ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಕಾರಣಕ್ಕೂ ತಮ್ಮ ಲೇಖನ ಬಳಸದಂತೆ ನಾಗೇಶ್‌ಗೆ ಪತ್ರ ಬರೆದ ನಾಲ್ವರು ಲೇಖಕರು

Last Updated 2 ಜೂನ್ 2022, 4:15 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿಮೂಲಭೂತವಾದ ಹೇರಲಾಗುತ್ತಿದೆ, ಸಮಿತಿ ಅಧ್ಯಕ್ಷರು ನಾಡಗೀತೆ ಹಾಗೂ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿರುವ ನಾಲ್ವರು ಲೇಖಕರು ತಮ್ಮ ಪಾಠದ ಬಳಕೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದ್ದಾರೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಪತ್ರ ಬರೆದಿರುವ ಅವರು, ಯಾವುದೇ ಕಾರಣಕ್ಕೂ ತಮ್ಮ ಲೇಖನ–ಕವಿತೆ ಬಳಸದಂತೆ ವಿನಂತಿಸಿದ್ದಾರೆ.

*
ಸಾವಿತ್ರಿಬಾಯಿ ಫುಲೆ ಪಾಠ ವಾಪಸ್

ಏಳನೇ ತರಗತಿಯ ಕನ್ನಡ ಭಾಷಾ(ಪ‍್ರಥಮ) ಪಠ್ಯ ಪುಸ್ತಕದಲ್ಲಿ ‘ಸಾವಿತ್ರಿ ಬಾಯಿ ಫುಲೆ’ ಗದ್ಯ ಬರಹ ಹಾಗೂ ಅದೇ ತರಗತಿಯ ಕನ್ನಡ ಭಾಷೆ ತೃತೀಯ ಪಠ್ಯಪುಸ್ತಕದಲ್ಲಿರುವ ‘ನೆನೆವುದೆನ್ನ ಮನ’ವನ್ನು ಪಠ್ಯಕ್ಕೆ ಅಳವಡಿಸಲು ಒಪ್ಪಿಗೆ ನೀಡಿದ್ದನ್ನು ವಾಪಸ್ ಪಡೆದಿರುವುದಾಗಿ ಲೇಖಕಿ ಎಚ್.ಎಸ್.ಅನುಪಮಾ ಹೇಳಿದ್ದಾರೆ.

‘ಕನ್ನಡಿಯಂತಹ ಮನಸ್ಸಿನ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿರದ ದುರುಳರು ಪಠ್ಯಪುಸ್ತಕದಲ್ಲಿ ಕೈಕಾಲಾಡಿಸಿ ಅವಾಂತರ ಮಾಡಿದ್ದಾರೆ. ಹೀಗಾಗಿ ಒಪ್ಪಿಗೆ ಹಿಂಪಡೆದಿದ್ದೇನೆ’ ಎಂದಿದ್ದಾರೆ.

*
ವರನಟ ರಾಜಕುಮಾರ್ ಪಾಠವೂ ಹಿಂದಕ್ಕೆ
‘ವರನಟ ಡಾ.ರಾಜಕುಮಾರ್ ಬಗೆಗಿನ ಲೇಖನವನ್ನು ಆರನೇ ತರಗತಿಯ ಪಠ್ಯದಲ್ಲಿ ಸೇರಿಸಲು ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿದ್ದೇನೆ’ ಎಂದು ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್‌ ಅವರು ಸಚಿವರಿಗೆ ಪತ್ರ ಬರೆದಿದ್ದಾರೆ.

‘ಈಗಿನ ಅಧ್ಯಕ್ಷ ಚಕ್ರತೀರ್ಥ ಅವರು ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದಲ್ಲದೇ ಕುವೆಂಪು ಅವರನ್ನು ಕೀಳಾಗಿ ಕಂಡಿದ್ದಾರೆ. ಕನ್ನಡ ಭಾಷೆಯನ್ನೇ ತಮ್ಮ ಮೇಲೆ ಹೇರಲಾಗಿದೆ ಎಂದು ಕನ್ನಡ ವಿರೋಧಿ ಮಾತನಾಡಿದ್ದಾರೆ. ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿ ಪರಿಷ್ಕರಿಸಿದ ವ್ಯಕ್ತಿಯ ಪಠ್ಯದಲ್ಲಿ, ಅಪೂರ್ವ ಕನ್ನಡ ಪ್ರೇಮಿಯಾದ ರಾಜ ಕುಮಾರ್‌ ಅವರ ಬಗೆಗಿನ ಪಠ್ಯ ಸೇರಿಸುವುದು ರಾಜ್ ಅವರಿಗೆ ಅವಮಾನ ಮಾಡಿದಂತೆ. ಹೀಗಾಗಿ ಲೇಖನ ಬಳಸಬೇಡಿ’ ಎಂದು ಅವರು ಕೋರಿದ್ದಾರೆ.

*

ಕವಿತೆ ವಾಪಸ್ ಪಡೆದ ಸುಕನ್ಯಾ ಮಾರುತಿ
ಪಠ್ಯ ಪರಿಷ್ಕರಣೆ ನೆಪದಲ್ಲಿ ಮೂಲಭೂತವಾದವನ್ನು ಮಕ್ಕಳ ಮೇಲೆ ಹೇರಿ ಕಲುಷಿತಗೊಳಿಸುವುದನ್ನು ವಿರೋಧಿಸುವುದಾಗಿ ಹೇಳಿರುವ ಕವಯಿತ್ರಿ ಸುಕನ್ಯಾ ಮಾರುತಿ ಅವರು, ‘ಹತ್ತನೇ ತರಗತಿಯ ದ್ವಿತೀಯ ಭಾಷಾ ಫಠ್ಯದಲ್ಲಿರುವ ‘ಏಣಿ’ ಕವಿತೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.

‘ಕುವೆಂಪು, ನಾಡಗೀತೆ, ನಾಡಧ್ವಜಕ್ಕೆ ಅವಹೇಳನ ಮಾಡಿರುವವರ ವಿರುದ್ಧ ಕ್ರಮ ಜರುಗಿಸದೇ ಇರುವ ಸರ್ಕಾರದ ಧೋರಣೆ ಸರಿಯಲ್ಲ. ಈ ಅಹಿತಕರ ವಿದ್ಯಮಾನಗಳನ್ನು ವಿರೋಧಿಸುತ್ತೇನೆ’ ಎಂದವರು ಹೇಳಿದ್ದಾರೆ.

*

‘ನನ್ನ ಅಯ್ಯ’ ವಾಪಸ್–ದು.ಸರಸ್ವತಿ
‘ಏಳನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿರುವ ‘ನನ್ನ ಅಯ್ಯ’ ಗದ್ಯ ಬರಹದ ಬಳಕೆಗೆ ನೀಡಿದ್ದ ಒಪ್ಪಿಗೆ ವಾಪಸ್ ಪಡೆದಿದ್ದೇನೆ’ ಎಂದು ಲೇಖಕಿ ದು.ಸರಸ್ವತಿ ತಿಳಿಸಿದ್ದಾರೆ.

‘ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಹಾಳುಗೆಡಹುತ್ತಿರುವ ಹಾಗೂ ಕುವೆಂಪು ಅವರನ್ನು ಅವಮಾನಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿಲುವು ತೆಗೆದುಕೊಂಡಿರುವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT