ಬುಧವಾರ, ಜೂನ್ 16, 2021
27 °C

ಕೋವಿಡ್ ಲಸಿಕೆ | ಅಂಗವಿಕಲರಿಗೆ ಮೊದಲ ಆದ್ಯತೆ: ಅರುಂಧತಿ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಅಂಗವಿಕಲರಿಗೆ ಮೊದಲ ಆದ್ಯತೆ ನೀಡಬೇಕು. ಅವರು ಲಸಿಕೆಗಾಗಿ ಕಾಯುವಂತಾಗಬಾರದು’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಸುತ್ತೋಲೆ ಹೊರಡಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಆದ್ಯತೆ ಅನುಸಾರ ಕೋವಿಡ್ ಲಸಿಕೆ ನೀಡಲು ಹೈಕೋರ್ಟ್ ಸೂಚಿಸಿತ್ತು.

‘ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಾಗಾಗಿ, ಸಂಬಂಧಪಟ್ಟ ಇಲಾಖೆಗಳು ಲಸಿಕೆ ಪಡೆಯಲು ಅರ್ಹರಾದ ಅಂಗವಿಕಲ ಫಲಾನುಭವಿಗಳ ಮಾಹಿತಿಯ ಪಟ್ಟಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಬೇಕು. ಆ ಪಟ್ಟಿಯ ಅನುಸಾರ ಕ್ರಿಯಾಯೋಜನೆ ತಯಾರಿಸಿ, ಫಲಾನುಭವಿಗಳಿಗೆ ಸುಲಭವಾಗಿ ಲಸಿಕೆ ದೊರೆಯಬಹುದಾದ ಕೇಂದ್ರಗಳನ್ನು ಆರೋಗ್ಯ ಇಲಾಖೆ ಗುರುತಿಸಬೇಕು. ಅಂತಹ ಕೇಂದ್ರಗಳಲ್ಲಿ ಅವರಿಗೆ ವಿಳಂಬ ಮಾಡದೆಯೇ ಲಸಿಕೆ ಒದಗಿಸಬೇಕು’ ಎಂದು ಸೂಚಿಸಿದ್ದಾರೆ.

‘ಕೇಂದ್ರಗಳಲ್ಲಿ ಗಾಲಿ ಕುರ್ಚಿ, ನೀರಿನ ಸೌಲಭ್ಯ, ಶೌಚಾಲಯ ಸೇರಿದಂತೆ ವಿವಿಧ ವ್ಯವಸ್ಥೆಗಳು ಇರಬೇಕು. ಅರ್ಹ ಫಲಾನುಭವಿಗಳ ವಿವರವನ್ನು ವಾಟ್ಸ್‌ ಆ್ಯಪ್, ಇ-ಮೇಲ್ ಮತ್ತು ಮೊಬೈಲ್ ಸಂದೇಶಗಳ ಮೂಲಕ ಕೂಡ ಪಡೆದು, ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಲಸಿಕೆ ಪಡೆಯುವ ದಿನಾಂಕ ಮತ್ತು ಸಮಯದ ಬಗ್ಗೆ ಮುಂಚಿತವಾಗಿ ಸಂದೇಶ ರವಾನಿಸಬೇಕು. ಲಸಿಕೆ ಕೇಂದ್ರಗಳಿಗೆ ಬರಲು ಮತ್ತು ಅಲ್ಲಿಂದ ಮನೆಗೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸುವ ಸಂಬಂಧ ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಬಹುದಾಗಿದೆ’ ಎಂದು ತಿಳಿಸಿದ್ದಾರೆ.

‘18ರಿಂದ 44 ವರ್ಷದವರೆಗಿನ ಅಂಗವಿಕಲ ಫಲಾನುಭವಿಗಳಿಗೆ ಲಸಿಕೆ ಒದಗಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸುತ್ತೋಲೆಯಲ್ಲಿ ವಿವರಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು