ಶುಕ್ರವಾರ, ಜುಲೈ 1, 2022
27 °C
ಸಿದ್ದರಾಮಯ್ಯ ಅವರಿಗೆ ಸಚಿವ ಈಶ್ವರಪ್ಪ ಕಿವಿಮಾತು

ಮುಸ್ಲಿಮರಿಗೆ ಬುದ್ಧಿ ಹೇಳಿ, ಓಲೈಕೆ ಬಿಡಿ: ಸಿದ್ದರಾಮಯ್ಯಗೆ ಈಶ್ವರಪ್ಪ ಕಿವಿಮಾತು

ಪ್ರಜಾವಾಣಿ ವಾತೆ೯ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ‘ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಎಂಬ ತಮ್ಮ ಹೇಳಿಕೆಯನ್ನು ರಾಜ್ಯದ ಯಾವುದೇ ಹಿರಿಯ ಮಠಾಧೀಶರು ವಿರೋಧಿಸಿಲ್ಲ ಎನ್ನುವ ಮೂಲಕ ವಿಧಾನಸಭೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿಂದೂ ಸಮಾಜ ಒಡೆಯುತ್ತಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭಾನುವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೀರಶೈವರು, ಲಿಂಗಾಯತರನ್ನು ಒಡೆದು ಈಗಾಗಲೇ ಶಿಕ್ಷೆ ಅನುಭವಿಸಿರುವ ಅವರು, ಈಗ ಸಾಧು–ಸಂತರನ್ನು ಹಿರಿಯರು, ಕಿರಿಯರು ಎಂದು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅದರ ಫಲ ಉಣ್ಣಲಿದ್ದಾರೆ’ ಎಂದರು.

‘ಹಿರಿಯ, ಕಿರಿಯ ಸ್ವಾಮೀಜಿಗಳು ಎಂಬುದಕ್ಕೆ ಏನು ಮಾನದಂಡ? ಸರ್ವವನ್ನು ತ್ಯಾಗ ಮಾಡಿ ಬಂದವರನ್ನು ಸ್ವಾಮೀಜಿ ಎನ್ನುತ್ತೇವೆ. ಸಿದ್ದರಾಮಯ್ಯ ಹೇಳಿಕೆಯನ್ನು ಅವರ ಪುತ್ರ ಯತೀಂದ್ರ ಬಿಟ್ಟರೆ ಕಾಂಗ್ರೆಸ್‌ನ ಯಾವ ನಾಯಕನೂ ಸಮರ್ಥಿಸಿಕೊಂಡಿಲ್ಲ‘ ಎಂದರು.

‘ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಕುರಿತಂತೆ ಶಿಕ್ಷಣ ಬಿಡುತ್ತೇವೆ, ಧರ್ಮ ಬಿಡುವುದಿಲ್ಲ ಎಂದು ಮುಸ್ಲಿಂ ಹೆಣ್ಣುಮಕ್ಕಳು ಹೇಳುತ್ತಾರೆ. ಅವರಿಗೆ ಬುದ್ಧಿ ಹೇಳುವುದನ್ನು ಬಿಟ್ಟು ಸಿದ್ದರಾಮಯ್ಯ ಮುಸ್ಲಿಮರ ಓಲೈಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಬಾದಾಮಿಯಲ್ಲಿ ಮತ್ತೆ ಗೆಲ್ಲುವುದಿಲ್ಲ. ಅಂತಿಮವಾಗಿ ಜಮೀರ್ ಅಹಮದ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರವೇ ದಿಕ್ಕು. ಅಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಸ್ಲಿಮರ ಓಲೈಸಲು ಸಿದ್ದರಾಮಯ್ಯ ಹೀಗೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

***

ತುಘಲಕ್‌ ಬುದ್ಧಿವಂತನಾಗಿದ್ದರೂ ಮೂರ್ಖನಾಗಿದ್ದ. ಅಂತೆಯೇ ಸಿದ್ಧರಾಮಯ್ಯ ಅವರು ಆಗಾಗ್ಗೆ ಮೂರ್ಖತನ ಪ್ರದರ್ಶಿಸುತ್ತಾರೆ. ಅವರು ಎಲ್ಲ ಮಠಾಧೀಶರ ಕ್ಷಮೆಯಾಚಿಸಲಿ

- ಬಿ.ಶ್ರೀರಾಮುಲು, ಸಾರಿಗೆ ಸಚಿವ

ನಾಸ್ತಿಕವಾದದಿಂದ ಹಿಂದೂ ಸಮಾಜದ ಗುರುಗಳು, ಹಿಂದುತ್ವವಾದವನ್ನು ಸಿದ್ದರಾಮಯ್ಯ ಬೈಯ್ಯೋದು ಆಗಬಾರದು. ಇದಕ್ಕೇ ಕಾಂಗ್ರೆಸ್ ಪಕ್ಷ ನೆಲಸಮ‌ ಆಗಿದೆ

- ಪ್ರಮೋದ ಮುತಾಲಿಕ್‌, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು