ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಕ್ಷಣ ಕಂಡಲ್ಲಿ ವಿದ್ಯಾರ್ಥಿಗಳು ಮನೆಗೆ

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸೂಚನೆ
Last Updated 14 ಜೂನ್ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸೂಚಿಸಿದೆ.

ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಯಿತು.

ಶಾಲಾ ಮಕ್ಕಳಲ್ಲಿ ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ತಿಳಿಸಿದರು.

ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಕೋವಿಡ್‌ ಲಸಿಕೆ ಹಾಗೂ ಬೂಸ್ಟರ್‌ ಡೋಸ್‌ ತೆಗೆದುಕೊಂಡಿರುವುದನ್ನು ಶಾಲಾ ಮುಖ್ಯಸ್ಥರು ಖಚಿತ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಖಾಸಗಿ ಶಾಲಾ ಆಡಳಿತ ಮಂಡಳಿಯವರು ಪೋಷಕರೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸಬೇಕು ಎಂದರು.

ಒಂದು ತಿಂಗಳ ಮಟ್ಟಿಗೆ ಶಾಲೆಗಳಲ್ಲಿ ಪ್ರಾರ್ಥನೆ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳ ಮೇಲೆ ಮಿತಿ ಹೇರಬೇಕು ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಕೋರಿದರು.

ಈ ಮಧ್ಯೆ ‘ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ’ ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.

‘ಸ್ಥಳೀಯಮಟ್ಟದಲ್ಲಿ ಪ್ರಕರಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು’ ಎಂದು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಮನವಿ ಮಾಡಿದರು.

ದೃಢ ಪ್ರಮಾಣ ಶೇ 3.14ಕ್ಕೆ ಏರಿಕೆ: ರಾಜ್ಯದಲ್ಲಿ ಕೊರೊನಾ ಸೋಂಕು ದೃಢ ಪ್ರಮಾಣ ಶೇ 3.14ಕ್ಕೆ ಏರಿಕೆಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ 594 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ.

ನಾಲ್ಕು ತಿಂಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇದು. ಮಾರ್ಚ್‌ ಮೊದಲ ವಾರದ ಬಳಿಕ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು. ಏಪ್ರಿಲ್ ತಿಂಗಳಲ್ಲಿ ಈ ಸಂಖ್ಯೆ 50ರ ಆಸುಪಾಸಿನಲ್ಲಿತ್ತು. ಎರಡು ವಾರಗಳಿಂದ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಮಂಗಳವಾರ 9 ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 582 ಮಂದಿಗೆ ಸೋಂಕು ದೃಢಪಟ್ಟಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 3,882ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 3,738 ಸೋಂಕಿತರು ಇದ್ದಾರೆ. ಯಾದಗಿರಿ, ವಿಜಯಪುರ ಸೇರಿದಂತೆ 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳಿಲ್ಲ.

ಒಂದು ದಿನದಲ್ಲಿ 18,883 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 39.57 ಲಕ್ಷ ದಾಟಿದೆ. 39.13 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿ
ಕೊಂಡಿದ್ದಾರೆ.

ಮುನ್ನೆಚ್ಚರಿಕೆ ವಹಿಸಲು ಶಿಕ್ಷಣ ಸಂಸ್ಥೆಗಳಿಗೆ ಸೂಚನೆ
ಎರಡು ಶಾಲೆಯ 31 ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ವಿದ್ಯಾ ಸಂಸ್ಥೆಗಳು ಮತ್ತು ಪೋಷಕರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಬಿಎಂಪಿ ಪಟ್ಟಿ ಮಾಡಿದೆ.

ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಎಚ್ಚರ ವಹಿಸುವುದು ಸೂಕ್ತ ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ ತಿಳಿಸಿದ್ದಾರೆ.

‘ಶಾಲೆಗೆ ಬರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯವನ್ನು ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮೂಲಕ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೇ ಕೋವಿಡ್ ಪರೀಕ್ಷೆಗೆ ಒಳಪಡಿಸಿ ಪ್ರತ್ಯೇಕವಾಗಿ ಇರಿಸಬೇಕು’ ಎಂದು ಸೂಚಿಸಿದ್ದಾರೆ.

‘ಅಂತರ ಕಾಯ್ದುಕೊಳ್ಳುವ ಜತೆಗೆ ಎಲ್ಲರೂಮಾಸ್ಕ್ ಧರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಶಾಲೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಮುಖ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್ ಇರುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

‘ಶಾಲೆಗಳ ಜತೆಗೆ ಪೋಷಕರು ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಮನೆಯಲ್ಲಿ ಎಲ್ಲರೂ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮನೆಯಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆ ಮಾಡಿಸಬೇಕು. ಮಕ್ಕಳಲ್ಲಿ ಲಕ್ಷಣ ಇದ್ದರೆ ಶಾಲೆಗೆ
ಕಳುಹಿಸದೆ ಪ್ರತ್ಯೇಕವಾಗಿ ಇರಿಸಬೇಕು. ಎಲ್ಲಾ ಮಕ್ಕಳಿಗೂ ಲಸಿಕೆ ಕೊಡಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಎರಡು ಶಾಲೆಯ 31 ವಿದ್ಯಾರ್ಥಿಗಳಿಗೆ ಕೋವಿಡ್‌
ಬೆಂಗಳೂರು: ಬಿಬಿಎಂಪಿ ದಾಸರಹಳ್ಳಿ ವಲಯದ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದ್ದು, ಶಾಲೆಗಳ ಎಲ್ಲಾ ಮಕ್ಕಳಿಗೆ ರಜೆ ನೀಡಲಾಗಿದೆ.

‘ಎರಡು ಶಾಲೆಗಳಲ್ಲಿ ಕೋವಿಡ್‌ ಲಸಿಕೆ ಹಾಕುವಾಗ ರೋಗ ಲಕ್ಷಣ ಇದ್ದವರಿಗೆ ಆರ್‌ಎಟಿ(ರ್‍ಯಾಪಿಡ್ ಆ್ಯಂಟಿಜನ್ ಪರೀಕ್ಷೆ) ಮಾಡಲಾಗಿತ್ತು. ಆಗ ಒಂದು ಶಾಲೆಯ ಆರನೇ ತರಗತಿಯ 21 ವಿದ್ಯಾರ್ಥಿಗಳಿಗೆ ಮತ್ತು ಇನ್ನೊಂದು ಶಾಲೆಯ ಐದನೇ ತರಗತಿಯ 10 ಮಕ್ಕಳಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ಎನ್‌.ಬಿ. ರವೀಂದ್ರ ತಿಳಿಸಿದರು.

‘ಎಲ್ಲಾ ಮಕ್ಕಳಿಗೂ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 21 ವಿದ್ಯಾರ್ಥಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನು 10 ವಿದ್ಯಾರ್ಥಿಗಳ ಪರೀಕ್ಷಾ ವರದಿ ಬಂದಿಲ್ಲ’ ಎಂದು ಹೇಳಿದರು.

‘ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಸೋಂಕು ಹರಡದಂತೆ ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಮಾಸ್ಕ್ ಧರಿಸುವುದು, ಅಂತರ ಕಾಯುವುದು ಸೇರಿದಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಪಾಲಿಸಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT