ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಎದುರೇ ಸ್ವಾಮೀಜಿ ಆತ್ಮಹತ್ಯೆ ಯತ್ನ

ನ್ಯಾಯ ದೊರಕಿಸಿಕೊಡುವಂತೆ ಬಿ. ಶ್ರೀರಾಮುಲುಗೆ ತಿಪ್ಪೇರುದ್ರ ಸ್ವಾಮೀಜಿ ಮನವಿ
Last Updated 13 ಫೆಬ್ರುವರಿ 2021, 16:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ಮನನೊಂದ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ಅವರು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿದ್ದ ಸಚಿವರ ಭೇಟಿಗೆ ಬಂದಿದ್ದ ಸ್ವಾಮೀಜಿ ವಿಷ ಸೇವಿಸಲು ಮುಂದಾದರು. ಆತ್ಮಹತ್ಯೆ ಯತ್ನವನ್ನು ತಡೆದ ಸಚಿವರು ಹಾಗೂ ಪೊಲೀಸರು ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಸ್ವಾಮೀಜಿ ಪ್ರಣಾಪಾಯದಿಂದ ಪಾರಾಗಿದ್ದಾರೆ.

ಕಪರ್ದಿ ಸಿದ್ದಲಿಂಗ ಸ್ವಾಮೀಜಿ ಅವರು ನಿಧನರಾದ ಬಳಿಕ ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನಕ್ಕೆ ಬಸವಕುಮಾರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿತ್ತು. ಈ ನೇಮಕವನ್ನು ತಿಪ್ಪೇರುದ್ರ ಸ್ವಾಮೀಜಿ ವಿರೋಧಿಸಿದ್ದರು. ಸಚಿವ ಶ್ರೀರಾಮುಲು ಅವರಿಗೆ ಬರೆದ ಡೆತ್‌ನೋಟ್‌ ಮಾದರಿಯ ಪತ್ರ ಸ್ವಾಮೀಜಿ ಬಳಿ ಪತ್ತೆಯಾಗಿದೆ.

‘ಯೋಗವನ ಬೆಟ್ಟ ಮತ್ತು ಗಾಣಿಗ ಗುರುಪೀಠದ ಪೀಠಾಧ್ಯಕ್ಷ ಬಸವಕುಮಾರ ಸ್ವಾಮೀಜಿ, ಮಾಜಿ ಶಾಸಕ ಎಸ್‌.ಕೆ. ಬಸವರಾಜನ್ ಹಾಗೂ ಪವಿತ್ರಾ ಎಂಬ ಮಹಿಳೆಯಿಂದ ನನಗೆ ಅನ್ಯಾಯವಾಗಿದೆ. ನನ್ನ ಸಾವಿಗೆ ಇವರೇ ಕಾರಣ. ನನ್ನ ಜತೆ ಯೋಗವನ ಬೆಟ್ಟಕ್ಕಾಗಿ ದುಡಿದವರಿಗೆ ರಕ್ಷಣೆ ಒದಗಿಸುವ ಮೂಲಕ ನ್ಯಾಯ ಕೊಡಿಸಿ’ ಎಂದು ಪತ್ರದಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

‘ಯೋಗವನ ಬೆಟ್ಟದಲ್ಲಿ ಧರ್ಮ ಪ್ರಚಾರ, ಸಮಾಜ ಸೇವೆ ಮಾಡಿಕೊಂಡಿದ್ದ ನನ್ನನ್ನು ಅಲ್ಲಿಂದ ಹೊರಹಾಕಲು ಷಡ್ಯಂತ್ರ ಮಾಡಲಾಗಿದೆ. ಇವರೆಲ್ಲರೂ ಮಾತಿಗೆ ತಪ್ಪಿ ನಡೆದಿದ್ದಾರೆ. ಸರಿಯಾದ ಪರಿಹಾರ ನೀಡದೆಯೇ ವಂಚಿಸಿದ್ದಾರೆ. ನನ್ನನ್ನು ಬೀದಿಗೆ ತಳ್ಳಿ, ಜೊತೆಗಿದ್ದವರ ಬದುಕನ್ನು ಮೂರಾಬಟ್ಟೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸರ್ಕಾರದ ಆಸ್ತಿ ಕಬಳಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಹಣ, ಅಧಿಕಾರದ ಮುಂದೆ ನನ್ನ ಹೋರಾಟದ ಪ್ರಯತ್ನ ಫಲ ಕೊಡಲಿಲ್ಲ. ಹೀಗಾಗಿ ಆತ್ಮಹತ್ಯೆಗೆ ನಿರ್ಧರಿಸಿದೆ. ಎಸ್‌.ಕೆ. ಬಸವರಾಜನ್ ಅವರು ವಿಶ್ವಾಸ ದ್ರೋಹ ಮಾಡಿದ್ದಾರೆ. ತಪ್ಪಿತಸ್ಥರಿಗೆ ಸರ್ಕಾರ ಶಿಕ್ಷೆ ಕೊಡಿಸಬೇಕು. ಬೆಟ್ಟಕ್ಕಾಗಿ ದುಡಿದ ಪೂರ್ಣಾನಂದ ಸ್ವಾಮೀಜಿ, ರುದ್ರಪ್ಪ, ಕಮಲಮ್ಮ ಅವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಕೋರಿದರು.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ತುಮಕೂರು ಜಿಲ್ಲೆಯ ಕುಣಿಗಲ್‌, ರಾಮನಗರ ಜಿಲ್ಲೆಯ ಕನಕಪುರ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಯೋಗವನ ಬೆಟ್ಟಗಳಿವೆ. ಕುಣಿಗಲ್‌ ಯೋಗವನ ಬೆಟ್ಟದ ಉಸ್ತುವಾರಿಯನ್ನು ತಿಪ್ಪೇರುದ್ರ ಸ್ವಾಮೀಜಿ ನೋಡಿಕೊಳ್ಳುತ್ತಿದ್ದರು. ಯೋಗವನ ಬೆಟ್ಟದ ಪೀಠಾಧ್ಯಕ್ಷರ ನೇಮಕವಾದ ಬಳಿಕ ಸ್ವಾಮೀಜಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

***

ತಿಪ್ಪೇರುದ್ರ ಸ್ವಾಮೀಜಿ ಅವರು ಗುರುಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಅವರ ಬಗೆಗೆ ವೈಯಕ್ತಿಕ ದ್ವೇಷವಿಲ್ಲ. ಟ್ರಸ್ಟ್ ಪದಾಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಲು ಅವರಿಗೆ ಅವಕಾಶವಿತ್ತು.

–ಬಸವಕುಮಾರ ಸ್ವಾಮೀಜಿ,ಪೀಠಾಧ್ಯಕ್ಷರು, ಯೋಗವನಬೆಟ್ಟ

***

‘ಪರಿಹಾರ ಪಡೆದು ಹೊರಹೋಗಿದ್ದರು’

‘ಕುಣಿಗಲ್‌ ಬೆಟ್ಟದಲ್ಲಿದ್ದ ತಿಪ್ಪೇರುದ್ರ ಸ್ವಾಮೀಜಿ ಹಾಗೂ ಹಿಂದಿನ ಪೀಠಾಧ್ಯಕ್ಷರ ನಡುವೆ ಭಿನ್ನಾಭಿಪ್ರಾಯ ಇತ್ತು. ಆಗಲೇ ಅವರು ಪತ್ರ ಬರೆದಿಟ್ಟು ಪರಿಹಾರ ಪಡೆದಿದ್ದರು. ಉತ್ತರಾಧಿಕಾರಿ ಪಟ್ಟ ಬೇಕಿದ್ದರೆ ಕಾನೂನು ಹೋರಾಟ ಮಾಡಲಿ. ಅವರು ಸಾಯುವ ಉದ್ದೇಶದಿಂದ ವಿಷ ಸೇವಿಸಿಲ್ಲ. ಇದೊಂದು ನಾಟಕ ಅಷ್ಟೇ’ ಎಂದು ಮಾಜಿ ಶಾಸಕ ಎಸ್‌.ಕೆ.ಬಸವರಾಜ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT