ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಕುಳಿತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ

Last Updated 6 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಕಲಬುರಗಿ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್‌ ಜೇವರ್ಗಿಯಲ್ಲಿ ಸೋಮವಾರ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು. ಪೈಲಟ್‌ನ ಸಮಯಪ್ರಜ್ಞೆಯಿಂದ ಅ‍ಪಾಯ ಸಂಭವಿಸಲಿಲ್ಲ.

ಜೇವರ್ಗಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಯಡಿಯೂರಪ್ಪ ಅವರನ್ನು ಕರೆ ತರುತ್ತಿದ್ದ ಹೆಲಿಕಾಪ್ಟರ್ ವಿಜಯಪುರ-ಕಲಬುರಗಿ ರಸ್ತೆ ಬದಿಯ ಜಮೀನಿನಲ್ಲಿ ಇಳಿಯಬೇಕಿತ್ತು. ಹೆಲಿಕಾಪ್ಟರ್ ಬರುತ್ತಿದ್ದಂತೆಯೇ ಸಮೀಪದ ಜಮೀನಿನಲ್ಲಿನ ಮೆಣಸಿನಕಾಯಿ ಮತ್ತು ಚಪ್ಪರದ ಮೇಲೆ ಹೊದಿಸಿದ್ದ ತಾಡಪತ್ರಿಗಳು ಹಾರಿದವು. ಜೊತೆಗೆ ಪ್ಲಾಸ್ಟಿಕ್‌ ಬ್ಯಾರೆಲ್, ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಚೀಲಗಳು ಗಾಳಿಯಲ್ಲಿ ತೇಲಾಡಿದವು.

ಇದೆಲ್ಲವನ್ನೂ ಗಮನಿಸಿದ ಪೈಲಟ್‌ ತಕ್ಷಣವೇ ಹೆಲಿಕಾಪ್ಟರ್‌ ಇಳಿಸದೇ ಮೇಲ್ಮುಖವಾಗಿ ಹಾರಿಸಿದರು. ಒಂದು ಸುತ್ತು ಹಾಕಿದ ಬಳಿಕ ಹೆಲಿಪ್ಯಾಡ್‌ನ ಮತ್ತೊಂದು ಭಾಗದಲ್ಲಿ, ನಿಧಾನವಾಗಿ ಇಳಿಸಿದರು. ಯಡಿಯೂರಪ್ಪ ಅವರು ಸುರಕ್ಷಿತವಾಗಿ ಹೊರಬಂದರು.

ಘಟನೆಯಿಂದ ಅಧಿಕಾರಿಗಳು, ಪೊಲೀಸರು ಗೊಂದಲಕ್ಕೆ ಒಳಗಾದರು. ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ‘ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಲಾಗಿಲ್ಲ. ಭದ್ರತಾ ಲೋಪ ಆಗಿದೆ’ ಎಂದು ಸ್ಥಳೀಯರು ಆರೋಪಿಸಿದರು.

‘ಮಾಜಿ ಮುಖ್ಯಮಂತ್ರಿಗಳಿಗೂ ಶಿಷ್ಟಾಚಾರ ಅನ್ವಯಿಸುತ್ತದೆ. ಲೋಕೋಪಯೋಗಿ ಇಲಾಖೆಯವರು ಹೆಲಿಪ್ಯಾಡ್‌ ಸುತ್ತಲಿನ ಜಾಗ ಶುಚಿಗೊಳಿಸಿ ನಿರ್ವಹಣೆ ಮಾಡಬೇಕು. ಇದರ ಬಗ್ಗೆ ಇಲಾಖೆಯಿಂದ ವಿವರಣೆ ಪಡೆದು, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಯಶವಂತ‌ ವಿ. ಗುರುಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT