ಬುಧವಾರ, ಮೇ 25, 2022
26 °C

ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಸರ್ಕಾರಕ್ಕಿದೆ: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ಸರ್ಕಾರ ಆರು ತಿಂಗಳ ಅವಧಿಯಲ್ಲಿ ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಭದ್ರ ಬುನಾದಿ ಹಾಕಿದೆ. ಮುಂದೆ ಬರುವ ಎಲ್ಲ ಸವಾಲುಗಳನ್ನೂ ಎದುರಿಸುವ ಆತ್ಮವಿಶ್ವಾಸ ಸರ್ಕಾರಕ್ಕೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನೂತನ ಸರ್ಕಾರ ಆರು ತಿಂಗಳು ಪೂರೈಸುತ್ತಿರುವ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯವು ಈಗ ವಿಚಿತ್ರವಾದ ಸನ್ನಿವೇಶ ಎದುರಿಸುತ್ತಿದೆ. ಕೋವಿಡ್ ನಿಂದ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಜತೆಯಲ್ಲೇ ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರಿಗೆ ನೆರವಾಗಬೇಕಾದ ಸವಾಲು ಸರ್ಕಾರದ ಮುಂದಿದೆ. ಎರಡನ್ನೂ ಸಮರ್ಥವಾಗಿ ಎದುರಿಸುವಲ್ಲಿ ತಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದರು.

'ನಮ್ಮದು ಅಂತಃಕರಣ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ‌ ಮಾಡುವ ಸರ್ಕಾರ. ಆರ್ಥಿಕ ಸಂಕಷ್ಟಗಳ ನಡುವೆಯೂ ಎಲ್ಲ ಜನರಿಗೂ ನೆರವು ನೀಡುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯ ದುಪ್ಪಟ್ಟು ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡಿರುವುದೇ ಇದಕ್ಕೆ ಸಾಕ್ಷಿ' ಎಂದು ಬೊಮ್ಮಾಯಿ ಹೇಳಿದರು.

ಆಡಳಿತದಲ್ಲಿ ಜನರು ಕೇವಲ ಫಲಾನುಭವಿಗಳಾಗಿ ಉಳಿಯಬಾರದು. ಪಾಲುದಾರರೂ ಆಗಬೇಕು. ಆ ದಿಸೆಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಸಾಮಾಜಿಕ ನ್ಯಾಯ, ಸಮಾನತೆ ಎಂಬುದು ಮಾತಿನಲ್ಲೇ ಉಳಿಯಬಾರದು. ಎಲ್ಲ ಹಂತಗಳಲ್ಲೂ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಈ ಸರ್ಕಾರದ ಗುರಿ ಎಂದರು.

ದೇಶದಲ್ಲೇ ಅತ್ಯಧಿಕ ಪ್ರಮಾಣದ ವಿದೇಶಿ‌ ನೇರ ಬಂಡವಾಳ ರಾಜ್ಯಕ್ಕೆ ಹರಿದು ಬರುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯಿಂದ ಈ ಸರ್ಕಾರ ಕೆಲಸ ಮಾಡುತ್ತಿರುವುದರಿಂದ ಹೂಡಿಕೆದಾರರು ವಿಶ್ವಾಸ ಇರಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ತಮ್ಮದು ಒಂದು ಒಳ್ಳೆಯ ತಂಡ. ಆತ್ಮರಕ್ಷಣೆ, ಸಮಾಧಾನದಿಂದ ಆಡಲು ತಿಳಿದಿದೆ. ಅಗತ್ಯ ಇರುವಾಗ ಆಕ್ರಮಣಕಾರಿ ಆಟವನ್ನೂ ಆಡಲು ಸಿದ್ಧ ಎಂದು ಬೊಮ್ಮಾಯಿ ಹೇಳಿದರು.

ಆರು ತಿಂಗಳ ಅವಧಿಯಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಗಳ ಕುರಿತು ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ನಡೆಸಿರುವ ಅಧ್ಯಯನದ ವರದಿಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಬಹುತೇಕ ಸಚಿವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು