ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ– ಮಹಾರಾಷ್ಟ್ರ ಬಂದ್‌ ಮಾಡಲು MES ನಿರ್ಣಯ

ಕರ್ನಾಟಕದ ವಿರುದ್ಧ ಕೊಲ್ಹಾಪುರದಲ್ಲಿ ಬೃಹತ್‌ ಜಾಥಾ, ಸಮಾವೇಶ ನಡೆಸಿದ ಸರ್ವಪಕ್ಷಗಳ ಕಾರ್ಯಕರ್ತರು
Last Updated 26 ಡಿಸೆಂಬರ್ 2022, 16:29 IST
ಅಕ್ಷರ ಗಾತ್ರ

ಬೆಳಗಾವಿ: ‘ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಖಂಡಿಸಲು ಒಂದು ದಿನ ಮಹಾರಾಷ್ಟ್ರ ಬಂದ್‌ ಮಾಡಬೇಕು. ಇದಕ್ಕೆ ಎಲ್ಲ ಪಕ್ಷಗಳೂ ಬೆಂಬಲ ಕೊಡಬೇಕು’ ಎಂಬ ನಿರ್ಣಯವನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ನಡೆದ ಬೃಹತ್‌ ಸಮಾವೇಶದಲ್ಲಿ ಕೈಗೊಳ್ಳಲಾಗಿದೆ.

ಎಂಇಎಸ್‌ ಬೆಳಗಾವಿಯಲ್ಲಿ ಡಿ.19ರಂದು ಆಯೋಜಿಸಲು ಉದ್ದೇಶಿಸಿದ್ದ ಮಹಾಮೇಳಾವ್‌ಗೆ ಸರ್ಕಾರ ಅನುಮತಿ ನೀಡಲಿಲ್ಲ. ಹೀಗಾಗಿ, ಕೊಲ್ಹಾಪುರದವರೆಗೂ ಬೈಕ್‌ ಜಾಥಾ ಮಾಡಿದ ಸಾವಿರಕ್ಕೂ ಹೆಚ್ಚು ಎಂಇಎಸ್‌ ಕಾರ್ಯಕರ್ಯರು, ಸೋಮವಾರ ಅಲ್ಲಿ ಬೃಹತ್ ಸಮಾವೇಶ ಮಾಡಿದರು.

ಎಂಇಎಸ್‌, ಶಿವಸೇನೆ ಬಣಗಳು, ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಮಹಾ ಅಘಾಡಿಯ ಎಲ್ಲ ಪಕ್ಷಗಳು, ಮರಾಠಿ ಸಂಘಟನೆಗಳೂ ಇದಕ್ಕೆ ಬೆಂಬಲ ನೀಡಿದವು.

‘ಬೆಳಗಾವಿ, ಬೀದರ್‌, ಭಾಲ್ಕಿ, ನಿಪ್ಪಾಣಿ, ಕಾರವಾರ್‌ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು’, ‘ರಹೇಂಗೆ ತೋ ಮಹಾರಾಷ್ಟ್ರ ಮೇ ನಹಿ ತೋ ಜೈಲ್‌ ಮೇ (ಇದ್ದರೆ ಮಹಾರಾಷ್ಟ್ರದಲ್ಲಿ, ಇಲ್ಲದಿದ್ದರೆ ಜೈಲಿನಲ್ಲಿ)’ ಎಂಬ ಘೋಷಣೆ ನಿರಂತರ ಮೊಳಗಿಸಿದ್ದಾರೆ.

ಬೆಳಗಾವಿಯಲ್ಲಿ ಕರ್ನಾಟಕ ವಿಧಾನ ಮಂಡಲದ ಅಧಿವೇಶನ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ರ‍್ಯಾಲಿಗೆ ಸರ್ಕಾರ ಅನುಮತಿ ನಿರಾಕರಿಸಿದೆ. ಅಲ್ಲಿನ ಪೊಲೀಸರು ದಬ್ಬಾಳಿಕೆ ನಡೆಸಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ಅನ್ಯಾಯ ನಾವು ಸಹಿಸುವುದಿಲ್ಲ. ಬೆಳಗಾವಿಯನ್ನು ಯಾವ ಕಾರಣಕ್ಕೂ ಕರ್ನಾಟಕದಲ್ಲಿ ಬಿಡುವುದಿಲ್ಲ. ಕರ್ನಾಟಕ ಸರ್ಕಾರ ಹಾಗೂ ಕನ್ನಡಪರ ಸಂಘಟನೆಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದೂ ಮುಖಂಡರು ವೇದಿಕೆಯಲ್ಲಿ ಘೋಷಣೆ ಮಾಡಿದ್ದಾರೆ.

ಕೊಲ್ಹಾಪುರ ಜಿಲ್ಲಾಧಿಕಾರಿ ರಾಹುಲ್ ರೇಖಾವರ್ ಅವರಿಗೆ ಮನವಿ ಕೂಡ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಮಧ್ಯಸ್ಥಿಕೆ ವಹಿಸಿ ಕರ್ನಾಟಕ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ತಾಕೀತು ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

*

ಸರ್ಕಾರ ನಿಲುವು ಪ್ರಕಟಿಸಲಿ:ಉದ್ಧವ್‌ ಠಾಕ್ರೆ

ಬೆಳಗಾವಿ: ‘ಕರ್ನಾಟಕದಲ್ಲಿರುವ ಮರಾಠಿಗರ ಸುರಕ್ಷತೆಗೆ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂಬುದನ್ನು ಪ್ರಕಟಿಸಬೇಕು’ ಎಂದು ಶಾಸಕ, ಶಿವಸೇನೆ (ಯು) ಅಧ್ಯಕ್ಷ ಉದ್ಧವ್‌ ಠಾಕ್ರೆ ಆಗ್ರಹಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ಮಹಾರಾಷ್ಟ್ರ ಚಳಿಗಾಲದ ಅಧಿವೇಶನದಲ್ಲಿ ಅವರು ಮಾತನಾಡಿದ ವಿಡಿಯೊ ತುಣುಕುಗಳು ಸೋಮವಾರ ಜಿಲ್ಲೆಯಲ್ಲಿ ಹರಿದಾಡಿದವು.

‘ನಮ್ಮ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರೇ ಈ ಹಿಂದೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹಾಡು ಹಾಡಿದ್ದರು. ಇಂಥವರು ಮರಾಠಿಗರನ್ನು ಹೇಗೆ ರಕ್ಷಿಸಲು ಸಾಧ್ಯ? ಒಬ್ಬ ಕನ್ನಡಿಗನಾದರೂ ‘ಹುಟ್ಟಿದರೆ ಮಹಾರಾಷ್ಟ್ರದಲ್ಲಿ ಹುಟ್ಟಬೇಕು’ ಎಂದು ಹಾಡುತ್ತಾನೆಯೇ? ಅದು ಸಾಧ್ಯವಿಲ್ಲ. ಗಡಿ ವಿಚಾರದಲ್ಲಿ ಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಬಹಳ ಗಟ್ಟಿಯಾಗಿ ನಿಂತಂತೆ ಭಾಸವಾಗುತ್ತಿದೆ. ಇಂಥದರಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ದೌರ್ಬಲ್ಯ ಪ್ರದರ್ಶಿಸಬಾರದು. ಏನು ಹೆಜ್ಜೆ ಇಡುತ್ತೀರಿ ಎಂದು ಸದನದಲ್ಲೇ ಹೇಳಬೇಕು’ ಎಂದೂ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಠಾಕ್ರೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT