ಶನಿವಾರ, ಜೂನ್ 25, 2022
25 °C
ಸಚಿವ ನಾಗೇಶ್‌ ರಾಜೀನಾಮೆಗೆ ಒತ್ತಡ

ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಲು ಆಗ್ರಹ: ಟ್ವಿಟರ್‌ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರ್‌ಎಸ್‌ಎಸ್‌ ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಬೇಕು ಮತ್ತು ಶಿಕ್ಷಣ ಸಚಿವ ನಾಗೇಶ್‌ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಭಾನುವಾರ ಸಂಜೆ ನಡೆದ ಟ್ವಿಟರ್‌ ಅಭಿಯಾನಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

#rejectbrahmintextbooks ಮತ್ತು #rejectrsstextbooks ಹೆಸರಿನಲ್ಲಿ ನಡೆದ ಅಭಿಯಾನ ರಾಷ್ಟ್ರದ ಗಮನ ಸೆಳೆಯಿತು. ಅಭಿಯಾನ ಉತ್ತುಂಗದಲ್ಲಿದ್ದಾಗ, ಈ ಎರಡೂ ಹ್ಯಾಷ್ ಟ್ಯಾಗ್‌ಗಳು ಭಾರತ ಮಟ್ಟದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದವು. ಬೆಂಗಳೂರು ಟ್ರೆಂಡಿಂಗ್‌ನಲ್ಲಿ ಈ ಹ್ಯಾಷ್ ಟ್ಯಾಗ್ ಮೊದಲೇ ಸ್ಥಾನ ಕಾಯ್ದುಕೊಂಡಿತ್ತು.

‘ಪಠ್ಯಪುಸ್ತಕ ಪರಿಷ್ಕರಣೆಗೆ ಅನರ್ಹ ಸಮಿತಿ ರಚಿಸಿ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ. ಪಠ್ಯಪುಸ್ತಕಗಳಲ್ಲಿ ಒಂದು ಜಾತಿಯ ಲೇಖಕರ ವಿಜೃಂಭಣೆ ಮಾಡಲಾಗಿದೆ ಮತ್ತು ಕೇಸರೀಕರಣಗೊಳಿಸಲಾಗಿದೆ. ಬ್ರಹ್ಮಶ್ರೀ ನಾರಾಯಣಗುರು, ವಿಚಾರವಾದಿ ಪೆರಿಯಾರ್ ಸೇರಿದಂತೆ ಭಾರತದ ಸಮಾಜ ಸುಧಾರಕರ ಕುರಿತಾದ ವಿವರಣಾತ್ಮಕ ಪಾಠಗಳನ್ನು ತೆಗೆದು ಹಾಕಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕರ್ನಾಟಕಕ್ಕೆ ಆಧುನಿಕ ಶಿಕ್ಷಣ ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು. ನಮ್ಮ ಮಕ್ಕಳು ಹೆಡಗೇವಾರರನ್ನು  ಓದುವ ಮೊದಲು ಬಸವಣ್ಣ ಮತ್ತು ನಾರಾಯಣಗುರುಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಳ್ಳಬೇಕು ಅಷ್ಟೆ. ನೆಲದಲ್ಲಿ ಆಳವಾಗಿ ಬೇರು ಬಿಡದೆ ಆಕಾಶದಲ್ಲಿ ಹೂ ಚೆಲ್ಲಬಹುದೇ?’ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಟ್ವೀಟ್‌ ಮಾಡಿದ್ದಾರೆ.

‘ಹೆಡಗೇವಾರ್‌ ತಮ್ಮ ಬರಹಗಳಲ್ಲಿ ಧ್ವಜ ಎಂದರೆ ಭಗವಾಧ್ವಜ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಹೆಡಗೇವಾರ್‌ ಪಾಠದಿಂದ ಮಕ್ಕಳು ಕಲಿಯುವಂಥದ್ದೇನಿದೆ? ಶಿಕ್ಷಣವನ್ನು ಬ್ರಾಹ್ಮಣೀಕರಣಗೊಳಿಸುತ್ತಿದ್ದಾರೆ. ಬ್ರಾಹ್ಮಣ್ಯದ ಶಿಕ್ಷಣವನ್ನು ಬಹಿಷ್ಕರಿಸಿರಿ’ ಎಂದು ಅಫ್ತಾಬ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

‘ಯುವ ಸಮುದಾಯದಲ್ಲಿ ಕೋಮುವಾದ ವಿಷಬೀಜ ಬಿತ್ತುವುದನ್ನು ನಿಲ್ಲಿಸಿ. ಸಂಘಿಗಳ ದ್ವೇಷದ ಸಿದ್ಧಾಂತವನ್ನು ಹೇರಬೇಡಿ. ನಿಮ್ಮ ಶಾಖೆಗಳಲ್ಲಿ ನಿಮ್ಮ ಸಿದ್ಧಾಂತವನ್ನು ಇರಿಸಿಕೊಳ್ಳಿ. ಶಾಲೆಗೆ ವಿಸ್ತರಿಸಬೇಡಿ’ ಎಂದು ಶ್ರೀನಿವಾಸ್‌ ಕಾರ್ಕಳ ಪ್ರತಿಕ್ರಿಯಿಸಿದ್ದಾರೆ.

‘ಪ್ರಸ್ತುತ ಕರ್ನಾಟಕ ಶಿಕ್ಷಣ ಮಂಡಳಿಯ ಪಠ್ಯಪುಸ್ತಕವು ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣಿಗೋಸ್ಕರ ರಚಿಸಲಾಗಿದೆ’ ಎಂದು ಪ್ರತಿಕ್ರಿಯಿಸಿರುವ ಮೊಹಮ್ಮದ್‌ ಇರ್ಷಾದ್‌, ‘ಪರಿಷ್ಕರಣಾ ಸಮಿತಿಯ ಏಳು ಮಂದಿಯಲ್ಲಿ ಆರು ಮಂದಿ ಬ್ರಾಹ್ಮಣರು ಇದ್ದಾರೆ. ಪಠ್ಯದಲ್ಲಿನ 10 ಅಧ್ಯಾಯಗಳಲ್ಲಿನ 9 ಅಧ್ಯಾಯಗಳು ಬ್ರಾಹ್ಮಣ ಸಮುದಾಯದ ಲೇಖಕರಿಗೆ ಸೇರಿವೆ. ಎಲ್‌. ಬಸವರಾಜು, ಪಿ. ಲಂಕೇಶ್‌, ಅರವಿಂದ ಮಾಲಗತ್ತಿ, ಸಾರಾ ಅಬೂಬಕರ್‌, ಕೆ. ನೀಲಾ ಮತ್ತು ಬಿ.ಟಿ. ಲಲಿತಾ ನಾಯಕ್‌ ಅವರನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಇವರೆಲ್ಲರೂ ಬ್ರಾಹ್ಮಣೇತರರು ಮತ್ತು ಪರಿಶಿಷ್ಟರು ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದವರು’ ಎನ್ನುವ ವಿವರ ಇರುವ ಚಿತ್ರವನ್ನು ಲಗತ್ತಿಸಿದ್ದಾರೆ. ಈ ಚಿತ್ರವನ್ನು ಹಲವರು ಟ್ವೀಟ್‌ ಮಾಡಿದ್ದಾರೆ.

ಕೆಲವರು ಅಭಿಯಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮೊಘಲರ ಆಡಳಿತವನ್ನು ವೈಭವೀಕರಣ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

‘ಕಾಂಗ್ರೆಸ್‌ ಮದರಸಾಗಳನ್ನು ಸಬಲೀಕರಣಕ್ಕೆ ಆದ್ಯತೆ ನೀಡುವ ಮೂಲಕ ಹಿಂದೂ ಗುರುಕುಲಗಳನ್ನು ನಾಶಗೊಳಿಸಲಾಯಿತು ಮತ್ತು ಭಾರತೀಯ ಇತಿಹಾಸವನ್ನು ತಿರುಚಲಾಯಿತು’ ಎಂದು ‘ಲಾಸ್ಟ್‌ ಪೇಜ್‌’ ಹೆಸರಿನಲ್ಲಿ ಹಲವು ಟ್ವೀಟ್‌ಗಳನ್ನು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು