ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಡಾರ್‌ಗಳ ಕಣ್ಣಿಗೆ ಮಣ್ಣೆರಚುವ ಎಎಂಸಿಎ

Last Updated 4 ಫೆಬ್ರುವರಿ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ಶತ್ರು ರಾಷ್ಟ್ರಗಳ ರಾಡಾರ್‌ಗಳ ಕಣ್ಣಿಗೆ ಮಣ್ಣೆರಚುತ್ತಾ ಶರವೇಗದಲ್ಲಿ ಗುರಿಯತ್ತ ಸಾಗುತ್ತಾ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯವಿರುವ ಸುಧಾರಿತ ಮಧ್ಯಮ ಯುದ್ಧವಿಮಾನವನ್ನು (ಎಎಂಸಿಎ) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಎ) ರೂಪಿಸುತ್ತಿದೆ.

ಭವಿಷ್ಯದಲ್ಲಿ ಭಾರತೀಯ ವಾಯುಸೇನೆಯ ಪ್ರಮುಖ ಅಸ್ತ್ರ ಇದಾಗಲಿದೆ ಎಂಬುದು ಇದನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವ ವಿಜ್ಞಾನಿಗಳ ಅಭಿಪ್ರಾಯ.

‘ಈ ವಿಮಾನದ ಮೇಲ್ಮೈ ವಿನ್ಯಾಸವು ಯಾವುದೇ ರಾಡಾರ್‌ಗಳನ್ನು ವಂಚಿಸುವಂತಿದೆ. ಶತ್ರುವಿನ ಗಮನಕ್ಕೆ ಬಾರದ ರೀತಿ ರಹಸ್ಯ ಕಾರ್ಯಾಚರಣೆ ನಡೆಸುವಲ್ಲಿ ಈ ವಿಮಾನ ಮಹತ್ತರ ಪಾತ್ರ ವಹಿಸಲಿದೆ’ ಎಂದು ಡಿಆರ್‌ಡಿಒ ವಿಜ್ಞಾನಿವಿಜಯ್ ರಾಘವ್‌ ತಿಳಿಸಿದರು.

‘ಈ ವಿಮಾನದಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಿದ್ದೇವೆ. ಈಗಿರುವ ಯುದ್ಧ ವಿಮಾನ ಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹೊರಗಡೆ ಕಾಣಿಸುವಂತೆ ಅಳವಡಿಸಲಾಗುತ್ತದೆ. ಆದರೆ ಎಎಂಸಿಎಯಲ್ಲಿ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟುಕೊಂಡು ಸಾಗುವ, ಹಾಗೂ ಅಗತ್ಯಬಿದ್ದಾಗ ಅವುಗಳನ್ನು ನಿಖರ ಗುರಿ ಮೇಲೆ ಹಾಕುವ ವ್ಯವಸ್ಥೆ ಇರಲಿದೆ’ ಎಂದು ಅವರು ವಿವರಿಸಿದರು.

‘ಈ ಸೂಪರ್‌ಸಾನಿಕ್‌ ಯುದ್ಧ ವಿಮಾನವು ಸ್ಮಾರ್ಟ್‌ ಕಾಕ್‌ಪಿಟ್‌ ಹೊಂದಿರಲಿದೆ. ದತ್ತಾಂಶ ಸಂಯೋಜನೆ ಮೂಲಕ ಸುಧಾರಿತ ಸೆನ್ಸರ್‌ಗಳನ್ನು ಇದರಲ್ಲಿ ಅಳವಡಿಸಲಾಗುತ್ತದೆ. ಪೈಲಟ್ ಸಂದರ್ಭಕ್ಕೆ ತಕ್ಕ ನಿರ್ಧಾರ ಕೈಗೊಳ್ಳಲಿಕ್ಕೆ ನೆರವಾಗುವ ಪರಿಕರಗಳು ಇದರಲ್ಲಿ ಇರಲಿವೆ’ ಎಂದು ತಿಳಿಸಿದರು.

‘ಗುರಿಯ ತೀರಾ ಸಮೀಪಕ್ಕೆ ನುಗ್ಗಿ ದಾಳಿ ನಡೆಸುವ, ಗುರಿಯನ್ನು ನಿಖರವಾಗಿ ತಲುಪುವ, ಕಣ್ಣಳತೆಯಾಚೆಯ ದಾಳಿಗೂ ಹೊಂದಿ
ಕೊಳ್ಳಬಲ್ಲ ಹಾಗೂ ಹೋರಾಟದ ವೇಳೆ ಏಕಾಏಕಿ ಭಿನ್ನ ಭಿನ್ನ ಕೆಲಸಗಳನ್ನು ನಿರ್ವಹಿಸುವ ವಿಮಾನ ಇದಾಗಲಿದೆ’ ಎಂದು ಅವರು ತಿಳಿಸಿದರು.

‘ಈ ವಿಮಾನದ ವಿನ್ಯಾಸ ಈಗಷ್ಟೇ ಅಂತಿಮಗೊಳ್ಳುತ್ತಿದೆ. ಇದರ ತಯಾರಿಕೆ ಪೂರ್ಣಗೊಂಡು, ನಂತರ ಹಾರಾಟ ಪರೀಕ್ಷೆಯಲ್ಲಿ ಯಶಸ್ವಿಯಾಗಿ, ವಿಮಾನವು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಲು ಇನ್ನೂ ಏಳೆಂಟು ವರ್ಷಗಳು ಬೇಕಾಗಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT