ಸೋಮವಾರ, ನವೆಂಬರ್ 30, 2020
21 °C
ಅಕ್ರಮ ಆಸ್ತಿ ಕುರಿತು ಇ.ಡಿ, ಐಟಿಗೂ ಮಾಹಿತಿ ನೀಡಲು ಭ್ರಷ್ಟಾಚಾರ ನಿಗ್ರಹ ದಳ ಚಿಂತನೆ

ಅಧಿಕಾರಿ ಸುಧಾ ಆಸ್ತಿ ₹50 ಕೋಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಬಿ. ಸುಧಾ

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕೆಎಎಸ್‌ ಅಧಿಕಾರಿ ಬಿ.ಸುಧಾ ಮತ್ತು ಅವರ ಶಂಕಿತ ಬೇನಾಮಿಗಳ ಬಳಿ ಪತ್ತೆಯಾಗಿರುವ ಆಸ್ತಿ ಮತ್ತು ಆರೋಪಿಗಳು ನಡೆಸಿರುವ ಹಣಕಾಸು ವಹಿವಾಟಿನ ಕುರಿತ ಮಾಹಿತಿಯನ್ನು, ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ ಇಲಾಖೆಗಳ ಜತೆ ಹಂಚಿಕೊಳ್ಳಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಚಿಂತನೆ ನಡೆಸಿದೆ.

ಸುಧಾ ಮತ್ತು ಅವರ ಬೇನಾಮಿಗಳು ಎಂದು ಶಂಕಿಸಲಾಗಿರುವವರ ಮನೆಗಳ ಮೇಲೆ ಶನಿವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. 200ಕ್ಕೂ ಹೆಚ್ಚು ಸ್ಥಿರಾಸ್ತಿಗಳ ದಾಖಲೆಗಳು, 50 ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿತ್ತು. ಸುಧಾ ಮತ್ತು ಅವರ ನಿಕಟವರ್ತಿಗಳ ಬಳಿ ಒಟ್ಟು ಪತ್ತೆಯಾಗಿರುವ ಆಸ್ತಿಗಳ ಖರೀದಿ ಸಂದರ್ಭದ ಮೌಲ್ಯ ₹ 50 ಕೋಟಿಗೂ ಹೆಚ್ಚು ಎಂದು ಎಸಿಬಿ ಅಧಿಕಾರಿಗಳು ಪ್ರಾಥಮಿಕ ಅಂದಾಜು ಮಾಡಿದ್ದಾರೆ.

ಆರೋಪಿತ ಅಧಿಕಾರಿ ಮತ್ತು ಅವರ ಆಪ್ತರು ನಡೆಸಿರುವ ಹಲವು ಆರ್ಥಿಕ ವ್ಯವಹಾರಗಳು ಸಂಶಯಾಸ್ಪದ ರೀತಿಯಲ್ಲಿ ಇರುವುದನ್ನು ತನಿಖಾ ತಂಡ ಗುರುತಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆ ಉಲ್ಲಂಘನೆಯ ಪ್ರಕರಣಗಳೂ ಕಂಡುಬಂದಿವೆ. ಆದಾಯ ತೆರಿಗೆ ವಂಚನೆ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಎಸಿಬಿಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೆಲವೇ ದಿನಗಳೊಳಗೆ ಎರಡೂ ತನಿಖಾ ಸಂಸ್ಥೆಗಳ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು