ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ದೇವಾಲಯ ಸ್ವತಂತ್ರ, ಅಧಿವೇಶನಕ್ಕೆ ಮುನ್ನ ಕಾನೂನು ಜಾರಿ: ಸಿ.ಎಂ

ಸಿಗಲಿದೆ ಆರ್ಥಿಕ ನಿರ್ವಹಣೆಯ ಸ್ವಾತಂತ್ರ್ಯ l
Last Updated 30 ಡಿಸೆಂಬರ್ 2021, 7:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿಂದೂ ದೇವಾಲಯಗಳ ಮೇಲಿನ ಸರ್ಕಾರದ ಹಿಡಿತವನ್ನು ಸಡಿಲ ಗೊಳಿಸಿ, ಕಾನೂನಿನ ಕಟ್ಟುಪಾಡು ಗಳಿಂದ ಅವುಗಳನ್ನು ಮುಕ್ತಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ.

ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಬುಧವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಸಮಾರೋಪದಲ್ಲಿ ಮಾತನಾಡಿದ ಬೊಮ್ಮಾಯಿ ಈ ಸುಳಿವು ನೀಡಿದ್ದಾರೆ.

‘ಹಿಂದೂ ದೇವಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಇರುವ ಹಲವಾರು ಕಾನೂನಿನ ಕಟ್ಟುಪಾಡು
ಗಳಿದ್ದು, ಬಜೆಟ್‌ ಅಧಿವೇಶನಕ್ಕೂ ಮುನ್ನ ಅವುಗಳನ್ನು ತೆಗೆದುಹಾಕಿ, ಸ್ವತಂತ್ರ ನಿರ್ವಹಣೆಗೆ ಅವಕಾಶ ನೀಡುವ ಕಾನೂನು ಜಾರಿಗೊಳಿಸಲಾಗುವುದು’ ಎಂದು ಬೊಮ್ಮಾಯಿ ಘೋಷಿಸಿ ದರು.

‘ದೇವಾಲಯಗಳಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಅವುಗಳ ಅಭಿವೃದ್ಧಿಗೆ ಬಳಸುವ ಅಧಿಕಾರ ಇಲ್ಲದಿರುವುದನ್ನು ಹಿರಿಯರು ನನ್ನ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುವ ವ್ಯವಸ್ಥೆಯಿಂದ ಅವುಗಳನ್ನು ಮುಕ್ತ ಮಾಡಲಾಗುವುದು’ ಎಂದರು.

‘ಬೇರೆ, ಬೇರೆ ಸಮುದಾಯದ ಪ್ರಾರ್ಥನಾ ಸ್ಥಳಗಳು ಸುರಕ್ಷಿತವಾಗಿವೆ. ಅಲ್ಲಿ ಎಲ್ಲ ರೀತಿಯ ಆಚರಣೆಗೆ
ಸ್ವಾತಂತ್ರ್ಯವಿದೆ. ಅಂತಹ ಸ್ವಾತಂತ್ರ್ಯವನ್ನು ಹಿಂದೂ ದೇವಾಲಯಗಳಿಗೂ ನೀಡಲು ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಇಂತಹ ವಿಷಯದಲ್ಲಿ ವೈಚಾರಿಕ ಬದ್ಧತೆ ಹೊಂದಿದೆ’ ಎಂದೂ ಅವರು ಹೇಳಿದರು.

’ಪಕ್ಷಕ್ಕೆ ಯಡಿಯೂರಪ್ಪ ಅವರ ಸುದೀರ್ಘ ನಾಯಕತ್ವ ಸಿಕ್ಕಿದೆ. ಅವರ ನಂತರ ಅಧಿಕಾರ ನಡೆಸುವಾಗ ಸಂದರ್ಭ ದಲ್ಲಿ ಹಲವಾರು ಪ್ರಶ್ನೆಗಳು ಉದ್ಭವವಾಗುತ್ತವೆ. ಅವುಗಳಿಗೆಲ್ಲ ಕಾರ್ಯ ದಕ್ಷತೆ ಯಿಂದ ನಿರ್ಣಯ ಕೈಗೊಂಡು, ಕಾಲಕಾಲಕ್ಕೆ ಅವುಗಳನ್ನು ಜನ ಸಮೂಹಕ್ಕೆ ತಿಳಿಸುತ್ತಾ ಉತ್ತರ ಕೊಡಬೇಕಾಗುತ್ತದೆ‘ ಎಂದು ಹೇಳಿದರು.

‘ಮಾತುಗಳಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಕ್ರಿಯಾಶೀಲತೆಯಿಂದ ಮಾತ್ರ ಸಾಧ್ಯ. ಇಲ್ಲದಿದ್ದರೆ, ಶಬ್ದ, ಶಬ್ದವಾಗಿ ಉಳಿಯುತ್ತದೆ.ನಾನು ತಪ್ಪು ಮಾಡಿದರೆ, ತಿದ್ದುವ ಅಧಿಕಾರ ನಿಮಗಿದೆ. ನನಗೆ ಯಾವುದೇಪ್ರತಿಷ್ಠೆ ಇಲ್ಲ. ಎಲ್ಲವೂ ಬಿಜೆಪಿಯ ಪ್ರತಿಷ್ಠೆ. ಅದನ್ನು ಕಾಪಾಡುವ ಕೆಲಸ ಮಾಡಬೇಕಿದೆ’ ಎಂದರು.

‘ಎಲ್ಲ ಕೆಲಸಗಳನ್ನು ಹೇಗೆ ಮಾಡಲಾಗುವುದು ಎಂಬ ಪ್ರಶ್ನೆ ಬೇಡ. ಅದಕ್ಕೊಂದು ಯೋಜನೆ ರೂಪಿಸಲಾಗಿದೆ. ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಜನರ ಮುಂದೆ ಸಾಧನೆಗಳ ಪಟ್ಟಿ (ರಿಪೋರ್ಟ್ ಕಾರ್ಡ್) ಮಂಡಿಸಿ ಮತ ಕೇಳಲಾಗುವುದು. 2023ರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಿವಾರದ ಆಗ್ರಹ: ಹಿಂದೂ ದೇವಾಲಯಗಳ ಮೇಲೆ ಇರುವ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಿ, ಅವುಗಳನ್ನು ಮುಕ್ತಗೊ
ಳಿಸಬೇಕೆಂದು ಸಂಘಪರಿವಾರದ ಸಹಭಾಗಿ ಸಂಘಟನೆಗಳಾದ ಆರೆಸ್ಸೆಸ್‌, ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತಿತರ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿದ್ದವು. ಹಿಂದೂ ದೇವಾಲಯಗಳಲ್ಲಿ ಭಕ್ತರು ಹಾಕುವ ಕಾಣಿಕೆಗಳನ್ನು ಮುಜರಾಯಿ ಇಲಾಖೆ ಮೂಲಕ ಸರ್ಕಾರವೇ ಪಡೆದು ಅನ್ಯ ಉದ್ದೇಶಕ್ಕೆ ಬಳಸುತ್ತಿದೆ. ಅದರ ಬದಲು, ಆಯಾ ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಸಂಪನ್ಮೂಲವನ್ನು ದೇವಾಲಯಗಳ ಅಭಿವೃದ್ಧಿ ಮತ್ತು ‘ಹಿಂದೂ’ಗಳ ಕಲ್ಯಾಣಕ್ಕೆ ಬಳಸಬೇಕು ಎಂಬುದು ಈ ಸಂಘಟನೆಗಳ ಒತ್ತಾಯವಾಗಿತ್ತು. ಅದನ್ನು ಈಗ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ.

ಮತಾಂತರ ನಿಷೇಧ ಜಾರಿಗೆ ಕಾರ್ಯಪಡೆ

‘ಮತಾಂತರ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ವಿಶೇಷ ಕಾರ್ಯಪಡೆ ರಚಿಸ ಲಾಗು ವುದು’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಮತಾಂತರ ನಿಷೇಧ ಕಾಯ್ದೆ ರೂಪಿಸುವುದಷ್ಟೇ ಅಲ್ಲ, ಅದರ ಅನು ಷ್ಠಾನಕ್ಕೂ ಬದ್ಧವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದಾಗಲೂ ಇಂತಹದೇ ವಿರೋಧ ಬಂದಿತ್ತು. ಈಗ ಯಾವ ತೊಂದರೆಯಾಗಿದೆ? ಗೋ ರಕ್ಷಣೆಗೆ ಹೆಚ್ಚಿನ ಅನುದಾನ ನೀಡಲಾಗುವುದು’ ಎಂದು ಅವರು ಹೇಳಿದರು.

‌ಬಜೆಟ್‌ಗೆ ಹೊಸ ಸ್ವರೂಪ: ಇಲ್ಲಿಯವರೆಗ ಬಜೆಟ್‌ ಅನ್ನು ಜನ ಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಬಾರಿ ಬಜೆಟ್‌ಗೆ ಹೊಸ ರೂಪ ನೀಡಲಾಗುವುದು. ಬಜೆಟ್‌ ಬಹಳ ಭಿನ್ನವಾಗಿರಲಿದೆ ಎಂದು ಬೊಮ್ಮಾಯಿ ಹೇಳಿದರು.

ಅಂಜನಾದ್ರಿ ಬೆಟ್ಟದಲ್ಲಿ ರಾಮ ಮಂದಿರ

ಕೊಪ್ಪಳ ಜಿಲ್ಲೆಯ ಆನೆಗೊಂದಿಯ ‌ಅಂಜನಾದ್ರಿ‌ ಬೆಟ್ಟದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಅಂಜನಾದ್ರಿ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿ ಪಡಿ ಸಲಾಗುವುದು. ಅಲ್ಲಿ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಅಂಜನಾದ್ರಿ ಬೆಟ್ಟವು ಆಂಜನೇಯನ ಜನ್ಮಸ್ಥಳ ಎಂದು ಸಂಘ ಪರಿ ವಾರದ ಸಂಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಪ್ರತಿಪಾದಿಸುತ್ತಾ ಬಂದಿವೆ.

‘ಪಿಸುಮಾತಿನ ಆಂದೋಲನ ಮಣಿಸೋಣ’

ಬೆಂಗಳೂರು: ‘ನಕಾರಾತ್ಮಕ ಪಿಸುಮಾತಿನ ಆಂದೋಲನ’ ನಡೆಸುತ್ತಿರುವವರನ್ನು ಮಣಿಸಲು ದೇಶದ ಹಿತ ಚಿಂತನೆ ನಡೆಸುವ ಮಾಧ್ಯಮಗಳ ನೆರವು ಪಡೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ‘ಪ್ರಚಲಿತ ಭಾರತದಲ್ಲಿ ನಮಗಿರುವ ರಾಜಕೀಯ ಸವಾಲುಗಳು ಮತ್ತು ಅದಕ್ಕೆ ಪರಿಹಾರ’ ಕುರಿತು ಬುಧವಾರ ಅವರು ಮಾತನಾಡಿದರು.

‘ದೇಶದಲ್ಲಿ ಸುಳ್ಳು ಮಾಹಿತಿಗಳ ನಕಾರಾತ್ಮಕ ಪಿಸುಮಾತಿನ ಆಂದೋಲನ ನಡೆದಿದೆ. ಇದನ್ನು ಕಡೆಗಣಿಸುವಂತಿಲ್ಲ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ, ಎಲ್ಲ ಮಾಧ್ಯಮಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರೂ, ಪಿಸುಮಾತಿನ ಆಂದೋಲನದಿಂದ ಸೋತಿದ್ದಾಗಿ ಹೇಳಿಕೊಂಡಿದ್ದರು’ ಎಂದರು.

ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕೌರವರ ಬಳಿ 11 ಅಕ್ಷೋಹಿಣಿ ಸೈನ್ಯ ಇತ್ತು. ಪಾಂಡವರ ಬಳಿ 7 ಅಕ್ಷೋಹಿಣಿ ಸೈನ್ಯವಿತ್ತು. ಕೌರವರ ಎಲ್ಲ ತಂತ್ರಗಳಿಗೆ ಪ್ರತಿ ತಂತ್ರ ಹೂಡಿ ಪಾಂಡವರು ಯುದ್ಧವನ್ನು ಗೆದ್ದರು. ಕರ್ನಾಟಕವನ್ನು ಐದು ಭಾಗವಾಗಿ ವಿಂಗಡಿಸಿದ, ಆಯಾ ಭಾಗಕ್ಕೆ ಸರಿಯಾದ ರೀತಿಯಲ್ಲಿ ರಣನೀತಿಗಳನ್ನು ರೂಪಿಸಬೇಕು. ಕರಾವಳಿ, ಹಳೇ ಮೈಸೂರು, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಬೆಂಗಳೂರು ಮಹಾನಗರ ಎಲ್ಲದಕ್ಕೂ ವಿಭಿನ್ನ ಕಾರ್ಯತಂತ್ರ ರೂಪಿಸಬೇಕು ಎಂದು ಸಲಹೆ ನೀಡಿದರು.

ಪ್ರಾಥಮಿಕ ಶಿಕ್ಷಣದಲ್ಲೂ ಎನ್‌ಇಪಿ ಜಾರಿ: ಬೊಮ್ಮಾಯಿ

ಹುಬ್ಬಳ್ಳಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿಯೂ ಮುಂದಿನ ಏಪ್ರಿಲ್‌ನಿಂದ ಹೊಸ ಶಿಕ್ಷಣ ನೀತಿ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊಸ ಶಿಕ್ಷಣ ನೀತಿ ಜಾರಿಗೊಳಿಸುವುದು ಅಷ್ಟ ಸುಲಭವಾಗಿರಲಿಲ್ಲ. ಧೈರ್ಯದಿಂದ ಜಾರಿಗೊಳಿಸುವ ಮೂಲಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದೇವೆ ಎಂದರು.

ನಮ್ಮ ನಾಯಕ ನರೇಂದ್ರ ಮೋದಿ ಹೊಸ ಶಿಕ್ಷಣ ನೀತಿ ತಂದಿದ್ದಾರೆ. ಸ್ಥಾಪಿತ ಶಕ್ತಿಗಳು ಬದಲಾವಣೆಗೆ ವಿರೋಧ ಮಾಡುವುದು ಸಹಜ. ಹಾಗೆಂದು ಹಳೇ ಆಲದಮರಕ್ಕೆ ನೇಣು ಹಾಕಿಕೊಳ್ಳುವ ಬದಲು ಮಕ್ಕಳಿಗೆ ನೆರಳು, ಫಲ ಕೊಡುವ ಹೊಸ ಗಿಡ ನೆಡುವ ಕೆಲಸ ಮಾಡಬೇಕಿದೆ. ಅದನ್ನು ಮಾಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT