ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಮುಂಬಡ್ತಿಗೆ ತೆರೆದ ಬಾಗಿಲು

ಸರ್ಕಾರದ ಹೊಸ ಆದೇಶ: ಶೇ 30ರಷ್ಟು ನೌಕರರಿಗೆ ಪದೋನ್ನತಿ ಅವಕಾಶ
Last Updated 10 ಡಿಸೆಂಬರ್ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ನೌಕರರಿಗೆ ಬಡ್ತಿ ನೀಡುವಲ್ಲಿ ಇದ್ದ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿರುವ ಸರ್ಕಾರ, ಪದೋನ್ನತಿಯ ಅವಕಾಶದ ಬಾಗಿಲನ್ನೇ ತೆರೆದಿದೆ.

ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ಖಾಲಿ ಸ್ಥಾನ ಆಧಾರಿತ ವರ್ಗೀಕರಣದ ಬದಲು ಮಂಜೂರಾದ ಒಟ್ಟು ಹುದ್ದೆ ಆಧಾರಿತ ವರ್ಗೀಕರಣ ವಿಧಾನ ಅನುಸರಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಶುಕ್ರವಾರ ಆದೇಶ ಹೊರಡಿಸಿದೆ. ಹೊಸ ಆದೇಶದಿಂದಾಗಿ ಪ್ರತಿ ಇಲಾಖೆಯಲ್ಲಿನ ಶೇ 25ರಿಂದ 30ರಷ್ಟು ನೌಕರರಿಗೆ ಮುಂಬಡ್ತಿ ಅವಕಾಶಗಳು ಸಿಗಲಿವೆ ಎಂದು ಡಿಪಿಎಆರ್‌ ಮೂಲಗಳು ಹೇಳಿವೆ.

ಈಗಿರುವ ನಿಯಮದ ಅನುಸಾರ ಯಾವುದೇ ಶ್ರೇಣಿಯ (ಕೇಡರ್‌) ನೌಕರರು ಮುಂಬಡ್ತಿ ಪಡೆದರೆ, ಬಡ್ತಿ ಪಡೆದ ನೌಕರರು ಹೊಂದಿರುವ ಹುದ್ದೆ ಖಾಲಿಯಾಗುತ್ತವೆ. ಆ ಎಲ್ಲ ಹುದ್ದೆ
ಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡುವಂತಿರಲಿಲ್ಲ. ಖಾಲಿಯಾದ ಹುದ್ದೆಗಳ ಪೈಕಿ ಶೇ 50ರಷ್ಟು ನೇರನೇಮಕಾತಿ ಹಾಗೂ ಶೇ 50ರಷ್ಟು ಮುಂಬಡ್ತಿಯಿಂದ ಭರ್ತಿ ಮಾಡಲು ಅವಕಾಶ ಇತ್ತು. ಇದರಿಂದಾಗಿ ಕೆಳಹಂತದ ನೌಕರರು ಬಡ್ತಿ ಪಡೆಯಲು ಅನೇಕ ವರ್ಷ ಕಾಯಬೇಕಿತ್ತು. ಅನೇಕ ವರ್ಷ ನೇರ ನೇಮಕಾತಿ ನಡೆಯದೇ ಇದ್ದರೆ ಆ ಹುದ್ದೆಗಳು ಖಾಲಿ ಉಳಿದು, ಅಸಮತೋಲನ ಆಗುತ್ತಿತ್ತು. ಇನ್ನು ಮುಂದೆ ಅದು ತಪ್ಪಲಿದೆ.

‌ಉದಾಹರಣೆಗೆ, ಒಂದುಇಲಾಖೆಯಲ್ಲಿ 100 ಸೂಪರಿಂಟೆಂಡೆಂಟ್‌ ಹುದ್ದೆ ಖಾಲಿ ಇದ್ದರೆ 50:50 ಅನುಪಾತದಲ್ಲಿ ಭರ್ತಿ ಮಾಡಲಾಗುತ್ತದೆ. ಈ ಅವಕಾಶದಡಿ 50 ಮಂದಿ ಪ್ರಥಮ ದರ್ಜೆ ಸಹಾಯಕ ಹುದ್ದೆಯಿಂದ ಬಡ್ತಿ ಪಡೆಯುತ್ತಿದ್ದರು. ಬಡ್ತಿ ಪಡೆದ ಪ್ರಥಮ ದರ್ಜೆ ಸಹಾಯಕರಿಂದ ಖಾಲಿಯಾಗುವ ಐವತ್ತೂ ಹುದ್ದೆಗಳಿಗೆ ದ್ವಿತೀಯ
ದರ್ಜೆ ಸಹಾಯಕರು ಅರ್ಹತೆ ಪಡೆಯುತ್ತಿರಲಿಲ್ಲ.

ಪ್ರಥಮ ದರ್ಜೆ ಸಹಾಯಕರ 50 ಹುದ್ದೆಗಳಲ್ಲಿ 25 ಅನ್ನು ನೇರ ನೇಮಕಾತಿ, ಉಳಿದ 25 ಅನ್ನು ಮುಂಬಡ್ತಿ ಮುಖೇನ ತುಂಬಲಾಗುತ್ತಿತ್ತು. ಹೊಸ ಆದೇಶದ ಅನ್ವಯ 50 ಹುದ್ದೆಗಳನ್ನೂ ಮುಂಬಡ್ತಿ ಮೂಲಕವೇ ತುಂಬಲು ಅವಕಾಶ ಸಿಗಲಿದೆ.

ಹಿಂದೆ ಇದ್ದ ನಿಯಮಗಳೇನು: 1976ರ ಸುತ್ತೋಲೆ ಪ್ರಕಾರ ನೇರ ನೇಮಕಾತಿ ಹಾಗೂ ಮುಂಬಡ್ತಿ ಪಾಲಿನ ಖಾಲಿ ಸ್ಥಾನಗಳನ್ನು ವರ್ಗೀಕರಣ ಮಾಡಿ ಲೆಕ್ಕ ಹಾಕಲು ‘ಬ್ಲಾಕ್ ಅವಧಿ’ಯನ್ನು ಗುರುತಿಸಬೇಕಾಗಿತ್ತು. ಅದರಂತೆ, ಆಯಾ ಇಲಾಖೆಗಳು ರಚಿಸಿಕೊಂಡಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ನೇರ ನೇಮಕಾತಿ ಮುಖಾಂತರ ನೇಮಕಾತಿಯಾಗುವವರೆಗೆ ಬ್ಲಾಕ್ ಅವಧಿಯನ್ನು ಗುರುತಿಸಬೇಕಿತ್ತು. ವೃಂದ ಮತ್ತು ನೇಮಕಾತಿ ನಿಯಮಗಳು ಈ ಮಧ್ಯೆ ತಿದ್ದುಪಡಿಯಾದಲ್ಲಿ, ತಿದ್ದುಪಡಿಯಾದ ದಿನಾಂಕದವರೆಗೆ ಈ ನಿಯಮ ಅನ್ವಯಿಸಬೇಕಾಗಿತ್ತು. ಹೀಗೆ ಒಂದು ಬ್ಲಾಕ್ ಅವಧಿಯಲ್ಲಿ ಯಾವುದೇ ಕಾರಣದಿಂದ (ನಿಧನ, ನಿವೃತ್ತಿ, ರಾಜೀನಾಮೆ, ವಜಾ) ಸೃಷ್ಟಿಯಾದ ಖಾಲಿ ಹುದ್ದೆಗಳನ್ನು ನಿಗದಿತ ಅನುಪಾತದ ಅನ್ವಯ ನೇರನೇಮಕಾತಿಯ ಖಾಲಿ ಸ್ಥಾನಗಳು ಮತ್ತು ಮುಂಬಡ್ತಿಗಾಗಿನ ಖಾಲಿ ಸ್ಥಾನಗಳು ಎಂದು ವರ್ಗೀಕರಿಸಬೇಕಾಗಿತ್ತು. ಈ ಪೈಕಿ ನೇರ ನೇಮಕಾತಿ ಮತ್ತು ಮುಂಬಡ್ತಿಯ ಖಾಲಿ ಸ್ಥಾನಗಳ ಮೀಸಲನ್ನು ಬದಲಾವಣೆ ಮಾಡಲು ಅವಕಾಶ
ಇರಲಿಲ್ಲ.

ಇದರಿಂದಾಗಿ, ಇಲಾಖೆಯಲ್ಲಿ ನೂರಾರು ಖಾಲಿ ಹುದ್ದೆಗಳಿದ್ದರೂ ಮುಂಬಡ್ತಿಯಿಂದ ತುಂಬುವ ಅವಕಾಶ ಇಲ್ಲದೇ ಇರುವ ಕಾರಣಕ್ಕೆ ಇವೆಲ್ಲವೂ ಖಾಲಿಯೇ ಉಳಿದಿದ್ದವು. ಬಡ್ತಿ ಪಡೆಯುವ ಅರ್ಹತೆ ಇದ್ದ ಸಾವಿರಾರು ನೌಕರರು ಪದೋನ್ನತಿಯಿಂದ ವಂಚಿತರಾಗಿದ್ದರು. ಈ ನಿಯಮವನ್ನು ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅನೇಕ ಬಾರಿ ಮನವಿ ಮಾಡಿತ್ತು. ಸರ್ಕಾರದ ಈ ನಿರ್ಧಾರದಿಂದಾಗಿ, ಬಡ್ತಿಗೆ ಕಾಯುತ್ತಿದ್ದ ಅನೇಕರಿಗೆ ಅವಕಾಶದ ಬಾಗಿಲು ತೆರೆಯಲಿದೆ.

ಪ್ರತಿವರ್ಷ ಮಾ.31ರೊಳಗೆ ಅಂತಿಮ ಪಟ್ಟಿ:

ಇನ್ನು ಮುಂದೆ ಸರ್ಕಾರಿ ನೌಕರರ ಸೇವಾ ಹಿರಿತನದ ಪಟ್ಟಿಗಳನ್ನು ಸಿದ್ಧಪಡಿಸುವಾಗ ಪ್ರತಿ ವರ್ಷ ಡಿಸೆಂಬರ್‌ 31ರ ಮೊದಲು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಬೇಕು. ಆಕ್ಷೇಪಣೆಗಳನ್ನು ಆಹ್ವಾನಿಸಿ, ನಿಯಮದಂತೆ ಪರಿಶೀಲಿಸಿ ಮಾರ್ಚ್‌ 31ರೊಳಗೆ ಅಂತಿಮ ಪಟ್ಟಿ ಪ್ರಕಟಿಸಬೇಕು ಎಂದೂ ಆದೇಶ ಹೇಳಿದೆ.

‌ಆದರೆ, ನೇರ ನೇಮಕಾತಿ ಮುಖಾಂತರ ನೌಕರರು ಮುಂಬಡ್ತಿ, ನಿವೃತ್ತಿ, ರಾಜೀನಾಮೆ ನೀಡಿದಾಗ ಆ ಹುದ್ದೆ ಖಾಲಿಯಾದಲ್ಲಿ ಅದನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಬೇಕು. ಅದೇ ರೀತಿ, ಮುಂಬಡ್ತಿ ಮುಖಾಂತರ ನೇಮಕಾತಿ ಹೊಂದಿದ ನೌಕರರಿಂದ ತೆರವಾಗುವ ಹುದ್ದೆಗಳನ್ನು ಮುಂಬಡ್ತಿಯಿಂದಲೇ ಬಡ್ತಿ ಮಾಡತಕ್ಕದ್ದು. ಪರಿಶಿಷ್ಟ ಜಾತಿ/ ಪಂಗಡ/ ಇತರೆ ಹಿಂದುಳಿದ ಜಾತಿಗೆ ಸೇರಿದ ಬ್ಯಾಕ್‌ ಲಾಗ್‌ ಹುದ್ದೆಗಳಿಗೆ ಹಿಂದೆ ಇರುವ ನಿಯಮದಂತೆಯೇ ಭರ್ತಿ ಮಾಡತಕ್ಕದ್ದು ಎಂದೂ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT