ಸೋಮವಾರ, ಏಪ್ರಿಲ್ 12, 2021
31 °C
ಹಿಂದೆ ಪ್ರವಾಸಿಮಂದಿರವಾಗಿದ್ದ ಈಗಿನ ಎಸಿ ಕಚೇರಿ ಜಾಗ ರೈಲ್ವೆ ಇಲಾಖೆಗೆ ಹಸ್ತಾಂತರ

ಧರೆಗೆ ಉರುಳಲಿದೆ ಬ್ರಿಟಿಷರ ಕಾಲದ ಕಟ್ಟಡ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬ್ರಿಟಿಷರು ನಿರ್ಮಿಸಿದ್ದ ಪ್ರವಾಸಿ ಮಂದಿರ, ಬಳಿಕ ಉಪ ವಿಭಾಗಾಧಿಕಾರಿ ಕಚೇರಿಯಾಗಿದ್ದ, ಶತಮಾನದ ಇತಿಹಾಸ ಇರುವ ಕಟ್ಟಡ ಕೆಲವೇ ದಿನಗಳಲ್ಲಿ ಧರೆಗೆ ಉರುಳಲಿದೆ. ಈ ಜಮೀನು ಅಧಿಕೃತವಾಗಿ ರೈಲ್ವೆ ಇಲಾಖೆಗೆ ಹಸ್ತಾಂತರಗೊಂಡಿದೆ.

ರಾಮನಗರದಲ್ಲಿ ನಿರ್ಮಾಣಗೊಂಡಿರುವ ಗಾಂಧಿಭವನಕ್ಕೆ ತಾತ್ಕಾಲಿಕವಾಗಿ ಉಪ ವಿಭಾಗಾಧಿಕಾರಿ ಕಚೇರಿ ಸ್ಥಳಾಂತರಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ₹ 5 ಕೋಟಿ ವೆಚ್ಚದಲ್ಲಿ ಎ.ಸಿ. ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಅಲ್ಲಿ ಕಟ್ಟಡ ನಿರ್ಮಾಣವಾದರೆ ಗಾಂಧಿಭವನದಿಂದ ಅಲ್ಲಿಗೆ ಬರಲಿದೆ.

ಗಾಂಧಿಭವನದ ಉದ್ಘಾಟನೆಗೆ ಉಪ ವಿಭಾಗಾಧಿಕಾರಿ ಕಚೇರಿಯವರು ಕಾಯುತ್ತಿದ್ದರೆ, ಇವರ ಸ್ಥಳಾಂತರಕ್ಕೆ ರೈಲ್ವೆ ಇಲಾಖೆ ಕಾಯುತ್ತಿದೆ. ಕಚೇರಿ ಖಾಲಿಯಾದ ಕೂಡಲೇ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ಪಾರ್ಕಿಂಗ್‌ ಸ್ಥಳವನ್ನು ನಿರ್ಮಿಸಲಿದೆ.

ಸಹಸ್ರಾರು ಸಂಪು, ಪ್ರತಿಭಟನೆ, ಧರಣಿ, ಮುತ್ತಿಗೆ, ಸತ್ಯಾಗ್ರಹ, ನಿರಸನ, ಮುಷ್ಕರಗಳಿಗೆ ಸಾಕ್ಷಿಯಾಗಿದ್ದ ಈ ಕಚೇರಿ ಮುಂದೆ ಇಲ್ಲಿ ಕಾಣಸಿಗದು.

ಸ್ವಾತಂತ್ರ್ಯಪೂರ್ವದ ಇತಿಹಾಸ: ‘ಸುಮಾರು 110 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಇಲ್ಲಿ ಪ್ರವಾಸಿ ಅಧಿಕಾರಿಗಳು ಬಂದು ನಿಂತು ಮುಂದಕ್ಕೆ ಹೋಗುವುದಕ್ಕಾಗಿ ಇಲ್ಲಿ ಈ ಮಂದಿರವನ್ನು ನಿರ್ಮಾಣ ಮಾಡಿದ್ದರು. ಮಣ್ಣಿನ ಕಂಬ, ಗೋಡೆ, ಮಂಗಳೂರು ಹೆಂಚಿನ ಚಾವಣಿಯ ಕಟ್ಟಡ ಇದಾಗಿತ್ತು.

ಒಂದೆರಡು ದಿನ ಇಲ್ಲಿ ಉಳಿದು ಹೋಗುವ ಕಾರ್ಯವಾಗುತ್ತಿತ್ತು. ಒಬ್ಬ ಬ್ರಿಟಿಷ್‌ ಸರ್ಕಾರದ ಅಧಿಕಾರಿ ಇಲ್ಲಿ ಉಳಿದುಕೊಂಡಿದ್ದಾಗ ರಾತ್ರಿ ಪಕ್ಕದಲ್ಲಿ ರೈಲು ಸಾಗಿದ್ದರಿಂದ ನಿದ್ರೆಗೆ ಭಂಗ ಉಂಟಾಗಿತ್ತು. ಮರುದಿನ ಎದ್ದ ಆ ಅಧಿಕಾರಿ ಪ್ರವಾಸಿ ಬಂಗಲೆ ಇರಲು ಇದು ಸೂಕ್ತ ಸ್ಥಳವಲ್ಲ. ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿ ಹೋಗಿದ್ದ. ಹಾಗಾಗಿ ಬಳಿಕ ಜಯದೇವ ಸರ್ಕಲ್‌ ಬಳಿ ಪ್ರವಾಸಿ ಬಂಗಲೆಗೆ ಜಾಗ ಹುಡುಕಲಾಯಿತು. ಬಳಿಕ ಅಲ್ಲಿ ಬಂಗಲೆ ನಿರ್ಮಿಸಲಾಯಿತು ಎಂದು ಹಿರಿಯ ಪತ್ರಕರ್ತ ಎಚ್‌.ಬಿ. ಮಂಜುನಾಥ ‘ಪ್ರಜಾವಾಣಿ’ ಜತೆಗೆ ನೆನಪಿಸಿಕೊಂಡರು.

1882ರವರೆಗೆ ದಾವಣಗೆರೆ ತಾಲ್ಲೂಕು ಶಿವಮೊಗ್ಗ ಜಿಲ್ಲೆಯಲ್ಲಿತ್ತು. ಬಳಿಕ ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. 1886ರಲ್ಲಿ ದಾವಣಗೆರೆ ಉಪ ವಿಭಾಗವಾಗಿತ್ತು. ಅದರಲ್ಲಿ ದಾವಣಗೆರೆ, ಹರಿಹರ, ಹೊಸದುರ್ಗ, ಹೊಳಲ್ಕೆರೆ, ಜಗಳೂರು ತಾಲ್ಲೂಕುಗಳು ಸೇರಿದ್ದವು. 1953ರಲ್ಲಿ ಬರಗಾಲದ ಸಮಯದಲ್ಲಿ ದಾನಿಗಳ ಜತೆಗೆ ಉಪ ವಿಭಾಗಾಧಿಕಾರಿ ರೊಟ್ಟಿ ಹಂಚುತ್ತಿದ್ದ ಫೋಟೊವೂ ಲಭ್ಯವಿದೆ ಎಂದು ವಿವರಿಸಿದರು.

‘ಇಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ಯಾವಾಗ ಆರಂಭಗೊಂಡಿತು ಎಂಬ ಬಗ್ಗೆ ಸ್ಪಷ್ಟ ದಾಖಲೆ ಸಿಕ್ಕಿಲ್ಲ. 1949ರಲ್ಲಿ ದಾವಣಗೆರೆ ಉಪ ವಿಭಾಗಾಧಿಕಾರಿ ಮತ್ತು ಭೂಸ್ವಾಧೀನಾಧಿಕಾರಿಗಳು ಭೂಸ್ವಾಧೀನಕ್ಕೆ ಹೊರಡಿಸಿದ್ದ ಪತ್ರಗಳಿವೆ. ಆದರೆ ಅಧಿಕೃತವಾಗಿ ಯಾರು ಉಪವಿಭಾಗಾಧಿಕಾರಿ ಆಗಿದ್ದರು ಎನ್ನುವ ಮಾಹಿತಿ ಮಾತ್ರ 1964ರ ಬಳಿಕ ಸಿಗುತ್ತದೆ’ ಎಂದು ಈಗಿನ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ವಿವರಿಸಿದರು.

ಬಿ.ಎಂ. ಗಂಜಿಗಪ್ಪ 1964ರಲ್ಲಿ ಉಪ ವಿಭಾಗಾಧಿಕಾರಿ ಆಗಿದ್ದರು. ಅಲ್ಲಿಂದ ಈಗಿನ ಮಮತಾ ಹೊಸಗೌಡರ್‌ ವರೆಗೆ 42 ಮಂದಿ ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ ಈಗಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರೂ ಸೇರಿದ್ದಾರೆ. ಹೀಗೆ ನಾನಾ ಮಂದಿ ಕಾರ್ಯನಿರ್ವಹಿಸಿದ್ದ, ಇನ್ನೂ ಕಟ್ಟಿಯಾಗಿರುವ ಶತಮಾನದ ಕಟ್ಟಡವೊಂದು ಸದ್ದಿಲ್ಲದೇ ಮರೆಗೆ ಸರಿಯಲಿದೆ.

‘ಒಂದು ಕಡೆಯ ಕಾಂಪೌಂಡು ಒಡೆದಾಗಿದೆ’

ನಗರದ ಹೃದಯಭಾಗದಲ್ಲಿ ಒಟ್ಟು 18 ಗುಂಟೆ ಜಮೀನಿದೆ. ಇದನ್ನು ರೈಲ್ವೆಗೆ ಹಸ್ತಾಂತರಿಸಲಾಗಿದೆ. ಇದಕ್ಕೆ ಬದಲಾಗಿ ಬಾತಿಯಲ್ಲಿ ಮೂರು ಎಕರೆ ಭೂಮಿಯನ್ನು ಕಂದಾಯ ಇಲಾಖೆಗೆ ರೈಲ್ವೆ ಇಲಾಖೆ ಹಸ್ತಾಂತರಿಸಿದೆ. ಒಂದು ಕಡೆಯ ಕಾಂಪೌಂಡನ್ನು ತೆಗೆದಾಗಿದೆ. ನಾವು ಎದ್ದು ಹೋಗುವುದನ್ನೇ ರೈಲ್ವೆಯವರು ಕಾಯುತ್ತಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ತಿಳಿಸಿದರು.

ರಾಮನಗರಕ್ಕೆ ಸ್ಥಳಾಂತರಗೊಂಡರೂ ವಾರದಲ್ಲಿ ಮೂರು ದಿನ ನಡೆಯುವ ಎ.ಸಿ. ಕೋರ್ಟ್‌ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಮೂರನೇ ಹಳೇಕಟ್ಟಡ

ಕೆ.ಆರ್‌. ಮಾರ್ಕೆಟ್‌ನಲ್ಲಿರುವ ಓಲ್ಡ್‌ ಮಾಡರ್ನ್‌ ಸ್ಕೂಲ್‌, ಹೈಸ್ಕೂಲ್‌ ಫೀಲ್ಡ್‌ನಲ್ಲಿರುವ ಶಾಲೆ ಬಿಟ್ಟರೆ ಮೂರನೇ ಹಳೇ ಕಟ್ಟಡ ಇದಾಗಿತ್ತು. ಹಿಂದೆ ತಾಲ್ಲೂಕು ಕಚೇರಿ ದುರ್ಗಾಂಬಿಕಾ ದೇವಸ್ಥಾನದ ಬಳಿ ಇತ್ತು. ಅಲ್ಲಿ ಬಳಿಕ ಅದನ್ನು ಶಾಲೆಯಾಗಿ ಪರಿವರ್ತಿಸಲಾಯಿತು. ಈಗ ದೇವಸ್ಥಾನದ ಪ್ರಸಾದ ವಿತರಣಾ ಕೇಂದ್ರವಾಗಿದೆ. ಆ ಕಟ್ಟಡದ ವಿನ್ಯಾಸ ಹಳೇ ಮಾದರಿಯಲ್ಲಿದ್ದರೂ ಮತ್ತೆಲ್ಲ ಬದಲಾಗಿದೆ ಎಂದು ಎಚ್‌.ಬಿ. ಮಂಜುನಾಥ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.