ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ: ಸತ್ಯ ತಿರುಚಿದರೆ ಹೋರಾಟ

ದುಂಡುಮೇಜಿನ ಸಭೆಯಲ್ಲಿ ದಲಿತ, ಪ್ರಗತಿಪರ ಚಿಂತಕರ ನಿರ್ಧಾರ
Last Updated 23 ಅಕ್ಟೋಬರ್ 2021, 16:46 IST
ಅಕ್ಷರ ಗಾತ್ರ

ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ನಾಲ್ಕು ವರ್ಷಗಳ ಹಿಂದೆ ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಗಳ ಬಗ್ಗೆ ಅಪಪ್ರಚಾರ ಮಾಡಿ ಚಾರಿತ್ರಿಕ ಸತ್ಯ ತಿರುಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ಪ್ರಗತಿಪರ ಹೋರಾಟಗಾರರು ಆಪಾದಿಸಿದ್ದಾರೆ.

ನಗರದ ಗಾಂಧಿ ಭವನದಲ್ಲಿದಲಿತ ಸಂಘಟನೆಗಳ ಜಂಟಿ ವೇದಿಕೆಶನಿವಾರ ದುಂಡುಮೇಜಿನ ಸಭೆ ನಡೆಸಿತು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್,ಹೋರಾಟಗಾರ ಗುರುಪ್ರಸಾದ್ ಕೆರಗೋಡು, ಸಾಹಿತಿ ಬಂಜಗೆರೆ ಜಯಪ್ರಕಾಶ್, ಚಿಂತಕ ಎಸ್.ಜಿ. ಸಿದ್ಧರಾಮಯ್ಯ, ಶಿಕ್ಷಣ ತಜ್ಞ ಶ್ರೀಪಾದ ಭಟ್‌, ರಾಜಶೇಖರಮೂರ್ತಿ ಸೇರಿದಂತೆ ಹಲವು ಚಿಂತಕರು ಸಭೆಯಲ್ಲಿ ಭಾಗವಹಿಸಿ ಪಠ್ಯ ಪುಸ್ತಕ ಪರಿಷ್ಕರಣೆ ಹಿಂದೆ ರಾಜಕಾರಣ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹುನ್ನಾರವನ್ನು ಸರ್ಕಾರ ಮುಂದುವರಿಸಿ ಚಾರಿತ್ರಿಕ ಸತ್ಯಗಳನ್ನು ತಿರುಚಿದರೆ ರಾಜ್ಯದಾದ್ಯಂತ ಪ್ರತಿರೋಧ ಒಡ್ಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಕ್ಷುಲ್ಲಕ ಹಾಗೂ ಮತೀಯ ರಾಜಕೀಯ ಮಾಡಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಇತಿಹಾಸ ತಿರುಚಲು ಹೊರಟಿರುವ ಮುನ್ಸೂಚನೆ ಕಾಣಿಸುತ್ತಿದೆ. ‘ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ ಹಲ್ಲೆ ಮಾಡುತ್ತಿದ್ದರು’ ಎಂದು ಶಿಕ್ಷಣ ಸಚಿವರೇ ಹೇಳುವ ಮೂಲಕ ಪರಿಷ್ಕರಣೆ ಮಾಡಿದವರ ಮೇಲೆ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಪರಿಶೀಲಿಸಲು ಈಗ ನೇಮಕಗೊಂಡಿರುವ ಅಧ್ಯಕ್ಷರು ಎಲ್ಲಾ ಪುಸ್ತಕಗಳನ್ನು ಸಮಗ್ರವಾಗಿ ಪರಿಶೀಲಿಸುವ ಮೊದಲೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದಿನ ಅಧ್ಯಕ್ಷರ ವಿರುದ್ಧ ವೈಯಕ್ತಿಕ ತೇಜೋವಧೆಗೆ ಮುಂದಾಗಿದ್ದಾರೆ. ಈ ಎಲ್ಲಾ ಪ್ರವೃತ್ತಿಗಳನ್ನು ಸಭೆ ಖಂಡಿಸುತ್ತದೆ’ ನಿರ್ಣಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಪರಿಷ್ಕರಣೆಗೊಂಡ ಪಠ್ಯ ಪುಸ್ತಕಗಳು ಜಾರಿಗೆ ಬಂದು ನಾಲ್ಕು ವರ್ಷಗಳು ಮುಗಿದ ಬಳಿಕ ಎಬ್ಬಿಸುತ್ತಿರುವ ವಿವಾದದ ಹಿಂದೆ ಶೈಕ್ಷಣಿಕ ಕಾರಣಗಳಿಲ್ಲ. ಒಂದು ವೇಳೆ ದೋಷಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡುವವರು ಆಯಾ ವಿಷಯಗಳಿಗೆ ಸಂಬಂಧಿಸಿದ ತಜ್ಞರೇ ಹೊರತು ರಾಜಕೀಯ ಪಕ್ಷದ ಜೊತೆ ಸಂಪೂರ್ಣ ಗುರುತಿಸಿಕೊಂಡವರಲ್ಲ. ಅದರಲ್ಲೂ ಮೂಲಭೂತವಾದಿಗಳಂತೂ ಅಲ್ಲವೇ ಅಲ್ಲ’ ಎಂದು ಪತ್ರದಲ್ಲಿ ಆಕ್ಷೇ‍ಪಿಸಲಾಗಿದೆ.

ಈಗ ಮೂಲಭೂತವಾದಿಗಳ ಕೈಗೆ ಮಕ್ಕಳ ಭವಿಷ್ಯ ಕೊಡುವ ಹುನ್ನಾರ ಮುಂದುವರಿದರೆ ಹೋರಾಟ ಅನಿವಾರ್ಯವಾಗಲಿದೆ. ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಲಿಖಿತವಾಗಿ ಸಲ್ಲಿಸಲು ಸಭೆ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT