ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ: ಚತುಷ್ಕೋನ ಸ್ಪರ್ಧೆ–ಜಾತಿ ಸಮೀಕರಣದ ಸವಾಲು

ಮತದಾರರ ಸಂಖ್ಯೆ: ಪುರುಷರು 1,24,530 l ಮಹಿಳೆಯರು 1,14,325 l ಒಟ್ಟು 2,38,855
Last Updated 11 ಏಪ್ರಿಲ್ 2021, 20:08 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ):ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಕಂಪ, ಜಾತಿ ಸಮೀಕರಣ ಮತ್ತು ‘ಸ್ವಾಭಿಮಾನ’ದ ಚರ್ಚೆ ಜೋರಾಗಿದೆ.

ಕಳೆದ ಚುನಾವಣೆಯಲ್ಲಿ ಬಿ.ನಾರಾಯಣರಾವ್‌ ಗೆಲ್ಲುವ ಮೂಲಕ 35 ವರ್ಷಗಳ ನಂತರ ಈ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತಂದುಕೊಟ್ಟಿದ್ದರು. ಕೋವಿಡ್‌ನಿಂದಾಗಿ ಅವರು ಮೃತಪಟ್ಟಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ.

ನಾರಾಯಣರಾವ್‌ ಅವರ ಪತ್ನಿ ಮಾಲಾ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದ್ದು, ಅನುಕಂಪದ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಪರಿಶಿಷ್ಟ ಸಮುದಾಯ, ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ತಂತ್ರಗಾರಿಕೆ ನಡೆಸುತ್ತಿದೆ. ಪಕ್ಷದ ವರಿಷ್ಠರು ವಿವಿಧ ಸಮುದಾಯಗಳ ಮುಖಂಡರನ್ನು ಕರೆಸಿ ಪ್ರಚಾರ ಸಭೆಗಳನ್ನು ನಡೆಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಮುಖಂಡರು ಗ್ರಾಮಗಳಲ್ಲೇ ವಾಸ್ತವ್ಯ ಮಾಡಿ ಪ್ರಚಾರ ಕೈಗೊಳ್ಳುತ್ತಿರುವುದು ಮಾಲಾ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.

ಕಲಬುರ್ಗಿ ಜಿಲ್ಲೆಯ ಶರಣು ಸಲಗರ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿಗೆ ಈ ಬಂಡಾಯವೇ ದೊಡ್ಡ ತಲೆನೋವಾಗಿದೆ. ಶರಣು ಹಾಗೂ ಮಲ್ಲಿಕಾರ್ಜುನ ಖೂಬಾ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿಗೆ ಲಿಂಗಾಯತರ ಮತ ವಿಭಜನೆಯ ಆತಂಕ ಎದುರಾಗಿದೆ.

ಶರಣು ಸಲಗರ ಅವರ ಪತ್ನಿ ಸಾವಿತ್ರಿ ಸಲಗರ ಎರಡು ವರ್ಷಗಳ ಹಿಂದೆ ಬಸವಕಲ್ಯಾಣದ ತಹಶೀಲ್ದಾರರಾಗಿ ನಿಯೋಜನೆಗೊಂಡಿದ್ದರು. ಇತ್ತೀಚಿನ ವರೆಗೂ ಅವರು ಅಲ್ಲಿ ಕಾರ್ಯನಿರ್ವಹಿಸಿದರು. ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಠಿಕಾಣಿ ಹೂಡಿರುವಶರಣು ಕ್ಷೇತ್ರ ಸುತ್ತಿ ಲಾಕ್‌ಡೌನ್‌ ಸಮಯದಲ್ಲಿ ‘ಸಮಾಜ ಸೇವೆ’ಯ ಮೂಲಕ ಹೆಸರು ಮಾಡಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅವರದ್ದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದು ಹಾಗೂ ಸಚಿವರ ದಂಡೇ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವುದು ಅವರ ಬಲ ಹೆಚ್ಚಿಸಿದೆ.

ಮಲ್ಲಿಕಾರ್ಜುನ ಖೂಬಾ ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ನಾರಾಯಣರಾವ್ ವಿರುದ್ಧ ಪರಾಭವಗೊಂಡಿದ್ದರು. ಹಿಂದಿನ ಚುನಾವಣೆಯಲ್ಲಿ ಖೂಬಾಗೆ ವಿರೋಧ ವ್ಯಕ್ತಪಡಿಸಿದ್ದ ‘ಬಸವಕಲ್ಯಾಣ ಸ್ವಾಭಿಮಾನಿ ಬಳಗ’ ಈಗ ಅವರ ಬೆಂಬಲಕ್ಕೆ ನಿಂತಿದೆ.

15 ವರ್ಷ ಕಾಂಗ್ರೆಸ್‌ನಲ್ಲಿದ್ದ ಲಾರಿ ಉದ್ಯಮಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರನ್ನು ಜೆಡಿಎಸ್‌ ಕರೆತಂದು ಕಣಕ್ಕಿಳಿಸಿದೆ. ಮುಸ್ಲಿಂ ಮತದಾರರ ಸಂಖ್ಯೆಯೂ ಇಲ್ಲಿ ಹೆಚ್ಚಿದೆ. ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಮತಗಳ ಕ್ರೋಡೀಕರಣಕ್ಕೆ ಯತ್ನಿಸುತ್ತಿದ್ದಾರೆ.

ಬಿ.ನಾರಾಯಣರಾವ್ ಮುಸ್ಲಿಮರಿಗೆ ಆಪ್ತರಾಗಿದ್ದರು. ಈ ಬಾರಿ ಮುಸ್ಲಿಂ ಅಭ್ಯರ್ಥಿಯೇ ಚುನಾವಣಾ ಕಣದಲ್ಲಿದ್ದಾರೆ. ಹೀಗಾಗಿ ಮುಸ್ಲಿಮರು ಯಾರ ಪರವಾಗಿ ನಿಲ್ಲುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ನಿರ್ಧಾರವಾಗಲಿದೆ.

ಮಾಜಿ ಶಾಸಕ, ಮರಾಠ ಸಮುದಾಯದ ಮುಖಂಡ ಮಾರುತಿರಾವ್‌ ಮುಳೆ ಕಳೆದ ಬಾರಿ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರಿದ್ದರು. ಈಗ ಎನ್‌ಸಿಪಿ ಸೇರಿ ನಾಮಪತ್ರ ಸಲ್ಲಿಸಿದ್ದ ಅವರನ್ನು ಬಿಜೆಪಿ ಸೆಳೆದುಕೊಂಡಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಪಿ.ಜಿ.ಆರ್. ಸಿಂಧ್ಯಾ ಕಾಂಗ್ರೆಸ್ ಸೇರಿದ್ದಾರೆ. ಮರಾಠ ಸಮುದಾಯದ ಮತ ಸೆಳೆಯಲು ಬಿಜೆಪಿ–ಕಾಂಗ್ರೆಸ್‌ ಪೈಪೋಟಿ ನಡೆಸುತ್ತಿವೆ.

ಈ ಕ್ಷೇತ್ರದಲ್ಲಿ ಲಿಂಗಾಯತ, ಮರಾಠ, ಮುಸ್ಲಿಂ ಮತದಾರರು ಹೆಚ್ಚೂ–ಕಡಿಮೆ ಸಮ ಸಂಖ್ಯೆಯಲ್ಲಿದ್ದಾರೆ. ಅವರನ್ನು ಓಲೈಸಿಕೊಳ್ಳಲು ಮೂರೂ ಪಕ್ಷಗಳು ಕಸರತ್ತು ನಡೆಸಿವೆ.

ಮೊದಲ ಜಯ ಮಹಿಳೆಗೆ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಜಯ ಸಾಧಿಸಿದವರು ಕಾಂಗ್ರೆಸ್‌ನ ಅನ್ನಪೂರ್ಣಬಾಯಿ. 1957 ಹಾಗೂ 1962ರಲ್ಲಿ ಎರಡು ಬಾರಿ ಅವರು ಗೆದ್ದಿದ್ದರು.

ಈಗ ಕಾಂಗ್ರೆಸ್‌ನ ಮಾಲಾ ಹಾಗೂ ಅಖಿಲ ಭಾರತೀಯ ಮುಸ್ಲಿಂ ಲೀಗ್ (ಸೆಕ್ಯುಲರ್)ನ ಫರ್ಜಾನಾ ಬೇಗಂ ಕಣದಲ್ಲಿದ್ದಾರೆ.

ಜನತಾ ಪರಿವಾರಕ್ಕೆ ಏಳು ಗೆಲುವು

ಜನತಾ ಪರಿವಾರದ ಅಭ್ಯರ್ಥಿಗಳು ಏಳು ಸಲ ಗೆಲುವು ಸಾಧಿಸಿದ್ದರು. ಜನತಾ ಪಕ್ಷದಿಂದ ಬಸವರಾಜ ಪಾಟೀಲ ಅಟ್ಟೂರ್ 1983ರಿಂದ 1994ರ ವರೆಗೆ ನಾಲ್ಕು ಅವಧಿಗೆ ಶಾಸಕರಾಗಿದ್ದರು. ನಂತರ ಜೆಡಿಎಸ್‌ನಿಂದ ಎಂ.ಜಿ.ಮುಳೆ ಒಂದು ಬಾರಿ, ಮಲ್ಲಿಕಾರ್ಜುನ ಖೂಬಾ ಎರಡು ಬಾರಿ ಆಯ್ಕೆಯಾಗಿದ್ದರು.

ಇದೇ ಕಾರಣಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಸವಕಲ್ಯಾಣದಲ್ಲಿ ಬೀಡುಬಿಟ್ಟಿದ್ದಾರೆ. ಕ್ಷೇತ್ರವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT