ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗಳ ಬಾಕಿ ಮೊತ್ತ ಕಾಲಮಿತಿಯೊಳಗೆ ಪಾವತಿಗೆ ಸರ್ಕಾರ ಆದೇಶ

ಬಿಲ್‌ಗಳ ಜ್ಯೇಷ್ಠತೆಯ ಆಧಾರದಲ್ಲಿ ಬಾಕಿ ಮೊತ್ತ ಪಾವತಿ
Last Updated 24 ಆಗಸ್ಟ್ 2022, 20:35 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರರು ನಿರ್ವಹಿಸಿದ ವಿವಿಧ ಕಾಮಗಾರಿಗಳ ಬಾಕಿ ಮೊತ್ತವನ್ನು ಬಿಲ್‌ಗಳ ಜ್ಯೇಷ್ಠತೆಯ ಆಧಾರದಲ್ಲಿ ಕಾಲಮಿತಿಯ ಒಳಗೆ ತ್ವರಿತ ಪಾವತಿ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ನಡೆಸಿದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಗುತ್ತಿಗೆದಾರರ ಬಾಕಿ ಮೊತ್ತವನ್ನು ಸಲ್ಲಿಕೆಯಾದ ಬಿಲ್‌ಗಳ ಜ್ಯೇಷ್ಠತೆಯ ಆಧಾರದಲ್ಲಿ ನೀಡಲು ಅನುಕೂಲವಾಗುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪ್ರತಿ ಕಾಮಗಾರಿಯ ಟೆಂಡರ್‌ಗಳನ್ನೂ 1999ರ ಕರ್ನಾಟಕ ಪಾರದರ್ಶಕ ಕಾಯ್ದೆಯ ಅನ್ವಯವೇ ಕೈಗೊಳ್ಳಬೇಕು. ಟೆಂಡರ್‌ ಮೌಲ್ಯಮಾಪನಗಳನ್ನು ನಿಯಮಾನುಸಾರ ನಿಗದಿಪಡಿಸಬೇಕು. ಸಲ್ಲಿಕೆಯಾದ ಅರ್ಜಿಗಳಲ್ಲಿ ಅತ್ಯಂತ ಕಡಿಮೆ ದರ ನಮೂದಿಸಿದ ವಾಣಿಜ್ಯ ಮತ್ತು ತಾಂತ್ರಿಕವಾಗಿ ಅರ್ಹರಾಗಿರುವ ಗುತ್ತಿಗೆದಾರರಿಗೆ ಕಾಮಗಾರಿ ನೀಡಬೇಕು. ಗುತ್ತಿಗೆ ಪಡೆದವರು ಕಾಮಗಾರಿ ನಿರ್ವಹಿಸುವಲ್ಲಿ ವಿಫಲರಾದರೆ, ಅವರ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಟೆಂಡರ್‌ ಮೊತ್ತವನ್ನು ₹ 1 ಕೋಟಿಗೆ ಮಿತಿಗೊಳಿಸಬೇಕು ಎಂದು ಆರ್ಥಿಕ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಕಾರ್ಯ ಯೋಜನೆಯ
ಅನುಷ್ಠಾನವನ್ನು ಗಮನದಲ್ಲಿ ಇಟ್ಟುಕೊಂಡು ಕಾಮಗಾರಿಗಳನ್ನು ನಿಗದಿಪಡಿಸಬೇಕು. ಪ್ರತಿ ಹಂತದಲ್ಲೂ ಟೆಂಡರ್‌ ಆಹ್ವಾನಿಸುವ, ಅಂಗೀಕರಿಸುವ ಪ್ರಾಧಿಕಾರ ನೇಮಕ ಕಡ್ಡಾಯವಾಗಿರುತ್ತದೆ. ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳಿಗೆ ಟೆಂಡರ್‌ ಕರೆಯಲು ಗೊತ್ತುಪಡಿಸಿದ ಮೊತ್ತವನ್ನು ಮೀರದಂತೆ ಈ ಪ್ರಾಧಿಕಾರಗಳು ಎಚ್ಚರಿಕೆ ವಹಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

₹50 ಲಕ್ಷದಿಂದ ₹1 ಕೋಟಿಯವರೆಗೆ, ₹1 ಕೋಟಿ ಮೇಲ್ಪಟ್ಟು ಟೆಂಡರ್‌ ಪಡೆದ ಗುತ್ತಿಗೆದಾರರಿಗೆ ನಿಯಮದ ಅನ್ವಯ ನಿಗದಿಪಡಿಸಲಾಗಿದ್ದ ಯಂತ್ರೋಪಕರಣಗಳ ಸಾಮರ್ಥ್ಯವನ್ನು ನಿಗದಿಪಡಿಸಲಾಗಿತ್ತು. ಈ ನಿಯಮವನ್ನು ಸಡಿಲಿಸಿ ₹ 3 ಕೋಟಿವರೆಗಿನ ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗಿದೆ.

₹ 1,940 ಕೋಟಿ ಬಾಕಿ ಪಾವತಿ

₹ 50 ಕೋಟಿ ಮೀರಿದ ಟೆಂಡರ್‌ ಹಾಗೂ ಅಂದಾಜುಗಳ ಪೂರ್ವ ಪರಿಶೀಲನೆಗೆ ನಿವೃತ್ತ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪರಿಣತಿ ಹೊಂದಿರುವ ಸದಸ್ಯರ ಸಮಿತಿ ರಚಿಸಲು ಜಲಸಂಪನ್ಮೂಲ ಇಲಾಖೆ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

₹ 2 ಕೋಟಿ ಒಳಗಿನ ಕಾಮಗಾರಿಗಳ ಬಾಕಿ ₹ 1,940 ಕೋಟಿ (9,800 ಬಿಲ್‌ಗಳು) ಪಾವತಿಸಲಾಗಿದ್ದು, ₹ 2 ಕೋಟಿಗೂ ಅಧಿಕ ಮೊತ್ತದ ಬಿಲ್‌ಗಳನ್ನೂ ತ್ವರಿತವಾಗಿ ಪಾವತಿಸಲು ಸೂಚಿಸಲಾಗಿದೆ. ಆ ಮೂಲಕ ಸಣ್ಣಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ.

2020–21ನೇ ಸಾಲಿನಲ್ಲಿ ಬಾಕಿ ಇದ್ದ ಯೋಜನಾ ಕಾಮಗಾರಿಗಳ ₹ 10 ಸಾವಿರ ಕೋಟಿ ಬಾಕಿ ಸೇರಿ, ₹ 19,974 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.*********************************

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT