ಶುಕ್ರವಾರ, ಜೂನ್ 25, 2021
21 °C

ಪೂರೈಕೆ ವಿಳಂಬ: ಕೋವಿಡ್‌ ಲಸಿಕೆ ‘ನೋ ಸ್ಟಾಕ್‌’!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಲಸಿಕೆ ಹಾಕಿಸಿಕೊಳ್ಳಲು ಜನರು ವಿವಿಧ ಸರ್ಕಾರಿ– ಖಾಸಗಿ ಆಸ್ಪತ್ರೆಗಳಲ್ಲಿರುವ ಲಸಿಕಾ ಕೇಂದ್ರಗಳತ್ತ ದೌಡಾಯಿಸುತ್ತಿದ್ದಾರೆ. 45 ವರ್ಷ ದಾಟಿದವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗದಿರುವುದರಿಂದ ಹಲವೆಡೆ ‘ನೋ ಸ್ಟಾಕ್‌’ ಫಲಕ ತೂಗು ಹಾಕಲಾಗಿದೆ.

ರಾಜ್ಯದಲ್ಲಿ 60 ವರ್ಷ ದಾಟಿದವರು 35.64 ಲಕ್ಷ ಜನರು ಮೊದಲ ಡೋಸ್‌ ಹಾಕಿಸಿಕೊಂಡಿದ್ದರೆ, ಈ ಪೈಕಿ 8.23 ಲಕ್ಷ ಜನ ಮಾತ್ರ ಎರಡನೇ ಡೋಸ್‌ ಹಾಕಿಸಿಕೊಂಡಿದ್ದಾರೆ. 44ರಿಂದ 59ರ ವಯೋಮಾನದ 36.38 ಲಕ್ಷ ಜನರು ಈಗಾಗಲೇ ಮೊದಲ ಡೋಸ್‌ ಹಾಕಿಸಿಕೊಂಡಿದ್ದು, ಅವರಲ್ಲಿ ಕೇವಲ 3.16 ಲಕ್ಷ ಜನ ಮಾತ್ರ ಎರಡನೇ ಡೋಸ್‌ ಹಾಕಿಸಿಕೊಂಡಿದ್ದಾರೆ. ಬುಧವಾರದ ವೇಳೆಗೆ ಲಸಿಕೆ ತೆಗೆದುಕೊಂಡವರ ಒಟ್ಟು ಸಂಖ್ಯೆ ರಾಜ್ಯದಲ್ಲಿ 1 ಕೋಟಿ ದಾಟಿದೆ.

‘ಕೋವಿಡ್‌ ಎರಡನೇ ಅಲೆ ತೀವ್ರಗೊಂಡ ಬಳಿಕ 44 ವರ್ಷ ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕೇಂದ್ರಗಳಿಗೆ ಬರುತ್ತಿದ್ದಾರೆ. ಅಲ್ಲದೆ, ಅದರಲ್ಲೂ ಮೊದಲ ಡೋಸ್‌ ಪಡೆದುಕೊಂಡವರು ಎರಡನೇ ಡೋಸ್‌ ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಲಸಿಕಾ ಕೇಂದ್ರಗಳಲ್ಲಿ ಜನಸಂದಣಿ ಉಂಟಾಗುತ್ತಿದೆ. ಆದರೆ, ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗುತ್ತಿಲ್ಲ’ ಎಂದು ಲಸಿಕಾ ಕೇಂದ್ರದ ಸಿಬ್ಬಂದಿಯೊಬ್ಬರು ಹೇಳಿದರು.

ಮೊದಲ ಡೋಸ್‌ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರ ಪೈಕಿ, ಬಹುತೇಕರಿಗೆ ಎರಡನೇ ಡೋಸ್‌ ಸಿಕ್ಕಿದೆ. ಆದರೆ, ಕೋವ್ಯಾಕ್ಸಿನ್‌ ನಿರೀಕ್ಷಿತ ಪ್ರಮಾಣದಲ್ಲಿ ಸರಬರಾಜು ಆಗಿಲ್ಲ. ಹೀಗಾಗಿ, ಹಲವು ಜಿಲ್ಲೆಗಳಲ್ಲಿ ಈ ಲಸಿಕೆಯನ್ನು ಮೊದಲ ಡೋಸ್‌ ಹಾಕಿಸಿಕೊಂಡವರು ಲಸಿಕಾ ಕೇಂದ್ರಗಳಿಗೆ ಬಂದು ವಾಪಸ್‌ ಆಗುತ್ತಿದ್ದಾರೆ. ಈ ಪೈಕಿ, ಮೊದಲ ಡೋಸ್‌ ತೆಗೆದುಕೊಂಡು 50 ದಿನ ದಾಟಿದವರೂ ಇದ್ದಾರೆ.

18ರಿಂದ 44 ವರ್ಷ ವಯೋಮಾನದ ವರೆಗಿನವರಿಗೆ ರಾಜ್ಯ ಸರ್ಕಾರ ಲಸಿಕೆ ಖರೀದಿಸಿ ಉಚಿತವಾಗಿ ನೀಡಲು ನಿರ್ಧರಿಸಿದ್ದು, ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮೇ 1ರಂದು ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ಚಾಲನೆ ನೀಡಿದ್ದರು. ಆದರೆ, ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಗೂ ಮೊದಲೇ ತರಾತುರಿಯಲ್ಲಿ ಚಾಲನೆ ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.

18 ವರ್ಷ ದಾಟಿದವರಿಗೆ ಲಸಿಕೆ ನೀಡುವ ಉದ್ದೇಶದಿಂದ 2 ಕೋಟಿ ಡೋಸ್‌ ಕೋವಿಶೀಲ್ಡ್‌ ಖರೀದಿಗೆ ವಾರದ ಹಿಂದೆಯೇ ಉತ್ಪಾದಕ ಕಂಪನಿಗೆ ಸರ್ಕಾರ ಹಣ ಪಾವತಿಸಿದೆ. ಆದರೆ, ಅದರಲ್ಲಿ ಈವರೆಗೆ ಕೇವಲ 3 ಲಕ್ಷ ಮಾತ್ರ ಸರಬರಾಜು ಆಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಮಾತ್ರ 18ರಿಂದ 44 ವರ್ಷದ 5,136 ಜನರಿಗೆ ಲಸಿಕೆ ಹಾಕಲಾಗಿದೆ.

‘ಯುವ ಸಮೂಹಕ್ಕೆ ಲಸಿಕೆ ನೀಡುವ ಉದ್ದೇಶದಿಂದ ಸೋಮವಾರ (ಮೇ 3) ಮತ್ತೆ 1 ಕೋಟಿ ಕೋವ್ಯಾಕ್ಸಿನ್‌ ಡೋಸ್‌ ಖರೀದಿಸಲು ಸರ್ಕಾರ ಉತ್ಪಾದಕ ಕಂಪನಿಗೆ ಹಣ ಪಾವತಿಸಿದೆ. ಹೀಗೆ, ಈವರೆಗೆ ಒಟ್ಟು 3 ಕೋಟಿ ಡೋಸ್‌ ಕೋವಿಡ್‌ ಲಸಿಕೆ ಖರೀದಿಗೆ ಹಣ ಪಾವತಿಸಲಾಗಿದೆ. ಆದರೆ, ಕೇವಲ 3 ಲಕ್ಷ ಕೋವಿಶೀಲ್ಡ್‌ ಮಾತ್ರ ಪೂರೈಕೆ ಆಗಿದೆ. ಸದ್ಯ ಅದನ್ನು ಮಾತ್ರ 18 ವರ್ಷ ದಾಟಿದವರಿಗೆ ನೀಡುತ್ತಿದ್ದೇವೆ’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಮಾಹಿತಿ ನೀಡಿದರು.

‘ಮುಂದಿನ ವಾರದಲ್ಲಿ ಸುಮಾರು 7 ಲಕ್ಷ ಕೋವಿ ಶೀಲ್ಡ್‌ ಕಳುಹಿಸುವುದಾಗಿ ಕಂಪನಿಯವರು ಭರವಸೆ ನೀಡಿದ್ದಾರೆ. ಕೋವ್ಯಾಕ್ಸಿನ್‌ಗೆ ₹ 400, ಕೋವಿಶೀಲ್ಡ್‌ಗೆ ₹ 300 ದರ ನೀಡಿ ಸರ್ಕಾರ ಖರೀದಿಸುತ್ತಿದೆ. 45 ವರ್ಷ ದಾಟಿದವರಿಗೆ ನೀಡಲು ಕೇಂದ್ರ ಸರ್ಕಾರ ಸೋಮವಾರ 5 ಲಕ್ಷ ಕೋವಿಶೀಲ್ಡ್‌ ಪೂರೈಸಿದೆ. ಜಿಲ್ಲೆಗಳಲ್ಲಿ ಈಗಾಗಲೇ ಲಸಿಕೆ ಪಡೆದವರ ಸರಾಸರಿ ಆಧರಿಸಿ, ಬಂದ ಡೋಸ್‌ಗಳನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಕೋವ್ಯಾಕ್ಸಿನ್‌ ಲಸಿಕೆ 2–3 ದಿನಗಳಲ್ಲಿ ಪೂರೈಕೆ ಆಗಬಹುದು’ ಎಂದರು.

‘ನಮ್ಮಲ್ಲಿ ಸದ್ಯ 5.75 ಲಕ್ಷ ಕೋವಿಶೀಲ್ಡ್ ಲಸಿಕೆ ಇದೆ. ಕೋವ್ಯಾಕ್ಸಿನ್‌ ಕೇವಲ 30 ಸಾವಿರ ಡೋಸ್‌ ಮಾತ್ರ ಇದೆ. ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ನಿರುತ್ಸಾಹ ತೋರಿಸಿದ್ದರು. ಈಗ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಉತ್ಪಾದಕ ಕಂಪನಿಗಳು ಸರ್ಕಾರಿ ವಲಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಮಾಡದೇ ಇರುವುದರಿಂದ ಸಮಸ್ಯೆ ಆಗಿದೆ. 3 ದಿನಗಳಿಗೊಮ್ಮೆ ಕೇಂದ್ರದಿಂದ 4 ಲಕ್ಷದಿಂದ 5 ಲಕ್ಷ ಡೋಸ್‌ ಪೂರೈಕೆ ಆಗುತ್ತಿದೆ. ಆರೋಗ್ಯ ಇಲಾಖೆಯಿಂದ ಗುರುತಿಸಿದ್ದ ಖಾಸಗಿ ಲಸಿಕಾ ಕೇಂದ್ರಗಳಿಗೆ ಈವರೆಗೆ ಸರ್ಕಾರಕ್ಕೆ ಬಂದ ಡೋಸ್‌ಗಳನ್ನೇ ಕಳುಹಿಸುತ್ತಿದ್ದೆವು. ಇನ್ನು ಮುಂದೆ ಖಾಸಗಿಯವರು ನೇರವಾಗಿ ಉತ್ಪಾದಕ ಕಂಪನಿಗಳಿಂದ ಖರೀದಿಸಿ ಲಸಿಕೆ ವಿತರಿಸಬೇಕು’ ಎಂದರು.

*
ಲಸಿಕೆ ಅಭಾವದಿಂದ 18ರಿಂದ 44 ವಯೋಮಾನದವರಿಗೆ ಲಸಿಕೆ ನೀಡುವ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಮೇ 2ನೇ ವಾರದಲ್ಲಿ 15 ಲಕ್ಷ ಡೋಸ್‌ ಲಸಿಕೆ ಬರುವ ನಿರೀಕ್ಷೆಯಿದೆ.
-ಡಾ.ಸಿ.ಎನ್‌. ಆಶ್ವತ್ಥನಾರಾಯಣ, ಕೋವಿಡ್‌ ಕಾರ್ಯಪಡೆ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು