ಗುರುವಾರ , ಜನವರಿ 21, 2021
20 °C
ಈ ಬಾರಿಯ ಟಿಇಟಿ ಫಲಿತಾಂಶ ಶೇ 3.93ರಷ್ಟು ಮಾತ್ರ

ಶಿಕ್ಷಕರ ನೇಮಕಾತಿಗೆ ‘ಅರ್ಹರೇ’ ಸಿಗದ ಸ್ಥಿತಿ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ರಾಜ್ಯದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೂ ‘ಅರ್ಹರೇ’ ಸಿಗದ ಸ್ಥಿತಿ ಇದೆ. ಅಕ್ಟೋಬರ್‌ನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದ 2,02,991 ಅಭ್ಯರ್ಥಿಗಳಲ್ಲಿ 7,980 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ.

ಈ ಪರೀಕ್ಷೆಗೆ ಒಟ್ಟು 2,44,693 ಜನ ನೋಂದಾಯಿಸಿಕೊಂಡಿದ್ದರು.ರಾಜ್ಯ ಸರ್ಕಾರ ಈವರೆಗೆ ಮೂರು ಟಿಇಟಿ ನಡೆಸಿದ್ದು, ಎರಡನೇ ಟಿಇಟಿ ಫಲಿತಾಂಶ ಶೇ 12ರಷ್ಟಿತ್ತು. ಮೂರನೇ ಟಿಇಟಿ ಫಲಿತಾಂಶ ನ.21ರಂದು ಪ್ರಕಟಗೊಂಡಿದ್ದು, ಉತ್ತೀರ್ಣ ಪ್ರಮಾಣ ಶೇ 3.93ರಷ್ಟು ಮಾತ್ರ ಇದೆ. 

ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಯ ನಂತರ ಪ್ರಾಥಮಿಕ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರ ಶಿಕ್ಷಕ ಅಭ್ಯರ್ಥಿಗಳಿಗೆ ಸಿಟಿಇಟಿ ಆರಂಭಿಸಿತು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ 2014ರಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಟಿಇಟಿ ನಡೆಸುತ್ತಿದೆ. ರಾಜ್ಯ ಸರ್ಕಾರದ ಪ್ರಾಥಮಿಕ ಶಾಲೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಟಿಇಟಿ ಉತ್ತೀರ್ಣರಾಗುವುದು ಕಡ್ಡಾಯ. ಸದ್ಯ ರಾಜ್ಯದಲ್ಲಿ 22,000 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ.

1ರಿಂದ 5 ಮತ್ತು 6ರಿಂದ 8ನೇ ತರಗತಿ ಹೀಗೆ ಎರಡು ಹಂತಕ್ಕೆ ಪರೀಕ್ಷೆ ನಡೆಸಲಾಗುತ್ತಿದೆ.

ಹುನ್ನಾರ–ಅಭ್ಯರ್ಥಿಗಳ ದೂರು: ‘ಟಿಇಟಿ ಫಲಿತಾಂಶ ಗಣನೀಯವಾಗಿ ಕುಸಿತ ಕಂಡಿದ್ದು, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬ ನೆಪ ಹೇಳಿ ಶಿಕ್ಷಕ ಹುದ್ದೆಗಳನ್ನು ಹಾಗೇ ಖಾಲಿ ಉಳಿಸಿಕೊಳ್ಳುವ ಹುನ್ನಾರ ಇದು’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಅಭ್ಯರ್ಥಿಗಳು ದೂರುತ್ತಾರೆ.

‘ರಾಜ್ಯದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಇಂಗ್ಲಿಷ್‌, ವಿಜ್ಞಾನ, ಗಣಿತ ಶಿಕ್ಷಕ ಹುದ್ದೆಗಳೇ ಹೆಚ್ಚಾಗಿ ಖಾಲಿ ಉಳಿದಿವೆ. ಟಿಇಟಿಯಲ್ಲಿ ಈ ವಿಷಯಗಳ ಫಲಿತಾಂಶ ಅತ್ಯಲ್ಪ. ಶಿಕ್ಷಕ ಹುದ್ದೆಗೆ ನೇಮಕವಾಗಲು ನಾವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನೂ ಎದುರಿಸಬೇಕು. ಟಿಇಟಿ ಕೇವಲ ಅರ್ಹತಾ ಪರೀಕ್ಷೆ. ಇಲ್ಲೇ ಅನರ್ಹಗೊಳಿಸಿ ನಮಗೆ ಸರ್ಕಾರಿ ಹುದ್ದೆ ಸಿಗದಂತೆ ತಡೆಯೊಡ್ಡಲಾಗುತ್ತಿದೆ’ ಎಂಬುದು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕು ಶೆಳ್ಳಗಿಯ ಅಭ್ಯರ್ಥಿ ರೇವಪ್ಪ ಅವರ ಆರೋಪ.

ಈ ಪರೀಕ್ಷೆಯಲ್ಲಿ ಸಾಮಾನ್ಯ, ಹಿಂದುಳಿದ 2ಎ, 2ಬಿ, 3ಎ, 3ಬಿ ವರ್ಗಗಳ ಅಭ್ಯರ್ಥಿಗಳು ಶೇ 60 ಮತ್ತು ಎಸ್‌ಸಿ ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗಳು ಶೇ 55 ಅಂಕ ಪಡೆದರೆ ಮಾತ್ರ ಅವರು ಅರ್ಹತೆ ಪಡೆಯುತ್ತಾರೆ.

‘ಈ ವರ್ಗಗಳವರಿಗೆ ಕ್ರಮವಾಗಿ ಆಂಧ್ರ ಪ್ರದೇಶದಲ್ಲಿ ಶೇ 50 ಮತ್ತು ಶೇ 45, ಬಿಹಾರ ಶೇ 45 ಮತ್ತು ಶೇ 40, ತೆಲಂಗಾಣ ಶೇ 50 ಮತ್ತು ಶೇ 40, ಮಧ್ಯಪ್ರದೇಶದಲ್ಲಿ ಶೇ 50ರಷ್ಟು ಅಂಕಗಳನ್ನು ಮಾತ್ರ ಅರ್ಹತೆಗೆ ನಿಗದಿ ಮಾಡಲಾಗಿದೆ. ನಮ್ಮ ರಾಜ್ಯವೂ ಅದೇ ಮಾದರಿ ಅನುಸರಿಸಿ ಅರ್ಹತೆಗೆ ನಿಗದಿ ಪಡಿಸಿರುವ ಅಂಕ ಕಡಿಮೆ ಮಾಡಬೇಕು. ಇದಕ್ಕಾಗಿ ನಾವು ಹೋರಾಟ ರೂಪಿಸುತ್ತಿದ್ದೇವೆ’ ಎಂದು ಕಲಬುರ್ಗಿಯ ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಎಂ.ಬಿ. ಅಂಬಲಗಿ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು