ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪರಿಷ್ಕರಣೆ: ‘ಸಂವಿಧಾನ ಶಿಲ್ಪಿ’ ಪದಕ್ಕೆ ಕತ್ತರಿ, ಬಿಜೆಪಿ ಶಾಸಕರ ಅತೃಪ್ತಿ

ಆಡಳಿತ ಪಕ್ಷದವರ ಸೆಡವು
Last Updated 8 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯ ಕೆಲವು ಅಂಶಗಳ ಬಗ್ಗೆ ಆಡಳಿತ ಪಕ್ಷದ ಸದಸ್ಯರಲ್ಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್‌ ಅವರ ಹೆಸರಿನ ಮುಂದಿದ್ದ ‘ಸಂವಿಧಾನ ಶಿಲ್ಪಿ’ ಪದಕ್ಕೆ ಪಠ್ಯದಲ್ಲಿ ಕತ್ತರಿ ಹಾಕಿದ್ದಕ್ಕೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌, ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಇನ್ನಿಬ್ಬರು ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರ ಸ್ವಾಮಿ ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರ ಬರೆದಿದ್ದಾರೆ. ‘ಸಂವಿಧಾನಶಿಲ್ಪಿ’ ಪದವನ್ನು ಪಠ್ಯದಲ್ಲಿ ಮತ್ತೆ ಹಾಕುವ ಮೂಲಕ ನಮ್ಮ ಸರ್ಕಾರ ಅಂಬೇಡ್ಕರ್‌ ಕುರಿತು ಹೊಂದಿರುವ ಗೌರವ ಮತ್ತು ಬದ್ಧತೆಯನ್ನು ಸಾಬೀತು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘9 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ಡಾ. ಅಂಬೇಡ್ಕರ್ ಅವರ ಆತ್ಮವೇ ಆಗಿರುವ ಸಂವಿಧಾನ ಶಿಲ್ಪಿ ಎಂಬ ನಾಮಾಂಕಿತವನ್ನು ಕೈಬಿಟ್ಟಿದ್ದು ವಿಕೃತ ನಡೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತ ವಾಗಿದೆ. ಈ ಪ್ರಮಾದವನ್ನು ಸರಿಪಡಿಸಿ ಮುದ್ರಿಸುವುದಾಗಿ ಶಿಕ್ಷಣ ಸಚಿವರು ಹೇಳಿರುವುದು ಅಭಿನಂದನೀಯ’ ಎಂದು ಅವರು ಹೇಳಿದ್ದಾರೆ.

ಡಾ. ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಏಕೆ ಸಂಬೋ ಧಿಸುತ್ತಾರೆ ಎಂಬುದನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾಗಬೇಕು. ಅದಕ್ಕಾಗಿ ಸಂವಿಧಾನ ಕರಡು ರಚನಾ ಸಮಿತಿ ಸದಸ್ಯರಲ್ಲಿ ಒಬ್ಬರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಸಂವಿಧಾನ ಸಭೆಯಲ್ಲಿ ಅಧಿಕೃತವಾಗಿ ದಾಖಲು ಮಾಡಿರುವ ಹೇಳಿಕೆಯನ್ನು ತಿದ್ದುಪಡಿ ಮಾಡುತ್ತಿರುವ ಪಠ್ಯದಲ್ಲಿ ಸೇರಿಸಿ ಮುದ್ರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.‌

ರಾಜುಗೌಡ ಬೇಸರ: ‘6 ನೇ ತರಗತಿಯ ಸಮಾಜ– ವಿಜ್ಞಾನ ಪಠ್ಯಪುಸ್ತಕದ ಭಾಗ–2 ರ ಪುಟ ಸಂಖ್ಯೆ 82 ರಲ್ಲಿ ಸುರಪುರ ನಾಯಕರು ಶೀರ್ಷಿಕೆಯಡಿ ಸುರಪುರ ರಾಜಾ ವೆಂಕಟಪ್ಪ ನಾಯಕರ ಭಾವಚಿತ್ರವನ್ನು ಒಳಗೊಂಡ ವಿಸ್ತಾರವಾದ ಒಂದು ಪುಟದ ಪಠ್ಯವು ಇತ್ತು. ಶೀರ್ಷಿಕೆ ಮತ್ತು ವೆಂಕಟಪ್ಪ ನಾಯಕರ ಚಿತ್ರ ತೆಗೆದುಹಾಕಿ ಪಠ್ಯ ವಿಷಯ ಕಡಿತ ಮಾಡಿದ್ದು ಬೇಸರದ ಸಂಗತಿ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಹೇಳಿದ್ದಾರೆ.

ಪಾಠವನ್ನು ಈ ಹಿಂದೆ ಇದ್ದಂತೆಯೇ ಉಳಿಸಿಕೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಶಂಕರರ ಪರಿಚಯದಲ್ಲೇಕೆ ‘ಸಂಕರ’
9ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಅದ್ವೈತ ಮತದ ಪ್ರತಿಪಾದಕರಾದ ಶಂಕರಾಚಾರ್ಯರಿಗೂ ಅಪಮಾನ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ.

ಶಂಕರಾಚಾರ್ಯರ ಬಗ್ಗೆ ಇರುವ ಸಾಲುಗಳು ಹೀಗಿವೆ– ‘ಶಂಕರ ಎಂದರೆ ಮಂಗಳವನ್ನುಂಟು ಮಾಡುವವ, ಶಿವ ಎಂದು ಅರ್ಥ. ಮೂವರು ಪ್ರಮುಖ ಮತಾಚಾರ್ಯರಲ್ಲಿ ಮೊದಲನೆಯವರ ಹೆಸರು ಶಂಕರ. ಆದರೆ, ‘ಸಂಕರ’ ಎಂದರೆ ಬೆರಕೆ, ಕಲಬೆರಕೆ, ಒಪ್ಪತಕ್ಕದ್ದಲ್ಲ, ಮಿಶ್ರಣ ಎಂಬ ಅರ್ಥವೂ ಹೊಮ್ಮುತ್ತದೆ’. ಶಂಕರರನ್ನು ಪರಿಚಯಿಸುವಾಗ ‘ಸಂಕರ’ ಪದವನ್ನು ಅನಗತ್ಯವಾಗಿ ಉಲ್ಲೇಖಿಸಿ, ಅನ್ಯಾರ್ಥ ಬರುವಂತೆ ವಿವರಿಸಿರುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT