ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ-2020: ಬದುಕು ಬರಡಾಗಿಸಿದ ಪ್ರವಾಹ

Last Updated 28 ಡಿಸೆಂಬರ್ 2020, 19:46 IST
ಅಕ್ಷರ ಗಾತ್ರ
ADVERTISEMENT
""

ಕಲಬುರ್ಗಿ: ಕೊರೊನಾ ಮತ್ತು ಲಾಕ್‌ಡೌನ್‌ ಕಾರಣ ಬಹುಪಾಲು ಜನರು ಹಳ್ಳಿ–ಜಮೀನುಗಳತ್ತ ಮುಖಮಾಡಿದ್ದರಿಂದ ಈ ವರ್ಷ ಬಿತ್ತನೆಯ ಕ್ಷೇತ್ರ ಹೆಚ್ಚಾಗಿತ್ತು. ಆಹಾರ ಧಾನ್ಯ, ಕೃಷಿ ಉತ್ಪನ್ನಗಳ ಉತ್ಪಾದನೆ ವೃದ್ಧಿಯಾಗುವ ಆಶಾಭಾವ ಮೂಡಿತ್ತು. ಆದರೆ, ರಾಜ್ಯದ ಬಹುಭಾಗದಲ್ಲಿ ಉಂಟಾದ ಅತಿವೃಷ್ಟಿ ಮತ್ತು ಪ್ರವಾಹ ರೈತರ ಬದುಕನ್ನೇ ಬರಡಾಗಿಸಿತು.

ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಕೃಷ್ಣಾ ಮತ್ತು ಅದರ ಉಪ ನದಿಗಳು ಪ್ರವಾಹ ಉಂಟು ಮಾಡಿದ್ದರಿಂದ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲ್ಯಾಣ ಕರ್ನಾಟಕದ ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ರೈತರು ಹಾಗೂ ನದಿ ತೀರಗಳ ಗ್ರಾಮಸ್ಥರು ಅಕ್ಷರಶಃ ನಲುಗಿ ಹೋದರು.ವಿದ್ಯಾರ್ಥಿಗಳ ಪಠ್ಯಪುಸ್ತಕ, ಶಾಲಾ ಪ್ರಮಾಣ ಪತ್ರಗಳೂ ನೀರು ಪಾಲಾದವು.

ಕೊಡಗು ಜಿಲ್ಲೆ ಸತತ 3ನೇ ವರ್ಷವೂ ಪ್ರಕೃತಿ ವಿಕೋಪಕ್ಕೆ ತುತ್ತಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಭೂಕುಸಿತಗಳಿಗೆ ಜೀವ ಹಾಗೂ ಆಸ್ತಿ ಹಾನಿ ಸಂಭವಿಸಿತು.

ರಾಜ್ಯದ ಬಹುಭಾಗದಲ್ಲಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಕಬ್ಬು, ಈರುಳ್ಳಿ, ಸೋಯಾ, ಸೂರ್ಯಕಾಂತಿ, ಹೆಸರು, ಉದ್ದು, ಹತ್ತಿ, ಶೇಂಗಾ ಮತ್ತಿತರ ಬೆಳೆ, ಅತಿವೃಷ್ಟಿಯಿಂದ ಜಲಾವೃತವಾಗಿ ರೈತರು ನಷ್ಟ ಅನುಭವಿಸಿದರು. ಅತಿವೃಷ್ಟಿ ಹಾಗೂ ಪ್ರವಾಹದಿಂದ 3.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಯ ಕೃಷಿ ಹಾಗೂ 33 ಸಾವಿರ ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಯಾಯಿತು.

ಬೆಂಗಳೂರು, ಮೈಸೂರು, ಮಂಗಳೂರು, ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ, ಬೆಳಗಾವಿಯಂತಹ ದೊಡ್ಡ ನಗರಗಳ ಜನರಿಗೂ ಅತಿವೃಷ್ಟಿಯ ಬಿಸಿ ತಟ್ಟಿತು. ರಸ್ತೆ, ಕೆರೆ–ಕಟ್ಟೆ ಕೊಚ್ಚಿ ಹೋಗಿದ್ದರಿಂದಮೂಲಸೌಕರ್ಯಕ್ಕೂ ಸಾಕಷ್ಟು ಹಾನಿಯಾಯಿತು.

ರಾಜ್ಯದಲ್ಲಿ 10,978 ಮನೆ, 14,182 ಕಿ.ಮೀ ರಸ್ತೆ, 1,268 ಸೇತುವೆ, 360 ಕೆರೆ, 3,168 ಸರ್ಕಾರಿ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. 20ಕ್ಕೂ ಹೆಚ್ಚು ಜನರ ಜೀವಹಾನಿಯಾಗಿದೆ. ಒಟ್ಟಾರೆ ಹಾನಿಯ ಮೊತ್ತ ₹ 8,071 ಕೋಟಿ ಎಂದು ರಾಜ್ಯ ಸರ್ಕಾರ ಅಂದಾಜು ಮಾಡಿದೆ.

ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲ್ಲೂಕಿನಲ್ಲಿ ಕಾಗಿಣಾನದಿ ಪ್ರವಾಹದ ವೇಳೆ ಗ್ರಾಮಸ್ಥರುತೆಪ್ಪದ ಸಹಾಯದಿಂದಭೀಮನಗರದಿಂದ ಹೊನಗುಂಟಾತಲುಪಿದರು. –ಸಂಗ್ರಹ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT