ಬುಧವಾರ, ಮೇ 25, 2022
29 °C
ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್‌ ಜಯಂತ್ಯುತ್ಸವ– ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ

ವರ್ಷದೊಳಗೆ ತಾಂಡಾ ಆಗಲಿದೆ ಕಂದಾಯ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂರಗೊಂಡನಕೊಪ್ಪ (ನ್ಯಾಮತಿ): ‘ಒಂದು ವರ್ಷದೊಳಗೆ ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಸೂರಗೊಂಡನಕೊಪ್ಪದಲ್ಲಿ ಭಾನುವಾರ ನಡೆದ ಸಂತ ಸೇವಾಲಾಲ್‌ ಅವರ 282ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಕ್ರಿಯೆಗೆ ಚುರುಕು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ವರ್ಷ ಸೇವಾಲಾಲ್‌ ಜಯಂತಿಗೆ ಬರುವುದರೊಳಗೆ ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇನೆ’ ಎಂದು ಹೇಳಿದರು.

₹ 50 ಕೋಟಿ ಅನುದಾನದಲ್ಲಿ ರಾಜ್ಯದಲ್ಲಿ ‘ತಾಂಡಾ ಇಕೊ ವಿಲೇಜ್‌’ಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದೂ ಹೇಳಿದರು.

ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನಕ್ಕೆ ₹ 10 ಕೋಟಿ ಅನುದಾನವನ್ನು ನೀಡಲಾಗುವುದು. ಚಿನ್ನಿಕಟ್ಟೆ ಗ್ರಾಮದಿಂದ ಸೂರಗೊಂಡನಕೊಪ್ಪ ಕ್ಷೇತ್ರದವರೆಗಿನ ರಸ್ತೆಯನ್ನು ಅಭಿವೃದ್ಧಿಗೊಳಿಸಲು ₹ 10 ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಸೂರಗೊಂಡನಕೊಪ್ಪಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ಭಾಯಾಗಡದಲ್ಲಿ ರೈಲು ನಿಲ್ದಾಣ ನಿರ್ಮಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ನಮ್ಮ ಸರ್ಕಾರದ ಅವಧಿಯಲ್ಲೇ ಕಾನೂನು ತರಲಾಗಿದೆ. ಆದರೆ, ಈಗ ಬೇರೆಯವರು ತಾವೇ ಮಾಡಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದು, ಅದು ಶುದ್ಧ ಸುಳ್ಳು. ಸರ್ಕಾರ ಕೂಡಲೇ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಈ ಬಗ್ಗೆ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲೂ ಧ್ವನಿ ಎತ್ತುತ್ತೇನೆ’ ಎಂದು ಭರವಸೆ ನೀಡಿದರು.

ಸಚಿವರಾದ ಬಿ. ಶ್ರೀರಾಮುಲು, ಪ್ರಭು ಚವ್ಹಾಣ್‌, ಬೈರತಿ ಬಸವರಾಜ, ಆರ್‌. ಶಂಕರ್‌ ಹಾಗೂ ಸಂಸದರಾದ ಜಿ.ಎಂ. ಸಿದ್ದೇಶ್ವರ, ಬಿ.ವೈ. ರಾಘವೇಂದ್ರ ಅವರೂ ಹಾಜರಿದ್ದರು.

‘ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ’
ಹಲವು ಸಮುದಾಯಗಳ ಸ್ವಾಮೀಜಿಗಳು ಮೀಸಲಾತಿ ಬಗ್ಗೆ ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ, ವಾಲ್ಮೀಕಿ ಸೇರಿ ಹಲವು ಸಮುದಾಯದ ಸ್ವಾಮೀಜಿಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಯಾವ ರೀತಿ ಸೌಲಭ್ಯಗಳನ್ನು ಕೊಡಬಹುದು ಎಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಸ್ವಾಮೀಜಿಗಳು ಯಾವುದೇ ಸಂಶಯ ಇಟ್ಟುಕೊಳ್ಳುವುದು ಬೇಡ’ ಎಂದು ಹೇಳಿದರು.

‘ಅನ್ನಭಾಗ್ಯಕ್ಕೆ ಅಪ್ಪನ ಮನೆ ಹಣ ಕೊಡುತ್ತಿಲ್ಲ’
ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಅನ್ನಭಾಗ್ಯಕ್ಕೆ ನನ್ನ ಅಪ್ಪನ ಮನೆಯಿಂದ ಹಣವನ್ನು ಕೊಟ್ಟಿರಲಿಲ್ಲ. ಅದೇ ರೀತಿ ಈಗ ಸರ್ಕಾರ ನಡೆಸುತ್ತಿರುವವರೂ ಅವರ ಅಪ್ಪನ ಮನೆಯಿಂದ ಹಣ ತಂದು ಕೊಡುತ್ತಿಲ್ಲ. ಜನರ ತೆರಿಗೆ ಹಣದಿಂದಲೇ ಕೊಡಲಾಗುತ್ತಿದೆ. ಬಡವರಿಗೆ ಅನುಕೂಲವಾಗುತ್ತಿದ್ದ ಇಂದಿರಾ ಕ್ಯಾಂಟೀನ್‌ ಸಹ ನಿಲ್ಲಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಮೇಲಿದ್ದ ರೇಣುಕಾಚಾರ್ಯ ಅವರು ಕೋವಿಡ್‌ ಕಾರಣಕ್ಕೆ ಅಕ್ಕಿ ವಿತರಣೆ ಪ್ರಮಾಣ ಕಡಿತಗೊಳಿಸಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದಾಗ, ‘ಇದರಿಂದ ಎಷ್ಟು ಹಣ ಉಳಿಯುತ್ತಿತ್ತು? ಬೇರೆ ಯೋಜನೆಗೆ ₹ 500 ಕೋಟಿ ನೀಡುವಾಗ ಹಣ ಕೊರತೆಯಾಗಿಲ್ಲವೇ’ ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು