ಭಾನುವಾರ, ನವೆಂಬರ್ 28, 2021
19 °C

ಅಸಹಕಾರ ಚಳವಳಿಗೆ ಮುಂದಾದ ಶಿಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಸಹಕಾರ ಚಳವಳಿ ನಡೆಸಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಧರಿಸಿದೆ.

ಅ. 4ರಿಂದ ತರಬೇತಿ ಬಹಿಷ್ಕರಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರು, ಇದೇ 21 ಮತ್ತು 29ರಂದು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಅ. 30ರಿಂದ ನ. 10ರವರೆಗೆ ಮಧ್ಯಾಹ್ನದ ಬಿಸಿಯೂಟ ಮಾಹಿತಿ ಅಪ್‌ಡೇಟ್‌ ಮಾಡದಿರಲು, 11ರಿಂದ 18ರವರೆಗೆ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್‌) ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಡೇಟ್‌ ಮಾಡದಿರಲು ಸಂಘ ನಿರ್ಧರಿಸಿದೆ. ಆ ಬಳಿಕವೂ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಮಟ್ಟದಲ್ಲಿ ರ‍್ಯಾಲಿ, ಧರಣಿ ಸತ್ಯಾಗ್ರಹ, ತರಗತಿ ಬಹಿಷ್ಕಾರದಂಥ ಹೋರಾಟ ನಡೆಸಲು ಸಂಘ ಮುಂದಾಗಿದೆ.

ಮುಖ್ಯ ಶಿಕ್ಷಕರಿಗೆ 15,20, 25 ವರ್ಷಗಳ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಹಾಗೂ ದೈಹಿಕ ಶಿಕ್ಷಕರ ಸಮಸ್ಯೆ ಬಗೆಹರಿಸಬೇಕು ಎಂದೂ ಸಂಘ ಬೇಡಿಕೆ ಇಟ್ಟಿದೆ.

‘ಇದೇ 21ರಂದು ತಾಲ್ಲೂಕುಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಹಾಗೂ 25ರಂದು ಜಿಲ್ಲಾಮಟ್ಟದಲ್ಲಿ ಉಪನಿರ್ದೇಶಕರ ಮೂಲಕ ಸರ್ಕಾರಕ್ಕೆ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು. ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಶಂಭುನಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ ತಿಳಿಸಿದ್ದಾರೆ.

‘ಹಲವು ವರ್ಷಗಳಿಂದ ಅದರಲ್ಲೂ, ಕಳೆದ ಮೂರು ತಿಂಗಳುಗಳ ಹಿಂದೆಯೇ ಪ್ರಮುಖ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಂತೆ ಮನವಿ ಮಾಡಿದ್ದೆವು’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು