ಸೋಮವಾರ, ಜೂನ್ 14, 2021
23 °C

ತೌಕ್ತೆ: ಮೇ 20ರ ವರೆಗೆ ಭಾರಿ ಮಳೆ ಸಾಧ್ಯತೆ, ಕರಾವಳಿಯಲ್ಲಿ ರೆಡ್‌ ಅಲರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತೌಕ್ತೆ’ ಚಂಡಮಾರುತದ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಮೇ 20ರವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಚಂಡಮಾರುತ ಪ್ರಸ್ತುತ ಪೂರ್ವ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿದೆ. ಇದು, ಇನ್ನಷ್ಟು ತೀವ್ರಗೊಂಡು ಉತ್ತರ ದಿಕ್ಕಿನೆಡೆಗೆ ಚಲಿಸುವ ಸಾಧ್ಯತೆಗಳಿವೆ. ರಾಜ್ಯದ ಕರಾವಳಿಯನ್ನು ದಾಟಿ, ಮೇ 18ರಂದು ಗುಜರಾತ್‌ ಕರಾವಳಿ ತಲುಪಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

‘ಚಂಡಮಾರುತದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ.  ಅಲ್ಲದೆ, ಒಳನಾಡಿನಲ್ಲೂ ಮುಂದಿನ ಐದು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೇ 16ರಂದು ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಈ ಸಮಯದಲ್ಲಿ ಗರಿಷ್ಠ 20 ಸೆಂ.ಮೀ ಮಳೆಯಾಗುವ ಮುನ್ಸೂಚನೆ ಇದೆ’ ಎಂದು ವಿವರಿಸಿದರು.

ಎಲ್ಲೆಲ್ಲಿ ಅಲರ್ಟ್‌?

ಮೇ 17ರವರೆಗೆ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಹಾವೇರಿ, ಗದಗ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮಂಡ್ಯ, ಮೈಸೂರಿಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ.

ಕರಾವಳಿಯಲ್ಲಿ ಚಂಡಮಾರುತದ ತೀವ್ರತೆ ಇರುವುದರಿಂದ ಗಂಟೆಗೆ 70 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಎತ್ತರದ ಅಲೆಗಳೂ ಏಳುತ್ತಿರುವುದರಿಂದ ಮೀನುಗಾರರು ಮುಂದಿನ ಐದೂ ದಿನ ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ. 

ಮಳೆ–ಎಲ್ಲಿ,ಎಷ್ಟು?

ಮಂಗಳೂರಿನಲ್ಲಿ ಶನಿವಾರ ಗರಿಷ್ಠ 8 ಸೆಂ.ಮೀ ಮಳೆಯಾಗಿದೆ. ಸುಳ್ಯ 5, ಭಾಗಮಂಡಲ 4, ಮೂಡುಬಿದರೆ, ಪುತ್ತೂರು, ಕಾರ್ಕಳ, ವಿರಾಜಪೇಟೆ 3, ಮಡಿಕೇರಿ, ಹಾಸನ 2, ಬೆಳ್ತಂಗಡಿ, ಕುಂದಾಪುರ, ಅಂಕೋಲಾ ಹಾಗೂ ಕಾರವಾರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು