ಸೋಮವಾರ, ಆಗಸ್ಟ್ 8, 2022
24 °C
ಬೀದಿಬದಿ ವ್ಯಾಪಾರಿಗಳ ₹ 2 ಸಾವಿರಕ್ಕೆ ಬ್ಯಾಂಕ್‌ನಿಂದ ಕತ್ತರಿ

ಬೀದಿ ಬದಿ ವ್ಯಾಪಾರಿಗಳಿಗೆ ಕೊಟ್ಟ ಪರಿಹಾರದ ಹಣ ‘ಪಿಎಂ ಸ್ವನಿಧಿ’ ಸಾಲಕ್ಕೆ ಕಡಿತ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಆರ್ಥಿಕ ಪ್ಯಾಕೇಜ್‍ನಡಿ ಬೀದಿಬದಿ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ₹ 2 ಸಾವಿರ ಸಹಾಯಧನವನ್ನು, ವ್ಯಾಪಾರಿಗಳು ಪಿಎಂ ಸ್ವನಿಧಿ (ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ) ಯೋಜನೆಯಡಿ ಪಡೆದ ₹ 10 ಸಾವಿರ ಸಾಲದ ಕಂತುಗಳಿಗೆ ಬ್ಯಾಂಕುಗಳು ಕಡಿತ ಮಾಡುತ್ತಿವೆ.

ಇದೇ 8ರಂದು 1,91,684 ಬೀದಿಬದಿ ವ್ಯಾಪಾರಿಗಳ ಖಾತೆಗೆ ತಲಾ ₹ 2 ಸಾವಿರದಂತೆ ಒಟ್ಟು ₹ 38.33 ಕೋಟಿ ವರ್ಗಾವಣೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಈ ಸಹಾಯಧನವನ್ನು ಯಾವುದೇ ಸಾಲಕ್ಕೆ ಹೊಂದಾಣಿಕೆ ಮಾಡದಂತೆ ಬ್ಯಾಂಕಿನವರಿಗೆ ಸೂಚನೆ ನೀಡಲಾಗಿದೆ’ ಎಂದಿದ್ದರು.

ಆದರೆ, ಇಲ್ಲಿನ ಗಾಂಧಿನಗರದ ಆಂಧ್ರ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಶ್ರೀರಂಗಪಟ್ಟಣ ಕೆನರಾ ಬ್ಯಾಂಕು ಸೇರಿದಂತೆ ರಾಜ್ಯದಾದ್ಯಂತ ಅನೇಕ ಬ್ಯಾಂಕುಗಳು ಪಿಎಂ ಸ್ವ ನಿಧಿ ಸಾಲದ ಕಂತುಗಳಿಗೆ ಸಹಾಯಧನವನ್ನು ಮರು ಹೊಂದಿಸಿವೆ. ಕೆಲವು ಬ್ಯಾಂಕುಗಳು ಎರಡು ಕಂತುಗಳ ಹಣವನ್ನು ಕಡಿತ ಮಾಡಿವೆ. ಇನ್ನೂ ಕೆಲವು ಬ್ಯಾಂಕುಗಳು ಸಂಪೂರ್ಣ ₹ 2 ಸಾವಿರವನ್ನೂ ಕಡಿತ ಮಾಡಿಕೊಂಡಿವೆ.

‘ಸಹಾಯಧನವನ್ನು ಸಾಲಕ್ಕೆ ಜಮೆಮಾಡದಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದೆವು. ಆದರೂ ಕಡಿತ ಮಾಡಲಾಗಿದೆ’ ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ಇ. ರಂಗಸ್ವಾಮಿ ಹೇಳಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ನೋಂದಾಯಿತ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯನ್ನು 2020ರ ಜೂನ್‌ನಿಂದ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ 2,16,439 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಇದೇ ಮಾರ್ಚ್‌ವರೆಗೆ 1,55,510 ಮಂದಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, 1,21,968 ಜನರಿಗೆ ಸಾಲ ಮಂಜೂರಾಗಿದೆ. 93,060 ಜನರಿಗೆ ಸಾಲ ವಿತರಿಸಲಾಗಿದೆ. 28,908 ಅರ್ಜಿಗಳಿಗೆ ಸಾಲ ನೀಡಲು ಇನ್ನೂ ಬಾಕಿ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ಕೋವಿಡ್‌ ಪ್ಯಾಕೇಜ್‌ನಡಿ ನೀಡಿದ ₹ 2 ಸಾವಿರವನ್ನು ಸಾಲದ ಕಂತುಗಳಿಗೆ ಹೊಂದಾಣಿಸದಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯಮಟ್ಟದ ಬ್ಯಾಂಕರ್ಸ್‌ ಸಮಿತಿ ಮೂಲಕ ಎಲ್ಲ ಬ್ಯಾಂಕುಗಳಿಗೆ ಈ ಬಗ್ಗೆ ಸೂಚನೆ ಹೋಗಿದೆ’ ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ‌ ನಿರ್ದೇಶಕಿ ಎನ್‌. ಮಂಜುಶ್ರೀ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು