ ಎಂದು ಬೊಳುವಾರು ಅವರು ಆಗ್ರಹಿಸಿದರು. ‘ಕುವೆಂಪು ಭಾಷಾ ಭಾರತಿಯು ಹೊಸಬರ ಪುಸ್ತಕಗಳನ್ನಷ್ಟೇ ಪ್ರಕಟ ಮಾಡಿ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು’ ಎಂದು ಜೋಗಿ ಅವರು ಸಲಹೆ ನೀಡಿದರು.

ಇ–ಬುಕ್‌ಗಳ ಡಿಜಿಟಲ್ ಮಾರಾಟದ ಸನ್ನಿವೇಶವನ್ನು ಪ್ರಸ್ತಾಪಿಸಿದ ಜಿ.ಎನ್‌. ಮೋಹನ್ ಅವರು, ‘ಮೊದಲು ಜನರಿಗೆ ಪುಸ್ತಕದ ರುಚಿ ಹರಡಬೇಕು. ಅಸ್ತಿತ್ವಕ್ಕೆ ಧಕ್ಕೆ ಆಗುವುದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳಬೇಕು. ಪುಸ್ತಕೋದ್ಯಮಕ್ಕೆ ಇದನ್ನೇ ಅನ್ವಯಿಸಬೇಕು. ತಂತ್ರಜ್ಞಾನದ ಅನೇಕ ಸಾಧ್ಯತೆಗಳಿಗೆ ತೆರೆದುಕೊಳ್ಳದೇ ಹೋದರೆ, ಪುಸ್ತಕದ ಉದ್ಯಮದಲ್ಲಿ ಇರಲು ಸಾಧ್ಯವಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಈ ಕ್ಷೇತ್ರಕ್ಕೆ ಬಂದಾಗ ಇದು ನಾಶವಾಗುತ್ತದೆ ಎನ್ನುವ ಆತಂಕ, ಭಯ ನಮ್ಮ ಹೊಸ್ತಿಲಲ್ಲೇ ಇದೆ’ ಎಂದರು.

ವಸಂತ ಶೆಟ್ಟಿ ಅವರು ಮಾತನಾಡಿ, ‘ಜನರ ಮುಂದೆ ಹಲವು ಸೆಳೆತಗಳು ಬಂದಿರುವ ಕಾರಣ ಓದುಗರ ಸಂಖ್ಯೆ ಕಡಿಮೆಯಾಗಿರುವುದು ನಿಜ. ಇದಕ್ಕೆ ತಕ್ಕಂತೆ ಅವರನ್ನು ತಲುಪುವ ಬಗೆಯನ್ನು ನಾವು ಕಂಡುಕೊಳ್ಳಬೇಕು. ಭವಿಷ್ಯದ ಓದುಗರನ್ನು ತಲುಪಲು ಡಿಜಿಟಲ್‌ನಲ್ಲಿ ಹಲವು ಆಯ್ಕೆಗಳಿವೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌, ಡೇಟಾ ಅಗ್ಗವಾಗಿದೆ. ಇದು ಪುಸ್ತಕ ಉದ್ಯಮಕ್ಕೂ ಇದು ಸಹಾಯವಾಗಲಿದೆ. ಮೆಕ್‌ಡೊನಾಲ್ಡ್ಸ್‌ ಪಕ್ಕ ದರ್ಶಿನಿ ಉಳಿದಂತೆ, ಹೊಸ ಓದುಗರನ್ನು ಪಡೆದುಕೊಳ್ಳಲು, ಇರುವ ಓದುಗರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು.

‘ಕನ್ನಡ ಪುಸ್ತಕೋದ್ಯಮವು ಬೇರೆ ಸಮುದಾಯದ ಲೇಖಕರನ್ನು ಬಲಿಷ್ಠಗೊಳಿಸುವ, ಉತ್ತೇಜನ ನೀಡುವ ಕೆಲಸ ಮಾಡಿಲ್ಲ. ಜೊತೆಗೆ, ಇವತ್ತಿನ ತುರ್ತುಗಳಿಗೆ ಯಾವುದೇ ಕನ್ನಡ ಲೇಖಕ ತನ್ನ ಬರವಣಿಗೆಯಿಂದ ಸ್ಪಂದಿಸುತ್ತಿಲ್ಲ. ಹೀಗಾಗಿ ಹೊಸ ಓದುಗರು ಹುಟ್ಟಿಕೊಳ್ಳುತ್ತಿಲ್ಲ’ ಎಂದು ನಾಗೇಗೌಡ ಕೆ.ಎನ್‌ ಹೇಳಿದರು.

ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ‘ವರ್ತಮಾನದ ಪರಿಸ್ಥಿತಿಯಲ್ಲಿ ಕನ್ನಡ ಭಾಷೆ ತನ್ನ ಬೆಳವಣಿಗೆಯಲ್ಲೇ ಕುಂಠಿತವಾಗಿದೆ. ಹೀಗಿರುವಾಗ ಕನ್ನಡ ಪುಸ್ತಕಗಳ ಮಾರಾಟ ಸಂಖ್ಯೆ ಹೆಚ್ಚಾಗುವುದು ಹೇಗೆ? ಕರ್ನಾಟಕದ ಅಸ್ಮಿತೆಯನ್ನು ಬೆಳೆಸುವ ಕೆಲಸ ಆಗಬೇಕು. ಎಲ್ಲ ಲೇಖಕರು ಕನ್ನಡದ ಪರ ಧ್ವನಿ ಎತ್ತಬೇಕು’ ಎಂದರು.

ಆ್ಯಪ್‌ ಅಗತ್ಯ: ಹಿರಿಯ ಲೇಖಕ ನಾಗೇಶ ಹೆಗಡೆ ಮಾತನಾಡಿ, ‘ಕೃತಿಯ ಬಗ್ಗೆ ಮಾಹಿತಿ ನೀಡುವ, ಆ ಕೃತಿ ಎಲ್ಲಿ ಲಭ್ಯವಿದೆ ಮುಂತಾದ ಮಾಹಿತಿ ಒಂದೇ ಕಡೆ ಲಭ್ಯವಾಗುವಂತೆ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕಾಶಕರ ಸಂಘ ಕ್ರಮಕೈಗೊಳ್ಳಬೇಕು’ ಎಂದರು.

***

ಕನ್ನಡ ಅರ್ಥವಾಗುತ್ತದೆ ಆದರೆ ಓದಲು, ಬರೆಯಲು ಬರುವುದಿಲ್ಲ ಎನ್ನುವವರಿಗೆ ಆಡಿಯೊ ಬುಕ್‌ ವರದಾನವಾಗಿದೆ. ಇದು ಸಾಧ್ಯವಾಗಿರುವುದು ತಂತ್ರಜ್ಞಾನದಿಂದ. ಇದರಿಂದ ಮುದ್ರಿತ ಪುಸ್ತಕಗಳ ಮಾರಾಟಕ್ಕೆ ಹೊಡೆತ ಬೀಳುವುದಿಲ್ಲ.

-ರಮೇಶ ಉಡುಪ, ನವಕರ್ನಾಟಕ ಪಬ್ಲಿಕೇಷನ್ಸ್‌

***

ಇ–ಕಾಮರ್ಸ್‌ ಮುಖಾಂತರ ಪುಸ್ತಕ ಮಾರಾಟ ಪ್ರಾರಂಭವಾದಾಗಿನಿಂದ ಹಲವು ಪುಸ್ತಕ ಮಳಿಗೆಗಳು ಮುಚ್ಚಿವೆ. ಕಾರ್ಪೊರೇಟ್‌ ಕಂಪನಿಗಳು ಈ ಕ್ಷೇತ್ರದಲ್ಲಿ ಏಕಸ್ವಾಮ್ಯ ಹೊಂದುವುದನ್ನು ನಾವು ವಿರೋಧಿಸಲೇಬೇಕು ಹಾಗೂ ಎಚ್ಚರಿಕೆಯಿಂದ ಇರಬೇಕು.

-ಗುರುಪ್ರಸಾದ್‌ ಡಿ.ಎನ್‌., ಆಕೃತಿ ಬುಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT