ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಸ್ಥರ ಪೈಪೋಟಿ: ಆಡಳಿತ ಯಂತ್ರಾಂಗಕ್ಕೆ ಕುಸಿತದ ಭೀತಿ

ಪ್ರಜಾವಾಣಿ ಫೇಸ್‌ಬುಕ್ ಲೈವ್ ಸಂವಾದ
Last Updated 21 ಜೂನ್ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕೋವಿಡ್‌ ಸಂಕಷ್ಟದಲ್ಲಿ ಸಿಲುಕಿರುವಾಗಲೇ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪರ ಮತ್ತು ವಿರೋಧಿ ಬಣಗಳು ಪೈಪೋಟಿಗೆ ಇಳಿದಿವೆ. ಇನ್ನೊಂದು ತಟಸ್ಥ ಬಣವೂ ಸೃಷ್ಟಿಯಾಗಿದೆ. ಮೂರು ಬಣಗಳ ಪೈಪೋಟಿ, ತಂತ್ರ, ಪ್ರತಿತಂತ್ರಗಳಿಂದ ರಾಜ್ಯದ ಆಡಳಿತ ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮ, ರಾಜಕೀಯ ಒಳಸುಳಿಗಳ ಕುರಿತು ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ‘ಬಿಜೆಪಿ: ಮನೆಯೊಂದು ಮೂರು ಬಾಗಿಲು?’ ಕುರಿತ ಸಂವಾದದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಹಂಚಿಕೊಂಡಿರುವ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ...

ಅಪಸ್ವರ ಎತ್ತಿರುವವರು ಮೂರೇ ಮಂದಿ

ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ರಾಜ್ಯ ಸರ್ಕಾರದ ಆಡಳಿತದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತ ನಿರ್ವಹಣೆ ಮತ್ತು ಕೋವಿಡ್‌ ನಿಯಂತ್ರಣದಲ್ಲಿ ಕಿಂಚಿತ್ತೂ ಲೋಪ ಎಸಗಿಲ್ಲ.

ನಾಯಕತ್ವದ ವಿಚಾರದಲ್ಲಿ ಅಪಸ್ವರಗಳು ಬಂದದ್ದು ನಿಜ. ಅದು ಬಯಲಿಗೆ ಬರಬಾರದಿತ್ತು. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಬೇಕಾದ ವಿಚಾರಗಳು ಬಯಲಿಗೆ ಬಂದಾಗ ಅವು ಪ್ರತಿಪಕ್ಷಗಳಿಗೆ ಆಹಾರವಾಗುವುದು ಸಹಜ. ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್‌ ಎಲ್ಲವನ್ನೂ ಸರಿಪಡಿಸುತ್ತದೆ.

ಸಂಖ್ಯಾಬಲದ ಆಧಾರದಲ್ಲೇ ರಾಜಕಾರಣ ನಡೆಯುತ್ತಿರುವುದರಿಂದ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಮಲ್ಲಿಕಾರ್ಜುನ ಖರ್ಗೆಯಂತವರು ಇನ್ನೂ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ. ರಾಮಕೃಷ್ಣ ಹೆಗಡೆ ಅವರನ್ನು ಉಚ್ಛಾಟಿಸಿದ್ದು ಏಕೆ? ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್‌, ಬಿ.ಎನ್‌. ಬಚ್ಚೇಗೌಡ ಏಕೆ ಪಕ್ಷ ತೊರೆದು ಹೋದರು. ಇವು ಕೂಡ ಚರ್ಚೆ ಆಗಬೇಕಲ್ಲವೆ?

ವಿಶ್ವನಾಥ್‌, ಯೋಗೇಶ್ವರ್‌ ನೇರವಾಗಿ ಮುಖ್ಯಮಂತ್ರಿಯವರ ಮಗನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಿಶ್ವನಾಥ್‌ ಮತ್ತು ಯೋಗೇಶ್ವರ್‌ ಹೇಗೆಲ್ಲಾ ಪಕ್ಷಾಂತರ ಮಾಡಿದರು ಮತ್ತು ಅವರು ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಯಡಿಯೂರಪ್ಪ ಸದೃಢರಾಗಿದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ನಾಯಕತ್ವದ ವಿರುದ್ಧ ಮಾತನಾಡುತ್ತಿರುವವರು ಕೇವಲ ಮೂರು ಮಂದಿ.

ಈಗ ನಡೆಯುತ್ತಿರುವುದು ಪಕ್ಷದ ಆಂತರಿಕ ವಿಚಾರ. ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಈ ರೀತಿಯ ಘಟನೆಗಳು ನೋವುಂಟು ಮಾಡುತ್ತವೆ. ಈಗ ತಕರಾರು ಎತ್ತಿರುವ ಎಲ್ಲರೂ ತಾವಾಗಿಯೇ ಬಿಜೆಪಿಗೆ ಬಂದವರು. ಶಿಸ್ತು ಪಾಲಿಸಲೇಬೇಕು. ತಪ್ಪಿದರೆ ಇಲ್ಲಿ ಹೆಚ್ಚು ಕಾಲ ಉಳಿಯಲಾಗದು. ಮುಖ್ಯಮಂತ್ರಿ ಹುದ್ದೆಯಲ್ಲಿ ಯಾರೇ ಇದ್ದರೂ ಒಂದಲ್ಲಾ ಒಂದು ದಿನ ಕೆಳಗೆ ಇಳಿಯಲೇಬೇಕು. ಶಾಸಕರ ವಿಶ್ವಾಸ, ಹೈಕಮಾಂಡ್‌ ಬೆಂಬಲ ಇರುವವರೆಗೆ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುತ್ತಾರೆ.

– ತೇಜಸ್ವಿನಿ ಗೌಡ,

ವಿಧಾನ ಪರಿಷತ್‌ನ ಬಿಜೆಪಿ ಸದಸ್ಯೆ

****************

ಕುಸಿತದತ್ತ ಆಡಳಿತ ವ್ಯವಸ್ಥೆ

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ರಾಜಕೀಯ ಪಕ್ಷಗಳ ವಿಚಾರಕ್ಕೆ ಬಂದಾಗ ಎಲ್ಲರ ಮನೆ ದೋಸೆಯೂ ತೂತೇ. ಆದರೆ, ಆಡಳಿತ ಪಕ್ಷದವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈಗ ಇರುವ ಸರ್ಕಾರಕ್ಕೆ ಮೂರು ಬಾಗಿಲು ಇದೆಯೆ? ನೂರು ಬಾಗಿಲು ಇದೆಯೆ? ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಈ ಸರ್ಕಾರದಲ್ಲಿ ಎಲ್ಲವೂ ಅಯೋಮಯವಾಗಿದೆ.

ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಮುಖ್ಯಮಂತ್ರಿಯವರ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಡಾ.ಕೆ. ಸುಧಾಕರ್‌ ನಡುವೆ ಸಂಘರ್ಷ ನಡೆಯುತ್ತಿದೆ. ಸಚಿವ ಸಿ.ಪಿ. ಯೋಗೇಶ್ವರರ್‌ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಹಸ್ತಕ್ಷೇಪದ ಕುರಿತು ಆರೋಪ ಮಾಡಿದ್ದಾರೆ.

ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಉತ್ತಮ ಆಡಳಿತ ಸಿಗುತ್ತಿಲ್ಲ ಎಂಬುದು ನಮ್ಮ ಆತಂಕ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಸಾಲ ಹೆಚ್ಚಾಗಿದೆ. ಜಿಎಸ್‌ಟಿ ಪರಿಹಾರ ಸರಿಯಾಗಿ ಸಿಗುತ್ತಿಲ್ಲ. ಬಿಜೆಪಿಯಲ್ಲಿ ಗಟ್ಟಿಯಾದ ನಾಯಕತ್ವ ಇದ್ದಿದ್ದರೆ ದೆಹಲಿಯಲ್ಲಿ ಇದೆಲ್ಲವನ್ನೂ ಪ್ರಶ್ನಿಸುತ್ತಿರಲಿಲ್ಲವೆ?

ಆಡಳಿತದ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲ ಎಂಬುದಕ್ಕೆ ಹತ್ತಾರು ಉದಾಹರಣೆಗಳಿವೆ. ಸರ್ಕಾರ ನಡೆಸುವವರ ಕಡೆಗೆ ಎಲ್ಲರ ಗಮನ ಇರುತ್ತದೆ. ವಿರೋಧ ಪಕ್ಷಗಳಲ್ಲಿ ಏನು ನಡೆಯುತ್ತಿದೆ ಎಂಬುದು ಮುಖ್ಯವಾಗುವುದಿಲ್ಲ. ಶಿಸ್ತು ಶಿಸ್ತು ಎನ್ನುವ ಬಿಜೆಪಿ ವರಿಷ್ಠರು ಹಾದಿ, ಬೀದಿಯಲ್ಲಿ ಆರೋಪ ಮಾಡುವ ಶಾಸಕರ ಕುರಿತು ಏನು ಮಾಡಿದ್ದಾರೆ? ರಾಜ್ಯದ ಜನರ ಅಭಿಪ್ರಾಯ ಸಂಗ್ರಹಿಸಿ. ವಾಸ್ತವ ಸ್ಥಿತಿ ಗೊತ್ತಾಗುತ್ತದೆ.

‘ಬಿಎಸ್‌ವೈ ಮುಕ್ತ ಬಿಜೆಪಿ’ ಅಭಿಯಾನ ಶುರುವಾಗಿದೆ. ಅದರ ಪರಿಣಾಮವಾಗಿ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಎಲ್ಲರೂ ಸ್ವಂತ ಹಿತಾಸಕ್ತಿ ಕಾಯಲು ಹೊರಟಿದ್ದಾರೆ.

– ಪ್ರಿಯಾಂಕ್‌ ಖರ್ಗೆ,

ಕಾಂಗ್ರೆಸ್‌ ಶಾಸಕ

************

ಬಿಎಸ್‌ವೈ ರಾಜೀನಾಮೆ ನೀಡುವುದೇ ಒಳ್ಳೆಯದು

ವೆಂಕಟರಾವ್ ನಾಡಗೌಡ
ವೆಂಕಟರಾವ್ ನಾಡಗೌಡ

ಸರ್ಕಾರದಲ್ಲಿ ಇದ್ದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದು ಅಭದ್ರ ಸರ್ಕಾರ. ಮೂರು ಬಾಗಿಲೋ? ಆರು ಬಾಗಿಲೋ? ಅದನ್ನು ಮುಚ್ಚುವುದಕ್ಕೆ ಏನಾದರೂ ಇದೆಯೆ ಎನ್ನುವ ಅನುಮಾನ ಇದೆ. ಬಿಜೆಪಿಯಲ್ಲಿರುವ ಬಿಕ್ಕಟ್ಟು ಪರಿಹಾರಕ್ಕೆ ದೆಹಲಿಯಿಂದ ಬಂದ ಉಸ್ತುವಾರಿ ಮೂರು ದಿನ ಸಭೆ ನಡೆಸಿ ಹೋಗಿದ್ದಾರೆ. ಒಂದು ಕಡೆ ನಾಯಕತ್ವ ಬದಲಾವಣೆ ಇಲ್ಲ ಎಂದರೆ, ಮತ್ತೊಂದು ಕಡೆಯಿಂದ ಯಡಿಯೂರಪ್ಪ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಯಡಿಯೂರಪ್ಪ ಗೌರವಯುತವಾಗಿ ರಾಜೀನಾಮೆ ನೀಡಿ ಕೆಳಕ್ಕೆ ಇಳಿಯುವುದೇ ಒಳ್ಳೆಯದು. ಬೇರೆಯವರಾದರೂ ಬಂದು ಒಳ್ಳೆಯ ಆಡಳಿತ ನೀಡಬಹುದು.

ಈ ರೀತಿ ರಾಜಕೀಯವನ್ನು ಕಲುಷಿತಗೊಳಿಸಿರುವುದು ಬಿಜೆಪಿಯೇ. ಹಿಂದೆ ವಿವಿಧ ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ನಡೆಸಿರುವುದಕ್ಕೂ ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ರಾಜೀನಾಮೆ ಕೊಡಿಸಿ, ಪಕ್ಷಾಂತರ ಮಾಡಿಸಿ ಸರ್ಕಾರ ರಚಿಸಿರುವುದನ್ನೂ ಒಂದೇ ರೀತಿ ನೋಡಲಾಗದು. ಈಗಿನ ಬಿಜೆಪಿ ಸರ್ಕಾರವನ್ನು ಹೇಗೆ ರಚಿಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತು.

ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಸಚಿವರೊಂದು ಆದೇಶ ಮಾಡಿದರೆ, ಅಧಿಕಾರಿಗಳು ಮತ್ತೊಂದು ಆದೇಶ ಹೊರಡಿಸುತ್ತಾರೆ. ಸರ್ಕಾರದ ಕೆಲಸದ ದೇವರ ಕೆಲಸ ಎಂಬ ಮಾತಿದೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ದೆವ್ವದ ಕೆಲಸ ಎನ್ನುವಂತಾಗಿದೆ. ಈಗ ಜವಾಬ್ದಾರಿಯುತ ಸರ್ಕಾರವಾಗಿ ಕೆಲಸ ಮಾಡಬೇಕು.

ಸಚಿವರೇ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆ ಸಚಿವರನ್ನು ಕಿತ್ತು ಹಾಕಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತಿಲ್ಲ. ಇದು ಸುಭದ್ರ ಸರ್ಕಾರವೆ? ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಕ್ರಮ ಜರುಗಿಸಿ ಹದ್ದುಬಸ್ತಿಗೆ ತರದಿದ್ದರೆ ಆಡಳಿತ ವ್ಯವಸ್ಥೆಗೆ ಅಪಾಯ.

– ವೆಂಕಟರಾವ್‌ ನಾಡಗೌಡ,

ಜೆಡಿಎಸ್‌ ಶಾಸಕ

ಪೂರ್ಣ ಸಂವಾದಕ್ಕೆ ನೋಡಿ: https://www.facebook.com/prajavani.net/videos

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT