ಭಾನುವಾರ, ಮೇ 16, 2021
22 °C

ಕೋವಿಡ್‌| ಇಂದಿನ ಸಭೆಯಲ್ಲಿ ಕಠಿಣ ಕ್ರಮ ನಿರ್ಧಾರ: ಸಚಿವ ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರವಾಗಿದ್ದು, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂದು ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಜನಪ್ರತಿನಿಧಿಗಳ ಸಭೆಯಲ್ಲಿ ಎಲ್ಲರ ಸಲಹೆಗಳನ್ನು ಪಡೆದು, ಕಠಿಣ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು. 

ಸುದ್ದಿಗಾರರ ಜೊತೆ ಸೋಮವಾರ ಬೆಳಿಗ್ಗೆ ಮಾತನಾಡಿದ ಅವರು, ‘ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗಳ ಕೊರತೆ ಇದೆ. ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಕೆಲವು ಚಟುವಟಿಕೆಯ ಮೇಲೆ ನಿರ್ಬಂಧ ಮಾಡಬೇಕಾಗುತ್ತದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ವರದಿಯನ್ನೂ ಪರಿಗಣಿಸಲಾಗುವುದು’ ಎಂದರು. 

‘ಲಾಕ್ ಡೌನ್ ಒಂದೇ ಪರಿಹಾರವಲ್ಲ. ಆದರೆ, ಬಿಗಿಯಾದ ಕ್ರಮಗಳು ಮುಖ್ಯ. ವಿರೋಧ ಪಕ್ಷಗಳ ನಾಯಕರ ಜೊತೆಗೂ ಮಾತನಾಡುತ್ತೇವೆ. ಕೋವಿಡ್ ಸೋಂಕಿತರಾಗಿ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರ‍ಪ್ಪ ಅವರು ಆನ್‌ಲೈನ್‌ ಮೂಲಕ (ವರ್ಚವಲ್‌) ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.

‘ಎಲ್ಲವನ್ನೂ ಸಮಗ್ರ ಚರ್ಚೆ ಮಾಡಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಪರಿಸ್ಥಿತಿಯ ಗಂಭೀರತೆ ಜನರಿಗೆ ಅರ್ಥ ಆಗಬೇಕು. ಜಾಗೃತಿ ಮೂಡಿಸಲು ಈಗಾಗಲೇ ಅವಶ್ಯ ಕ್ರಮಗಳನ್ನು  ತೆಗೆದುಕೊಳ್ಳಲಾಗಿದೆ. ಸಭೆಯ ನಂತರ ಇಂದು ಅಥವಾ ನಾಳೆ ಯಾವ ಯಾವ ಬಿಗಿ ಕ್ರಮ ಎಂದು ಎಲ್ಲವೂ ಗೊತ್ತಾಗಲಿದೆ’ ಎಂದರು.

ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಮಾತನಾಡಿ, ‘ಲಾಕ್ ಡೌನ್ ಬೇಡ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಮುಂದಿನ ಪರಿಸ್ಥಿತಿ ಅವಲೋಕಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದರು.

ಆರ್‌.ಆರ್. ನಗರ ಕ್ಷೇತ್ರದ ಶಾಸಕ ಮುನಿರತ್ನ ಮಾತನಾಡಿ, ‘ಕಳೆದ ಬಾರಿ 4-5 ಸಾವಿರ ಪ್ರಕರಣಗಳ ಪತ್ತೆಯಾದಾಗ ಕಷ್ಟಪಟ್ಟಿದ್ದೆವು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭಯಾನಕವಾಗುವ ಸಾಧ್ಯತೆ ಇದೆ. ನಮ್ಮ ಅನಿಸಿಕೆಗಳನ್ನು ಸಚಿವ ಸುಧಾಕರ್ ಗಮನಕ್ಕೆ ತಂದಿದ್ದೇವೆ. ಜೀವ ಉಳಿಸುವುದು ಮುಖ್ಯ. 25 ಸಾವಿರ ಪ್ರಕರಣಗಳು ಬಂದರೆ ಏನು ಮಾಡುವುದು’ ಎಂದು ಪ್ರಶ್ನಿಸಿದರು.

‘ಲಾಕ್ ಡೌನ್ ಬೇಕೊ, ಬೇಡವೊ ಮುಖ್ಯ ಅಲ್ಲ. ಜೀವ ಉಳಿಸಲು ಮೊದಲ ಕ್ರಮ ಆಗಬೇಕು. ಐಸಿಯು, ಬೆಡ್, ಶವ ಸಂಸ್ಕಾರ ಎಲ್ಲ ವಿಚಾರಗಳು ಮುಖ್ಯ. 35ರಿಂದ 45, 50 ವರ್ಷ ವಯಸ್ಸಿನ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ಬೆಂಗಳೂರು ನಗರ ಉಳಿಯಬೇಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು