ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಪತಿ ಪೀಠ ಏರಿದ ಶಿಕ್ಷಕ

Last Updated 9 ಫೆಬ್ರುವರಿ 2021, 16:39 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಪರಿಷತ್ತಿನ ಸಭಾಪತಿಯಾಗಿ ಮಂಗಳವಾರ ಆಯ್ಕೆಯಾಗಿರುವ ಜೆಡಿಎಸ್‌ ಪಕ್ಷದ ಬಸವರಾಜ ಹೊರಟ್ಟಿ ಸದನದ ಅತಿ ಹಿರಿಯ ಸದಸ್ಯರು.

ಬಾಗಲಕೋಟ ಜಿಲ್ಲೆಯ ಯಡಳ್ಳಿಯಲ್ಲಿ 1946ರ ಏಪ್ರಿಲ್‌ 14ರಂದು ಶಿಕ್ಷಕರ ಮಗನಾಗಿ ಜನಿಸಿದ ಬಸವರಾಜ ಹೊರಟ್ಟಿ, ನಂತರ ಬಿ.ಎ, ಎಂಪಿ.ಇಡಿ ಪದವಿಗಳನ್ನು ಪಡೆದು ಶಿಕ್ಷಕರಾದರು. ‌ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಪ್ರೌಢಶಾಲೆಯಲ್ಲಿ 1975ರ ಸುಮಾರಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಹೊರಟ್ಟಿ, ಶಿಕ್ಷಕರ ಪರ ಹೋರಾಟದ ಮುಂಚೂಣಿಯಲ್ಲಿದ್ದರು. 1980ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು. ಅಂದಿನಿಂದ ಸತತ ಏಳನೇ ಬಾರಿಗೆ ಮೇಲ್ಮನೆ ಪ್ರವೇಶಿಸಿ ದಾಖಲೆ ಬರೆದಿದ್ದಾರೆ.

2004ರಿಂದ 2007ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ, ಸಣ್ಣ ಉಳಿತಾಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿರುವ ಹೊರಟ್ಟಿ, 2018ರ ಜೂನ್‌ 21ರಿಂದ ಡಿಸೆಂಬರ್‌ 12ರವರೆಗೆ ವಿಧಾನ ಪರಿಷತ್‌ನ ಹಂಗಾಮಿ ಸಭಾಪತಿಯಾಗಿಯೂ ಕೆಲಸ ಮಾಡಿದ್ದಾರೆ.

ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಸೇರಿದಂತೆ ಶಿಕ್ಷಕರ ಹಲವು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿರುವ ಬಸವರಾಜ ಹೊರಟ್ಟಿ, ನಾಲ್ಕು ಬಾರಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT