ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ತಾಪಮಾನ ದಿಢೀರ್‌ ಏರಿಕೆ: ಬೇಸಿಗೆ ಆರಂಭದಲ್ಲೇ ಸುಡು ಬಿಸಿಲು

Last Updated 7 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಆರಂಭದಲ್ಲಿಯೇ ಬಿಸಿಲು ಜನರ ಮೈ ಸುಡುತ್ತಿದೆ. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮೂರು ದಿನಗಳಿಂದ ತಾಪಮಾನ ದಿಢೀರ್‌ ಏರಿಕೆಯಾಗಿದೆ. ಇದರಿಂದ ಮಕ್ಕಳು, ವೃದ್ಧರು ಹಾಗೂ ಕಾರ್ಮಿಕರು ಬಸವಳಿಯುತ್ತಿದ್ದಾರೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೂ ತಾಪಮಾನ ಏರಿಕೆ ಕಂಡಿದೆ. ಮಧ್ಯಾಹ್ನದ ವೇಳೆಯಲ್ಲಿ ಜನರ ಓಡಾಟ ಕಡಿಮೆಯಾಗಿದೆ.

ಬಿಸಿಲಿಗೆ ಹೆಸರಾದ ಕಲ್ಯಾಣ ಕರ್ನಾಟಕದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲಿನ ಝಳದಿಂದ ಜನರು ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಸರಾಸರಿ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಮಂಗಳವಾರ ಕಲಬುರಗಿ ಜಿಲ್ಲೆಯಲ್ಲಿ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲೂ
ಮಾರ್ಚ್‌ನಲ್ಲೇ ಬಿಸಿಲು ಕೆಂಡದಂತೆ ಸುಡುತ್ತಿದೆ. ಬೀದರ್ ಜಿಲ್ಲೆಯಲ್ಲಿ ಉಷ್ಣಾಂಶವು 33 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಬಿಸಿಲು ಹೆಚ್ಚುತ್ತಿರುವುದರಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ವಿವಿಧ ಕಾಮಗಾರಿಗಳನ್ನು ಕಲ್ಯಾಣ ಕರ್ನಾಟಕ ಭಾಗದ ಕೆಲವೆಡೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಡಲ ತಡಿಯ ಜಿಲ್ಲೆ ಉಡುಪಿಯಲ್ಲೂ ಧಗೆಯು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ. ಬಿಸಿಲಿಗೆ ಹೆದರಿ ಜಿಲ್ಲೆಯತ್ತ ಪ್ರವಾಸಿಗರು ಬರುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

‘ಈ ವರ್ಷ ಬೇಸಿಗೆ ಬೇಗ ಕಾಲಿಟ್ಟಿದೆ. ಜತೆಗೆ, ಬಿಸಿಗಾಳಿ ಬೀಸುತ್ತಿರುವುದರಿಂದ ವಾತಾವರಣ ಬಿಸಿ ಎನಿಸಿದೆ’ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

3 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮುಂದಿನ 24 ಗಂಟೆಯ ಒಳಗೆ ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT