ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯಶಾಸ್ತ್ರ ಅಭ್ಯರ್ಥಿಗಳಿಗೆ ಫಲಿಸದ ಉದ್ಯೋಗ

ಶಿಕ್ಷಕರ ಅರ್ಹತಾ ಪರೀಕ್ಷೆ ತೇರ್ಗಡೆಯಾದರೂ ಅವಕಾಶ ನೀಡದ ಸರ್ಕಾರ
Last Updated 1 ಡಿಸೆಂಬರ್ 2022, 18:42 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ತೇರ್ಗಡೆಯಾದರೂ, ನೇಮಕಾತಿಗೆ ಪರಿಗಣಿಸದ ಕಾರಣ ವಾಣಿಜ್ಯಶಾಸ್ತ್ರ ಬಿ.ಇಡಿ ಪದವೀಧರ ಅಭ್ಯರ್ಥಿಗಳು ಉದ್ಯೋಗಾವಕಾಶ ಕಳೆದುಕೊಂಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ (6ರಿಂದ8ನೇ ತರಗತಿ) ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಇದೇ ವರ್ಷದ ಮಾರ್ಚ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದಕ್ಕೂ ಮೊದಲು ಟಿಇಟಿ ತೇರ್ಗಡೆಯಾಗಿದ್ದ ಇತರೆ ವಿಷಯಗಳ ಪದವೀಧರರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಾಣಿಜ್ಯಶಾಸ್ತ್ರ ಪದವೀಧರರನ್ನು ಮಾತ್ರ ಪ್ರಕ್ರಿಯೆಯಿಂದ ಹೊರಗಿಟ್ಟಿದೆ.

‘ಸರ್ಕಾರ 2015 ರಿಂದ ವಾಣಿಜ್ಯಶಾಸ್ತ್ರ ಪದವೀಧರರಿಗೂ ಬಿ.ಇಡಿ ಮಾಡುವ ಅವಕಾಶ ಕಲ್ಪಿಸಿದೆ. 2020ರಿಂದ ಇಲ್ಲಿಯವರೆಗೂ ಮೂರು ಬಾರಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆದಿದೆ. ಐದು ಸಾವಿರಕ್ಕೂ ಹೆಚ್ಚು ವಾಣಿಜ್ಯಶಾಸ್ತ್ರ ಬಿ.ಇಡಿ ಪದವೀಧರರು ತೇರ್ಗಡೆಯಾಗಿ ದ್ದಾರೆ. ಪ್ರತಿ ಬಾರಿಯ ನೇಮಕಾತಿ
ಯಲ್ಲೂ ಇದೇ ರೀತಿ ಕಡೆಗಣಿಸ ಲಾಗಿದೆ’ ಎನ್ನುತ್ತಾರೆ ಶಿಕ್ಷಕರ ಅರ್ಹತಾ ಪರೀಕ್ಷೆ ತೇರ್ಗಡೆಯಾಗಿರುವ ಎಂ.ಆರ್‌.ಕಿರಣ್‌, ಸೌಮ್ಯಾ, ಶ್ರೀಶೈಲ, ಮಹೇಶ್ವರಿ ಅಣ್ಣಿಗೇರಿ.

ವಿಷಯಗಳಿದ್ದರೂ ಕಡೆಗಣನೆ: ‘ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ (6ರಿಂದ 8ನೇ ತರಗತಿ) ಸಮಾಜ ವಿಜ್ಞಾನದಲ್ಲಿ ಬೋಧನಾ ಶಾಸ್ತ್ರವಿದೆ. ಪ್ರೌಢಶಾಲೆಗಳಲ್ಲಿ ವ್ಯವಹಾರ ಅಧ್ಯಯನವಿದೆ. ಬಿ.ಇಡಿಯಲ್ಲಿ ಕನ್ನಡ, ಇತಿಹಾಸ, ಇಂಗ್ಲಿಷ್, ಮನೋವಿಜ್ಞಾನ ಅಧ್ಯಯನ ಮಾಡಿರುತ್ತೇವೆ. ಹಾಗಾಗಿ, ಸಮಾಜ ವಿಜ್ಞಾನ ವಿಷಯಕ್ಕೆ ಶಿಕ್ಷಕರಾಗಿ ಆಯ್ಕೆ ಮಾಡಲು ಯಾವುದೇ ತೊಡಕುಗಳಿಲ್ಲ. ಬಿ.ಇಡಿಗೆ ಸೇರಲು ಅವಕಾಶ ಕೊಟ್ಟಿದ್ದಾದರೂ ಏಕೆ? ಸರ್ಕಾರದ ನಡೆ ನಮಗೆ ಅರ್ಥವಾಗುತ್ತಿಲ್ಲ’ ಎನ್ನುವುದು ಅವರ ಅಳಲು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕ್ರಿಯೆಗಳು ಆರಂಭವಾದ ನಂತರ ಪಠ್ಯ ವಿಷಯಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಯ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಹಾಗಾಗಿ, ಹರಿಯಾಣ, ಉತ್ತರ ಪ್ರದೇಶ ಸರ್ಕಾರಗಳು ವಾಣಿಜ್ಯಶಾಸ್ತ್ರ ಪದವೀಧರರನ್ನೂ ಶಿಕ್ಷಕರಾಗಿ ನೇಮಕ
ಮಾಡಲು ಅವಕಾಶ ನೀಡಿವೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಅನ್ಯಾಯ ಮಾಡುತ್ತಿದೆ. ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಕರ್ನಾಟಕ ಸ್ಪರ್ಧಾ ಪರೀಕ್ಷೆ ಅಭ್ಯರ್ಥಿಗಳ
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿದ್ದೇಶ್‌.

ಎಂಜಿನಿಯರಿಂಗ್‌ಗೆ ಮಣೆ; ವಾಣಿಜ್ಯ ಕಡೆಗಣನೆ: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಈ ಬಾರಿ ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡಲಾಗಿದೆ. ಎಂಜಿನಿಯರಿಂಗ್‌ ಪದವಿ ಪಡೆದ 34 ಅಭ್ಯರ್ಥಿಗಳು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದರು. ಅವರಲ್ಲಿ 19 ಮಂದಿ ಆಯ್ಕೆಯಾಗಿದ್ದಾರೆ. ಇದು ತಾರತಮ್ಯಕ್ಕೆ ಒಂದು ಉದಾಹರಣೆ ಎನ್ನುವುದು ಉದ್ಯೋಗ ವಂಚಿತ ಅಭ್ಯರ್ಥಿಗಳ ಆರೋಪ.

ಈ ಕುರಿತು ಮಾಹಿತಿ ಪಡೆಯಲು ಆಯುಕ್ತ ಆರ್.ವಿಶಾಲ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಕರೆ ಸ್ವೀಕರಿಸಲಿಲ್ಲ.

ಕೋರ್ಟ್‌ ಆದೇಶಕ್ಕೂ ಇಲ್ಲ ಮನ್ನಣೆ

ಟಿಇಟಿ ತೇರ್ಗಡೆಯಾದ ವಾಣಿಜ್ಯಶಾಸ್ತ್ರ ಬಿ.ಇಡಿ ಪದವೀಧರರನ್ನೂಶಿಕ್ಷಕರ ನೇಮಕಾತಿಗೆ ಪರಿಗಣಿಸುವಂತೆ ಹೈಕೋರ್ಟ್‌ ಧಾರವಾಡ ಪೀಠ ಕಳೆದ ಏಪ್ರಿಲ್‌
ನಲ್ಲೇ ಆದೇಶಿಸಿದೆ.

ಮಾರ್ಚ್‌ನಲ್ಲಿ ಸರ್ಕಾರ ಹೊರಡಿಸಿದ್ದ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಗದಗದ ಜಯಶ್ರೀ ಗುರುಪಾದಪ್ಪ ಎನ್ನುವ ಅಭ್ಯರ್ಥಿ ಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್‌, 2022ರ ನೇಮಕಾತಿಗೆ ಪರಿಗಣಿಸುವಂತೆ ಆದೇಶ ನೀಡಿತ್ತು. ಆದರೂ, ಸರ್ಕಾರ ಆದೇಶ ಪಾಲಿಸಿಲ್ಲ ಎಂದು ಅಭ್ಯರ್ಥಿಗಳು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT