ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ ಶೀಘ್ರ ಸಬ್ಸಿಡಿ ಬಿಡುಗಡೆ: ಸಚಿವ ಎಸ್‌.ಅಂಗಾರ

ಮೀನುಗಾರಿಕೆ ಸಚಿವ ಎಸ್‌. ಅಂಗಾರ ಭರವಸೆ
Last Updated 15 ಮಾರ್ಚ್ 2021, 18:37 IST
ಅಕ್ಷರ ಗಾತ್ರ

ಬೆಂಗಳೂರು: ಮೀನುಗಾರರಿಗೆ ಬಾಕಿ ಇರುವ ಡೀಸೆಲ್‌ ಸಬ್ಸಿಡಿ ಮತ್ತು ರಿಯಾಯಿತಿ ದರದ ಸೀಮೆ ಎಣ್ಣೆಯನ್ನು ತ್ವರಿತವಾಗಿ ಒದಗಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆಯಲಾಗಿದೆ ಎಂದು ಮೀನುಗಾರಿಕಾ ಸಚಿವ ಎಸ್‌. ಅಂಗಾರ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರಿಗೆ ನೆರವು ನೀಡುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ಅವರು ಸೋಮವಾರ ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದರು. ಅದಕ್ಕೆ ಉತ್ತರಿಸಿದ ಅಂಗಾರ, ‘ಡೀಸೆಲ್‌ ಸಬ್ಸಿಡಿ ಪಾವತಿ ಕುರಿತು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ರಿಯಾಯ್ತಿ ದರದಲ್ಲಿ 3,313 ಕಿಲೋ ಲೀಟರ್‌ ಸೀಮೆಎಣ್ಣೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.

‘ಆರು ತಿಂಗಳಿನಿಂದ ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿ ಪಾವತಿಯಾಗಿಲ್ಲ. ಸೀಮೆಎಣ್ಣೆಯನ್ನೂ ಒದಗಿಸಿಲ್ಲ. ಕೋವಿಡ್‌ನಿಂದ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮೀನುಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಡೀಸೆಲ್‌ ಮತ್ತು ಸೀಮೆಎಣ್ಣೆ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕು’ ಎಂದು ಹರೀಶ್‌ ಕುಮಾರ್ ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 57 ಪರ್ಸೀನ್‌ ದೋಣಿಗಳು, 1,327 ಟ್ರಾಲರ್ ದೋಣಿಗಳು, 1,501 ಯಾಂತ್ರೀಕೃತ ನಾಡ ದೋಣಿಗಳು ಮತ್ತು 541 ಯಾಂತ್ರೀಕೃತವಲ್ಲದ ನಾಡ ದೋಣಿಗಳು ಇವೆ. 2019–20ನೇ ಸಾಲಿನಲ್ಲಿ ₹ 2,031.38 ಕೋಟಿ ಮೌಲ್ಯದ 1.80 ಲಕ್ಷ ಟನ್‌ ಮೀನು ಉತ್ಪಾದನೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ನೆರವಿನಲ್ಲಿ ₹ 57.60 ಕೋಟಿ ವೆಚ್ಚದಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಖಾಸಗಿ ವ್ಯಕ್ತಿಯೊಬ್ಬರು ಹೂಡಿರುವ ವ್ಯಾಜ್ಯದಿಂದ ಕಾಮಗಾರಿ ವಿಳಂಬವಾಗಿದೆ. ಶೀಘ್ರದಲ್ಲಿ ಇತ್ಯರ್ಥಪಡಿಸಲಾಗುವುದು. ಕುಳಾಯಿಯಲ್ಲಿ ₹ 196.51 ಕೋಟಿ ವೆಚ್ಚದಲ್ಲಿ ಸರ್ವ ಋತು ಬಂದರು ಮತ್ತು ₹ 3.37 ಕೋಟಿ ವೆಚ್ಚದಲ್ಲಿ ತೋಟ ಬೆಂಗ್ರೆಯಲ್ಲಿ ನಾಡ ದೋಣಿಗಳ ತಂಗುದಾಣ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT