ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಬಳಕೆ, ಪೂರೈಕೆ ವಿರುದ್ಧ ಮುಲಾಜಿಲ್ಲದೆ ಕ್ರಮ: ಆರಗ ಜ್ಞಾನೇಂದ್ರ

Last Updated 13 ಸೆಪ್ಟೆಂಬರ್ 2022, 16:09 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾದಕ ಪದಾರ್ಥಗಳ ಬಳಕೆ ಹಾಗೂ ಪೂರೈಕೆ ಜಾಲದ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿ‍ಪಿಎಸ್‌) ಕಾಯ್ದೆಯಡಿ ಪೊಲೀಸರು ಈ ವರ್ಷ ಆಗಸ್ಟ್‌ವರೆಗೆ ದಾಖಲಿಸಿಕೊಂಡಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಪ್ರಕಾಶ್ ರಾಥೋಡ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ–ಕಾಲೇಜುಗಳ ಆವರಣದಲ್ಲಿ ಡ್ರಗ್ಸ್‌ ಚಟುವಟಿಕೆ ನಡೆಯದಂತೆ ತಡೆಯಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಸಾಮಾಜಿಕ ಪಿಡುಗಾಗಿ ಬೆಳೆದಿರುವ ಈ ಸಮಸ್ಯೆಯನ್ನು ಬೇರುಸಮೇತ ಕಿತ್ತು ಹಾಕುವ ಕೆಲಸ ಆಗಬೇಕಿದೆ. ಇದಕ್ಕೆ ಪೊಲೀಸರ ಜತೆ ಜನ ಸಾಮಾನ್ಯರೂ ಕೈಜೋಡಿಸಬೇಕು’ ಎಂದೂ ವಿನಂತಿಸಿದರು.

‘ಬೆಂಗಳೂರಿನಲ್ಲಿ ಡ್ರಗ್ಸ್‌ ಅವ್ಯಾಹತವಾಗಿದೆ. ಖಾಲಿ ಜಾಗಗಳು, ವಿವಾದಿತ ಮೈದಾನಗಳು, ಶಾಲಾ–ಕಾಲೇಜು ಆವರಣಗಳಲ್ಲಿ ಡ್ರಗ್ಸ್‌ ಸುಲಭವಾಗಿ ಸಿಗುತ್ತಿದೆ. ಮಿನಿ ಪಂಜಾಬ್‌ ಆಗುತ್ತಿದೆ. ಡ್ರಗ್ಸ್‌ ತಡೆಯಲು ಸರ್ಕಾರ ಎಲ್ಲ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಪ್ರಕಾಶ್ ರಾಥೋಡ್ ಆಗ್ರಹಿಸಿದರು.

‘ನಗರ ಪ್ರದೇಶವಷ್ಟೆ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಗೂಡಂಗಡಿಗಳಲ್ಲಿಯೂ ಡ್ರಗ್ಸ್‌ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು’ ಎಂದು ಬಿಜೆಪಿಯ ಭಾರತಿ ಶೆಟ್ಟಿ ಆಗ್ರಹಿಸಿದರು. ಅದಕ್ಕೆ ತೇಜಸ್ವಿನಿ ಗೌಡ ಕೂಡಾ ದನಿಗೂಡಿಸಿದರು.‌

‘ಡ್ರಗ್ಸ್ ವ್ಯಾಪಕಗೊಳ್ಳಲು ಪೊಲೀಸರು ಕಾರಣರಾಗಿದ್ದಾರೆ. ಪೂರೈಕೆದಾರರ ಜೊತೆ ಪೊಲೀಸರು ಶಾಮೀಲಾಗಿದ್ದಾರೆ’ ಎಂದು ಕಾಂಗ್ರೆಸ್ಸಿನ ಸಲೀಂ ಅಹ್ಮದ್‌ ಆರೋಪಿಸಿದರೆ, ‘ಡ್ರಗ್ಸ್‌ ನಿಯಂತ್ರಣಕ್ಕೆ ಯಾವ ವಿಶೇಷ ಕಾರ್ಯಕ್ರಮ ರೂಪಿಸಿದ್ದೀರಿ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಶ್ನಿಸಿದರು. ಹುಕ್ಕಾ ಬಾರ್‌ಗಳು ಮಾದಕ ವಸ್ತು ಸೇವನೆಯ ಕೇಂದ್ರಗಳಾಗುತ್ತಿವೆ ಎಂದೂ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಮಂಜುನಾಥ ಭಂಡಾರಿ ಮತ್ತು ಎಂ. ನಾಗರಾಜ ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವರು ಪ್ರತಿಕ್ರಿಯಿಸಿ, ‘ಕಳೆದ ಮೂರು ವರ್ಷಗಳಲ್ಲಿ ಮಾದಕ ದ್ರವ್ಯ ಸೇವನೆ, ಮಾರಾಟ ಹಾಗೂ ಸಾಗಣೆ ದಂಧೆಯಲ್ಲಿ ತೊಡಗಿರುವವರ ವಿರುದ್ಧ 14,042 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ. ಈ ಜಾಲದ ಪತ್ತೆಗೆ ಸಿಸಿಬಿ‌ಯಲ್ಲಿ ಪ್ರತ್ಯೇಕ ಘಟಕವನ್ನು ತೆರೆಯಲಾಗಿದೆ’ ಎಂದರು.

ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣಗಳು

ವರ್ಷ; ಪ್ರಕರಣಗಳ ಸಂಖ್ಯೆ

2020; 4,054

2021; 5,782

2022 (ಆಗಸ್ಟ್ 31ರವರೆಗೆ); 4,206

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT