ಶನಿವಾರ, ಜುಲೈ 2, 2022
20 °C
ನಿಲುವು ಪ್ರಕಟಿಸುವಂತೆ ಸರ್ಕಾರಕ್ಕೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ: ಏ.14ರವರೆಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಏಪ್ರಿಲ್ 14ರ ಒಳಗೆ ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಇದು ನಮ್ಮ ಕೊನೆಯ ಗಡುವು‘ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

’ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಕುರಿತು ವಿಧಾನಮಂಡಲ ಅಧಿವೇಶನದ ಮುಕ್ತಾಯವಾಗುವ ಮುನ್ನವೇ ಹಿಂದುಳಿದ ವರ್ಗದ ಆಯೋಗದಿಂದ ವರದಿ ಪಡೆಯುವಂತೆ ಆಗ್ರಹಿಸಲಾಗಿತ್ತು. ಆದರೆ, ಅಧಿವೇಶನ ಮುಗಿಯುತ್ತ ಬಂದಿದ್ದರೂ ಸರ್ಕಾರ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವೇಳೆ, ಸರ್ಕಾರ ಇದೇ ಧೋರಣೆ ಮುಂದುವರಿಸಿದರೆ ಮಾರ್ಚ್ 31ರಂದು ಸಮುದಾಯದ ಮುಖಂಡರ ಸಭೆ ಕರೆದು ಮುಂದಿನ ಹೋರಾಟದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು‘ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ಸರ್ಕಾರದ ಮೇಲೆ ನಂಬಿಕೆ ಇಟ್ಟು ಪದೇ ಪದೇ ಗಡುವು ನೀಡಿದ್ದೇವೆ. ಮೀಸಲಾತಿ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲೂ ಪಂಚಮಸಾಲಿ ಸಮಾಜದ ಬಗ್ಗೆ ಚರ್ಚೆಯಾಗಿಲ್ಲ. ಅಧಿವೇಶನ ಮುಗಿಯುವ ಮುನ್ನ ಮೀಸಲಾತಿ ಕುರಿತು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ, ಈಗ ಮೌನವಹಿಸಿದ್ದಾರೆ. ಬೊಮ್ಮಾಯಿ ಅವರು ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಂತೆ ಸಮುದಾಯಕ್ಕೆ ಕೈ ಕೊಡುವುದಿಲ್ಲ ಎಂದು ನಂಬಿದ್ದೇವೆ. ಹತ್ತು ವರ್ಷಗಳ ಕಾಲ ಪಂಚಮಸಾಲಿ ಸಮಾಜ ಯಡಿಯೂರಪ್ಪ ಅವರನ್ನು ನಂಬಿತ್ತು. ಈಗಿನ ಸನ್ನಿವೇಶಗಳನ್ನು ನೋಡಿದರೆ ಬೊಮ್ಮಾಯಿ ಅವರ ಮೇಲೆಯೂ ಸಮಾಜ ನಂಬಿಕೆ ಕಳೆದುಕೊಳ್ಳಬಹುದು‘ ಎಂದರು.

’ಇದೇ 30ರ ಒಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ನಿರ್ಧಾರ ಪ್ರಕಟಿಸಬೇಕು. ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಬಗ್ಗೆ ಸ್ಪಷ್ಟವಾದ ನಿಲುವು ತಿಳಿಸಬೇಕು. ಯಾವುದೇ ರೀತಿಯ ದ್ವಂದ್ವ ನಿಲುವು ಅನುಸರಿಸಬಾರದು. ನಮ್ಮ ಜನಾಂಗ ನಂಬಿದರೆ ಪ್ರಾಣ ಕೊಡಲು ಸಿದ್ಧವಿದೆ. ನಂಬಿಕೆ ಕಳೆದುಕೊಂಡರೆ ಪಂಚಮಸಾಲಿ ಸಮುದಾಯ ಅಸಮಾಧಾನಗೊಳ್ಳಲಿದೆ. ಬೇರೆ ಸ್ವಾಮೀಜಿಗಳ ರೀತಿ ಅನುದಾನ ನೀಡಿ ಎಂದು ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೋಗಿಲ್ಲ. ಸಮಾಜಕ್ಕೆ ನ್ಯಾಯ ಕಲ್ಪಿಸುತ್ತಾರೆ ಎನ್ನುವ ಭರವಸೆ ಮಾತ್ರ ಹೊಂದಿದ್ದೇವೆ’ ಎಂದರು.

ಹೈಕೋರ್ಟ್‌ ಆದೇಶ ಪಾಲಿಸಿ : ಸ್ವಾಮೀಜಿಗಳ ಪೇಟ ಹೇಳಿಕೆ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ’ಈ ವಿಷಯದಿಂದ ಎಲ್ಲ ಧರ್ಮಗಳು ದೂರ ಉಳಿದಿದ್ದೇವೆ. ನಮ್ಮನ್ನು ಈ ವಿಷಯದಲ್ಲಿ ಎಳೆತರಬೇಡಿ. ಶಾಲಾ ಮಕ್ಕಳ ವಿಚಾರ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪು ಪಾಲಿಸಬೇಕು‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು